ಶಿರಾ:
ಕಳೆದ 50 ವರ್ಷಗಳಿಂದಲೂ ಶಿರಾ ನಗರದ ಬೈಪಾಸ್ ರಸ್ತೆಯಲ್ಲಿರುವ ದಾಸಪ್ಪಾಚಾರ್ ಮಠವನ್ನು ಅಭಿವೃದ್ಧಿಪಡಿಸಿಕೊಂಡು ಶ್ರೀಮಠದಲ್ಲಿ ವಿವಿಧ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದ್ದು ಇದೀಗ ಬೆಂಗಳೂರಿನ ಟ್ರಸ್ಟ್‍ವೊಂದು ಏಕಾಏಕಿ ಮಠಕ್ಕೆ ಪ್ರವೇಶ ಮಾಡಲು ಸಂಚು ನಡೆಸಿದ್ದು ಇದು ಭೂಕಬಳಿಕೆ ಯತ್ನವಾಗಿದೆ ಎಂದು ತಾಲ್ಲೂಕು ದಾಸಪ್ಪಾಚಾರ್ ಸೇವಾ ಟ್ರಸ್ಟ್‍ನ ಅಧ್ಯಕ್ಷ ಪುಟ್ಟಾಚಾರ್, ವಿಶ್ವಕರ್ಮ ಸಮಾಜದ ಅಧ್ಯಕ್ಷ ನಟರಾಜಾಚಾರ್ ಹಾಗೂ ಕಾರ್ಯದರ್ಶಿ ಕೃಷ್ಣಮೂರ್ತಾಚಾರ್ ಆರೋಪಿಸಿದರು.
ನಗರದ ಶ್ರೀ ಕಾಳಿಕಾಂಭ ದೇವಸ್ಥಾನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿಶ್ವಕರ್ಮ ಸಮಾಜದ ಅಧ್ಯಕ್ಷ ನಟರಾಜಾಚಾರ್ ಮಾತನಾಡಿ ಕಳೆದ 50 ವರ್ಷಗಳ ಹಿಂದಿನಿಂದಲೂ ಶಿರಾ ನಗರದ ಬೈಪಾಸ್ ರಸ್ತೆಯಲ್ಲಿದ್ದ ದಾಸಪ್ಪಾಚಾರ್ ಮಠದ ಸ.ನಂ.157 ರ ಆಸ್ತಿಯನ್ನು ಕಾಪಾಡಿಕೊಂಡು ಬಂದಿದ್ದು ಸದರಿ ಮಠದಲ್ಲಿ ವಾರ್ಷಿಕೋತ್ಸವಗಳು, ಅನ್ನ ಸಂತರ್ಪಣೆ, ರಕ್ತದಾನ ಶಿಬಿರಗಳು, ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳ ವಿತರಣೇಯೂ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದ್ದೇವೆ ಎಂದರು.
ದಾಸಪ್ಪಾಚಾರ್ ಮಠದ ಹೆಸರಲ್ಲಿ ಸೇವಾ ಟ್ರಸ್ಟ್ ಕೂಡಾ ಸ್ಥಾಪನೆ ಮಾಡಿ ಈ ಸೇವಾ ಟ್ರಸ್ಟ್‍ಗೆ 157ರ ಸ.ನಂ. ಆಸ್ತಿಯನ್ನು ಅಭಿವೃದ್ಧಿಪಡಿಸಲು ಸರ್ಕಾರ ಮಂಜೂರು ಕೂಡಾ ಮಾಡಿದೆ. ಇದೀಗ ಬೆಂಗಳೂರಿನ ಶ್ರೀಮತಿ ಕೆಂಪಮ್ಮ ಶ್ರೀ ಓಬಳಾಚಾರ್ಯ ಚಾರಿಟಬಲ್ ಟ್ರಸ್ಟ್‍ನವರು ಕಾರ್ಯಕ್ರಮವನ್ನು ನಡೆಸುವ ನೆಪದಲ್ಲಿ ನ:17 ಮತ್ತು 18 ರಂದು ಅಕ್ರಮ ಪ್ರವೇಶಕ್ಕೆ ಸಂಚು ನಡೆಸಿ ಭೂಕಬಳಿಕೆಯ ಯತ್ನ ನಡೆಸಿದ್ದಾರೆ ಎಂದು ನಟರಾಜಾಚಾರ್ ಆರೋಪಿಸಿದರು.
ದಾಸಪ್ಪಾಚಾರ್ ಸೇವಾ ಟ್ರಸ್ಟ್ ಅಧ್ಯಕ್ಷ ಪುಟ್ಟಾಚಾರ್ ಮಾತನಾಡಿ ಕಳೆದ 50 ವರ್ಷಗಳಿಂದ ದಾಸಪ್ಪಾಚಾರ್ ಮಠದ ಕಡೆ ತಲೆ ಹಾಕಿಯೂ ಮಲಗದ ಬೆಂಗಳೂರಿನ ಟ್ರಸ್ಟ್‍ವೊಂದು ಶಿರಾ ನಗರಕ್ಕೆ ಬಮದು ನಮ್ಮದೇ ಮಠದಲ್ಲಿ ಕಾರ್ಯಕ್ರಮ ನಡೆಸಲು ನಡೆಸಿರುವ ಉದ್ದೇಶದ ಹಿಂದೆ ಮಠದ ಆಸ್ತಿ ಕಬಳಿಕೆಯ ಸಂಚು ನಡೆದಿದೆ ಎಂದರು.
ಶ್ರೀಮಠಕ್ಕೆ ಬಂದು ಪೂಜೆ ಮಾಡಿಕೊಂಡು ಹೋಗಲು ನಮ್ಮ ಯಾವುದೇ ಅಡ್ಡಿ ಇರುವುದಿಲ್ಲ ಆದರೆ ಏಕಾಏಕಿ ಮಠಕ್ಕೆ ಬಂದು ಕಾರ್ಯಕ್ರಮ ನಡೆಸಿ ಸಮಾಜವನ್ನು ಒಡೆಯುವ ಕೆಲಸ ಮಾಡಿದಲ್ಲಿ ನಮ್ಮ ವ್ಯಾಪಕ ಖಂಡನೆ ಇದೆ. ಈ ಬಗ್ಗೆ ಆರಕ್ಷಕ ಇಲಾಖೆಗೂ ದೂರು ನೀಡಲಾಗುವುದು ಎಂದರು.
ಕಾರ್ಯದರ್ಶಿ ಕೃಷ್ಣಕುಮಾರ್ ಬರಗೂರು ಮಾತನಾಡಿ ಇಲ್ಲಿರುವ ಸಮಾಧಿಗೆ ಕಳೆದ 50 ವರ್ಷಗಳಿಂದಲೂ ಆರಾಧನಾ ಮಹೋತ್ಸವವನ್ನು ನಡೆಸಲಾಗುತ್ತಾ ಬರುತ್ತಿದ್ದು ತಾಲ್ಲೂಕಿನ ಇಡೀ ವಿಶ್ವಕರ್ಮ ಸಮಾಜ ಈ ಮಠದ ರಕ್ಷಣೆಗೆ ನಿಂತಿದೆ. ಸ್ಥಳೀಯ ಸಂಘಟಕರನ್ನೂ ಬಿಟ್ಟು ಬೇರೆ ಯಾವುದೋ ಟ್ರಸ್ಟ್‍ನವರು ಇಲ್ಲಿಗೆ ಬಂದು ಕಾರ್ಯಕ್ರಮ ನಡೆಸಲು ನಡೆಸಿರುವ ತಂತ್ರದ ಹಿಂದೆ ಆಸ್ತಿ ಕಬಳಿಕೆಯ ಸಂಚು ಇದೆ. ಇದಕ್ಕೆ ಸಮಾಜ ಖಂಡಿಸುತ್ತದೆ ಎಂದು ಆರೋಪಿಸಿದರು.
ನರಸಿಂಹಾಚಾರ್, ಶಶಿಧರಾಚಾರ್, ವಿಶ್ವಕರ್ಮ ಸಮಾಜದ ಯುವ ಘಟಕದ ಅಧ್ಯಕ್ಷ ಅನಿಲ್‍ಕುಮಾರ್, ಸುನಿಲ್‍ಕುಮಾರ್, ವೆಂಕಟೇಶ್ವರಾಚಾರ್, ರುದ್ರಾಚಾರ್ ಸೇರಿದಂತೆ ಸಮಾಜದ ಅನೇಕ ಪ್ರಮುಖರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
