ದಾವಣಗೆರೆ:
ವಾರ್ಷಿಕ ವಹಿವಾಟಿನ ನಮೂನೆ 9 ಮತ್ತು 9ಸಿ ಸಲ್ಲಿಸಲು 2019ರ ಮಾರ್ಚ್ 31ರ ವರೆಗೆ ಕಾಲಾವಕಾಶ ನೀಡಬೇಕೆಂದು ಜಿಲ್ಲಾ ತೆರಿಗೆಗಾರರ ಸಂಘದ ಅಧ್ಯಕ್ಷ ಜೆಂಬಗಿ ರಾಧೇಶ್ ಕೇಂದ್ರ ಸರ್ಕಾರ ಹಾಗೂ ಜಿಎಸ್‍ಟಿ ಕೌನ್ಸಿಲ್‍ಗೆ ಒತ್ತಾಯಿಸಿದ್ದಾರೆ.
ನಗರದ ಪಿಜೆ ಬಡಾವಣೆಯ ಚೇತನಾ ಹೋಟೆಲ್ ಎದುರಿನ ಜೆಪಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ತೆರಿಗೆದಾರರ ಸಂಘದ ವತಿಯಿಂದ ಜಿಎಸ್‍ಟಿಯಲ್ಲಿ ವಾರ್ಷಿಕ ವಹಿವಾಟು ಮತ್ತು ಆಡಿಟ್ ವರದಿಯನ್ನು ಸಲ್ಲಿಸುವುದರ ಬಗ್ಗೆ ತೆರಿಗೆ ಸಲಹೆಗಾರರು ಮತ್ತು ವ್ಯಾಪಾರಸ್ಥರಿಗಾಗಿ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ವರೆಗೂ ಜಿಎಸ್‍ಟಿಯಲ್ಲಿ ನಮೂನೆ 9 ಮತ್ತು ನಮೂನೆ 9ಸಿ ಅಳವಡಿಸಿರಲಿಲ್ಲ. ಇತ್ತೀಚೆಗಷ್ಟೇ ಈ ನಮೂನೆಗಳನ್ನು ಅಳವಡಿಸಲಾಗಿದ್ದು, ಈಗ ವ್ಯಾಪಾರಸ್ಥರ ವಹಿವಾಟಿನ ವಿವರವನ್ನು ಸಂಗ್ರಹಿಸುವುದು ಕಷ್ಟ ಸಾಧ್ಯವಾಗಲಿದೆ. ಆದ್ದರಿಂದ ಕೇಂದ್ರ ಸರ್ಕಾರ ಹಾಗೂ ಜಿಎಸ್‍ಟಿ ಕೌನ್ಸಿಲ್ 2019ರ ಮಾರ್ಚ್ 31ರ ವರೆಗೆ ವಾರ್ಷಿಕ ವಹಿವಾಟಿನ ನಮೂನೆ 9 ಮತ್ತು 9ಸಿ ಸಲ್ಲಿಸಲು ಕಾಲಾವಕಾಶ ನೀಡಬೇಕೆಂದು ಆಗ್ರಹಿಸಿದರು.
ತರಬೇತಿ ಕಾರ್ಯಕ್ರಮವನ್ನು ಬೆಂಗಳೂರಿನ ಸನ್ನದು ಲೆಕ್ಕ ಪರಿಶೋಧಕರಾದ ಭುವನೇಶ್ವರಿ ಎಸ್. ಉದ್ಘಾಟಿಸಿ ಮಾತನಾಡಿದರು.
ತರಬೇತಿ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ, ಹಾಸನ, ಹಾವೇರಿ, ಸಂಡೂರು, ಹಿರಿಯೂರು, ಚಳ್ಳಕೆರೆ, ದಾವಣಗೆರೆ, ಹರಿಹರ ಹಾಗೂ ಶಿವಮೊಗ್ಗ ಸೇರಿದಂತೆ ಇತರೆ ಕಡೆಯ ಸುಮಾರು 200ಕ್ಕೂ ಹೆಚ್ಚು ಜನ ತೆರಿಗೆ ಸಲಹೆಗಾರರು ಹಾಗೂ ವ್ಯಾಪಾರಸ್ಥರು ಭಾಗವಹಿಸಿದ್ದರು.
ಜಿಲ್ಲಾ ತೆರಿಗೆಗಾರರ ಸಂಘದ ಕಾರ್ಯದರ್ಶಿ ಡಿ.ಎಂ.ರೇವಣಸಿದ್ದಯ್ಯ ಸ್ವಾಗತಿಸಿದರು. ಲೋಕೇಶ್ ಅತಿಥಿಗಳನ್ನು ಪರಿಚಯಿಸಿದರು. ಉಪಾಧ್ಯಕ್ಷ ಮಂಜುನಾಥ್ ಹೆಚ್.ಎಸ್. ವಂದಿಸಿದರು.
ಈ ಸಂದರ್ಭದಲ್ಲಿ ಸಹ ಕಾರ್ಯದರ್ಶಿ ಮಹಾಂತೇಶ್.ಸಿ, ಖಜಾಂಚಿ ಜಗದೀಶ್ ಜಿ.ಎಸ್, ಬಿ.ಜಿ.ಬಸವರಾಜಪ್ಪ, ಸಿ.ವಿನಯ್, ಸುಬ್ರಹ್ಮಣ್ಯ ಆರ್.ಎಸ್, ಹೆಚ್.ಎಸ್.ನಾಗರಾಜ ರಾವ್, ಕುಮಾರಸ್ವಾಮಿ, ವಿನಯ್‍ಕುಮಾರ್, ಸಂತೋಷಕುಮಾರ್, ರವಿಕುಮಾರ್, ಮುಸ್ತಾಫಾ, ಕೆ.ಎಸ್.ವೀರಣ್ಣ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ