ಶಿರಾ:
ಶಿರಾ ನಗರ ಠಾಣೆಯ ಆರಕ್ಷಕರು ವಕೀಲರೊಬ್ಬರ ಮೇಲೆ ನಡೆದುಕೊಮಡ ಅಮಾನವೀಯ ವರ್ತನೆಯನ್ನು ಖಂಡಿಸಿ ಜುಲೈ 1 ರಿಂದ ವಕೀಲರ ಸಂಘ ನ್ಯಾಯಾಲಯದ ಆವರಣದಲ್ಲಿ ನಡೆಸುತ್ತಿರುವ ಅನಿರ್ಧಿಷ್ಟ ಕಾಲದ ಪ್ರತಿಭಟನಾ ಧರಣಿಯು ಬುಧವಾರದಂದೂ ಮುಂದುವರೆದಿದೆ.
ಜುಲೈ 25 ರಂದು ಶಿರಾ ನಗರ ಠಾಣೆಯ ಪೊಲೀಸ್ ಪೇದೆ ರಂಗನಾಥ್ ಅವರು ವಕೀಲ ರವೀಶ್ ಎಂಬುವರನ್ನು ಅವಾಚ್ಯ ಶಬ್ದಗಳಿಂದ ಠಾಣೆಯಲ್ಲಿ ನಿಂಧಿಸಿ ಅಮಾನವೀಯವಾಗಿ ನಡೆದುಕೊಂಡ ಹಿನ್ನೆಲೆಯಲ್ಲಿ ತಾ. ವಕೀಲರ ಸಂಘವು ಜುಲೈ 2 ರಂದು ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಬಟನೆ ನಡೆಸಿ ಆರಕ್ಷಕ ರಂಗನಾಥ್ ಅವರನ್ನು ಅಮಾನತ್ತುಗೊಳಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರವನ್ನೂ ಸಲ್ಲಿಸಿತ್ತು.
ಆರಕ್ಷಕ ಅಧಿಕಾರಿಗಳು ಓರ್ವ ತಪ್ಪಿತಸ್ಥ ಆರಕ್ಷಕರನ್ನು ಅಮಾನತ್ತುಗೊಳಿಸಿದೆ ಇಲ್ಲದೆ ದೋರದ ಠಾಣೆಗೆ ವರ್ಗಾವಣೆ ಮಾಡದೆ ಶಿರಾ ಸಮೀಪದ ಶಿರಾದಿಂದ ಕೆಲವೇ ಕಿ.ಮೀ. ದೂರವಿರುವ ಬಡವನಹಳ್ಳಿ ಠಾಣೆಗೆ ವರ್ಗಾಯಿಸಿ ಪೇದೆಯ ಪರವಾಗಿ ವಕಾಲತ್ತು ವಹಿಸಿಕೊಂಡಿದೆ ಎಮದು ಆರೋಪಿಸಿ ವಕೀಲರ ಸಂಘವು ಎರಡನೇ ದಿನವೂ ಪ್ರತಿಭಟನೆಯನ್ನು ಮುಂದುವರೆಸಿತು.ವಕೀಲರ ಸಂಘದ ಪ್ರತಿಭಟನಾ ಧರಣಿಯ ಮೊದಲ ದಿನದಂದು ಕೂಡಾ ಪಾಲ್ಗೊಂಡಿದ್ದ ಶಾಸಕರು ಹಾಗೂ ವಕೀಲರೂ ಆದ ಬಿ.ಸತ್ಯನಾರಾಯಣ್ ವಕೀಲರ ಎರಡನೇ ದಿನ ಪ್ರತಿಭಟನೆಯಲ್ಲೂ ಪಾಲ್ಗೊಂಡರು.
ನಾನು ಕೇವಲ ಓರ್ವ ಶಾಸಕನಲ್ಲ, ನಾನು ಶಾಸಕನಾಗುವ ಮುನ್ನ ಶಿರಾ ವಕೀಲರ ಸಂಘದ ಸದಸ್ಯನೂ ಆಗಿದ್ದು ಈಗಲೂ ಸಂಘದ ಸದಸ್ಯತ್ವದಲ್ಲಿದ್ದೇನೆ. ಸಹೋಧ್ಯೋಗಿಗಳಿಗೆ ತೊಂದರೆಯಾದಾಗ ಭಾಗಿಯಾಗುವುದು ನನ್ನ ಕರ್ತವ್ಯ ಹೀಗಾಗಿ ನಾನೂ ಕೂಡಾ ವಕೀಲರ ಬೆಂಬಲಕ್ಕೆ ನಿಂತಿದ್ದೇನೆ ಎಂದರು.
ಕಳೆದ ಎರಡು ದಿನದಿಂದಲೂ ತಪ್ಪಿತಸ್ಥ ಪೇದೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಓರ್ವ ಶಾಸಕನಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಕ್ರಮ ಕೈಗೊಳ್ಳುವಂತೆ ನಾನೂ ಕೂಡಾ ಒತ್ತಾಯಿಸಿದ್ದೇನೆ ಆದರೂ ಓರ್ವ ಪೇದೆಯ ಬೆಂಬಲಕ್ಕೆ ಅಧಿಕಾರಿಗಳೇ ನಿಂತಿರುವುದು ನ್ಯಾಯವಲ್ಲ. ತಪ್ಪಿಸ್ಥ ಪೇದೆಯನ್ನು ಸಮೀಪದ ಬಡವನಹಳ್ಳಿ ಠಾಣೆಗೆ ವರ್ಗಾಯಿಸಿ ಕೈತೊಳೆದುಕೊಳ್ಳಲಾಗಿದೆ ಎಂದು ಶಾಸಕ ಸತ್ಯನಾರಾಯಣ್ ಆರೋಪಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಜಿಲ್ಲಾ ಬಿ.ಜೆ.ಪಿ. ಉಪಾಧ್ಯಕ್ಷ ಬಿ.ಕೆ.ಮಂಜುನಾಥ್ ಮಾತನಾಡಿ ತಮ್ಮ ಪರವಾದ ಕಕ್ಷಿದಾರನ ಪರ ಹೇಳಿಕೆಯೊಂದಕ್ಕೆ ಸಹಿ ಹಾಕಿಸಲು ಠಾಣೆಗೆ ಹೋಗಿದ್ದ ವಕೀಲರೊಬ್ಬರೊಬ್ಬರ ಮೇಲೆ ಅವಾಚ್ಯ ಶಬ್ದಗಳಿಂದ ನಿಂಧಿಸಿದ ಪೇದೆಯ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಸಿ.ಹೆಚ್.ಜಗದೀಶ್ ಮಾತನಾಡಿ ತಪ್ಪಿತಸ್ಥ ಪೇದೆಯನ್ನು ಅಮಾನತ್ತುಗೊಳಿಸುವವರೆಗೂ ನಮ್ಮ ಸಂಘದ ಪ್ರತಿಭಟನಾ ಧರಣಿ ಮುಂದುವರೆಯುತ್ತದೆ. ಕ್ರಮ ಕೈಗೊಳ್ಳುವುದು ತಡವಾದರೆ ಜಿಲ್ಲಾಧ್ಯಂತ ವಕೀಲರ ಸಂಘಗಳು ಪ್ರತಿಭಟನೆ ನಡೆಸಲಿವೆ ಎಂದರು.ಉಪಾಧ್ಯಕ್ಷ ಎಸ್.ಸಿ.ಮಂಜುನಾಥ್, ಕಾರ್ಯದರ್ಶಿ ಸಣ್ಣ ಕರೇಗೌಡ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಹಿರಿಯ ವಕೀಲರು, ಸಂಘದ ಸದಸ್ಯರು ಹಾಜರಿದ್ದರು.