ಶಿರಾ
ರಾಜ್ಯದಲ್ಲಿರುವ 1500ಕ್ಕೂ ಹೆಚ್ಚು ಲಂಬಾಣಿ ತಾಂಡಾಗಳು ಈವರೆಗೂ ಕಂದಾಯ ಗ್ರಾಮಗಳಾಗಿ ಪರಿವರ್ತನೆಗೊಂಡಿಲ್ಲ. ಸದರಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಿದ್ದು, ಅದು ಸರ್ಕಾರದ ಗುರಿಯೂ ಹೌದು ಎಂದು ಕರ್ನಾಟಕ ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ರಾಜೀವ್ ತಿಳಿಸಿದರು.
ತಾಲ್ಲೂಕಿನ ಮಾನಂಗಿ ತಾಂಡಾದಲ್ಲಿ ತಾಂಡಾ ಅಭಿವೃದ್ಧಿ ನಿಗಮದಿಂದ ಕೈಗೊಳ್ಳಲಾಗಿದ್ದ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ರಾಜ್ಯದಲ್ಲಿ ಬಿ.ಜೆ.ಪಿ. ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿವಿಧ ಯೋಜನೆಗಳಡಿಯಲ್ಲಿ ದಲಿತ, ಹಿಂದುಳಿದ ವರ್ಗಗಳ ಆರ್ಥಿಕ ಸಬಲತೆಗೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಮೊಟ್ಟ ಮೊದಲು ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ತಾಂಡಾಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದರು. ತಾಂಡಾಳ ಸಂಪರ್ಕ ರಸ್ತೆಗಳ ಅಭಿವೃದ್ಧಿ, ಸೇವಾಲಾಲ್ ಸಮುದಾಯ ಭವನಗಳನ್ನು ನಿರ್ಮಿಸುವ ಮೂಲಕ ತಾಂಡಾಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದರು ಎಂದರು.
ಶಿರಾ ಶಾಸಕರ ನಿಧನದಿಂದ ಇದೀಗ ಉಪ ಚುನಾವಣೆಯು ನಡೆಯಲಿದ್ದು, ಶಿರಾ ಕ್ಷೇತ್ರ ಇಡೀ ದೇಶದ ಗಮನ ಸೆಳೆಯುವಂತಹ ಚುನಾವಣೆಯನ್ನು ಎದುರಿಸಲಿದೆ. ಶಿರಾ ಕ್ಷೇತ್ರದಲ್ಲಿ ಬಿ.ಜೆ.ಪಿ. ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಲುವಾಗಿ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ನಮ್ಮ ಬಿ.ಜೆ.ಪಿ. ಮುಖಂಡರು ಮತದಾರರ ಮನೆ ಮನೆಗಳಿಗೆ ತಲುಪಿಸುವ ಕೆಲಸವನ್ನು ಬೂತ್ ಮಟ್ಟದ ಸಭೆಗಳಲ್ಲಿ ಮಾಡುತ್ತಿದ್ದಾರೆ. ಈ ತಾಲ್ಲೂಕಿನಲ್ಲಿ 30 ತಾಂಡಾಗಳಿದ್ದು 11,000 ಲಂಬಾಣಿ ಮತಗಳಿವೆ ಎಂದರು.
ಜಿಲ್ಲಾ ಬಿ.ಜೆ.ಪಿ. ಪ್ರ. ಕಾರ್ಯದರ್ಶಿ ಬಿ.ಕೆ.ಮಂಜುನಾಥ್, ನಗರ ಬಿ.ಜೆ.ಪಿ. ಘಟಕದ ಅಧ್ಯಕ್ಷ ವಿಜಯರಾಜ್, ಮಾಜಿ ಅಧ್ಯಕ್ಷ ಬಿ.ಗೋವಿಂದಪ್ಪ, ಕರ್ನಾಟಕ ಬಂಜಾರ ಮಹಿಳಾ ಸಭಾದ ಸಂಸ್ಥಾಪಕ ಅಧ್ಯಕ್ಷೆ ಶಾಂತಾ ಜಯರಾಮ್, ಲಕ್ಷ್ಮೀ ನಾರಾಯಣ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
