ಚಿತ್ರದುರ್ಗ:
ಕೇಂದ್ರ ಸರ್ಕಾರದ ಪೌರತ್ವ ಕಾಯಿದೆ ತಿದ್ದುಪಡಿ ವಿರೋಧಿಸಿ ಜಿಲ್ಲಾ ಮುಸ್ಲಿಂ ಅಡ್ವೊಕೇಟ್ಸ್ ವೆಲ್‍ಫೇರ್ ಟ್ರಸ್ಟ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ನಡೆಯುತ್ತಿರುವ ಧರಣಿಯ ಏಳನೆ ದಿನದಂದು ಅಪಾರ ಸಂಖ್ಯೆಯ ಮುಸ್ಲಿಂ ಮಹಿಳೆಯರು ಪಾಲ್ಗೊಂಡು ಸಿಎಎ, ಎನ್‍ಆರ್‍ಸಿ, ಎನ್‍ಪಿಆರ್. ಕಾಯಿದೆಯನ್ನು ಹಿಂದಕ್ಕೆ ಪಡೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
2014 ರಲ್ಲಿ ನಡೆದ ಪಾರ್ಲಿಮೆಂಟ್ ಚುನಾವಣೆಯಲ್ಲಿ ನೀಡಿದ ಭರವಸೆಯನ್ನೇ ಇನ್ನು ಈಡೇರಿಸಲು ಆಗದ ಪ್ರಧಾನಿ ಮೋದಿ ಈಗ ಪೌರತ್ವ ಕಾಯಿದೆ ತಿದ್ದುಪಡಿ ಜಾರಿಗೆ ತಂದು ದೇಶದ ಜನರ ಗಮನವನ್ನು ಬೇರೆಡೆ ಸೆಳೆಯುವ ಕುತಂತ್ರ ನಡೆಸುತ್ತಿದ್ದಾರೆ. ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಘಾನಿಸ್ತಾನದಿಂದ ನಮ್ಮ ದೇಶದೊಳಗೆ ಅಕ್ರಮವಾಗಿ ನುಸುಳುವವರನ್ನು ತಡೆಯುವುದಕ್ಕಾಗಿ ಈ ಕಾಯಿದೆ ಜಾರಿಗೆ ತರಲಾಗಿದೆಯೇ ವಿನಃ ಇದರಿಂದ ಯಾವೊಬ್ಬ ಮುಸಲ್ಮಾನನಿಗೂ ತೊಂದರೆಯಾಗುವುದಿಲ್ಲವೆಂಬ ನಾಟಕದ ಮಾತುಗಳನ್ನಾಡುವ ಬದಲು ಕಾಯಿದೆಯನ್ನು ಹಿಂದಕ್ಕೆ ಪಡೆದು ದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಲಿ ಎಂದು ಮುಸ್ಲಿಂ ಮಹಿಳೆಯರು ಆಗ್ರಹಿಸಿದರು.
ಮುನಿರಾ ಎ.ಮಕಾಂದಾರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆ ನಜ್ಮತಾಜ್, ಜಿಲ್ಲಾ ಮುಸ್ಲಿಂ ಅಡ್ವೊಕೇಟ್ಸ್ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಹೆಚ್.ನೇಮತ್‍ವುಲ್ಲಾ, ಮೀಡಿಯಾ ಚೇರ್ಮನ್ ಸಿ.ಮಹಮದ್ ಸಮೀವುಲ್ಲಾ, ನ್ಯಾಯವಾದಿಗಳಾದ ಸೈಯದ್ ನೂರುಲ್ಲಾಹಸನ್, ಮೊಹರೋಜ್ ಬೇಗಂ, ಮಹಮದ್ ಸಾಧಿಕ್‍ವುಲ್ಲಾ, ಬಿ.ಕೆ.ರಹಮತ್‍ವುಲ್ಲಾ, ಜಿ.ಕೆ.ಮಹಮದ್ ರಫಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ಹಸನ್‍ತಾಹೀರ್, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂಆಲಿ, ಆರ್.ಶೇಷಣ್ಣಕುಮಾರ್, ಮುರುಘರಾಜೇಂದ್ರ ಒಡೆಯರ್ ಇನ್ನು ಮುಂತಾದವರು ಧರಣಿಯಲ್ಲಿ ಭಾಗವಹಿಸಿ ವಕೀಲರುಗಳಿಗೆ ಬೆಂಬಲ ಸೂಚಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ