ನಿರೀಕ್ಷಿತ ಮಟ್ಟದಲ್ಲಿ ಸಾಲ ನೀಡದ ಬ್ಯಾಂಕ್‍ಗಳು

ದಾವಣಗೆರೆ :

       ಯಾವ ಬ್ಯಾಂಕುಗಳು ಸಹ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಸಾಲ ನೀಡುವುದರಲ್ಲಿ ನಿರೀಕ್ಷಿತ ಗುರಿಯನ್ನು ಸಾಧಿಸಿಲ್ಲ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

      ನಗರದ ಹೊರವಲಯದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಮಾರ್ಗದರ್ಶಿ ಬ್ಯಾಂಕಿನ ಜಿಲ್ಲಾ ಮಟ್ಟದ ಪುನರಾವಲೋಕನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಜನೋಪಯೋಗಿ ಯೋಜನೆಗಳ ಅಡಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗುರಿ ಸಾಧಿಸಿಲ್ಲ. ಆದ್ದರಿಂದ ಇನ್ನೂ ಮುಂದಾದರೂ ಭಾರತ ಸರ್ಕಾರ ಜನರ ಉಪಯೋಗಕ್ಕಾಗಿ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿ, ತಲುಪಿಸುವ ಪ್ರಯತ್ನ ಮಾಡಬೇಕೆಂದು ತಾಕೀತು ಮಾಡಿದರು.

       ಬ್ಯಾಂಕ್ ಅಧಿಕಾರಿಗಳು ಶೈಕ್ಷಣಿಕ ಸಾಲ ವಸೂಲಿಗಾಗಿ ನಿರದ್ಯೋಗಿ ಯುವಕರಿಗೆ ನೋಟೀಸ್ ನೀಡುತ್ತಿರುವ ಬಗ್ಗೆ ದೂರುಗಳಿವೆ. ಹರಿಹರ ತಾಲೂಕಿನ ಹನಗವಾಡಿ ಯೋಗಿಶ್ ಎಂಬುವವರು 2013ನೇ ಸಾಲಿನಲ್ಲಿ ಹರಿಹರದ ಪ್ರಗತಿ ಗ್ರಾಮೀಣ ಬ್ಯಾಂಕಿನಲ್ಲಿ 3.15 ಲಕ್ಷ ಸಾಲ ಪಡೆದಿರುತ್ತಾರೆ. ಆದರೆ, ಅವರಿಗೆ 2018 ರ ಆಗಸ್ಟ್ ಅಂತ್ಯಕ್ಕೆ ರೂ. 5, 06,145 ಕಟ್ಟಬೇಕೆಂದು ಬ್ಯಾಂಕಿನಿಂದ ನೋಟಿಸ್ ನೀಡಲಾಗಿದೆ. ಕೇಂದ್ರ ಹಾಗೂ ರಾಜ್ಯದ ತಲಾ ಶೇ. 9 ಸಬ್ಸಿಡಿಯ ಸೌಲಭ್ಯ ನೀಡದೇ ಸಂಪೂರ್ಣ ಸಾಲದ ಮೊತ್ತ ಫಲಾನುಭವಿಯೇ ಭರಿಸಬೇಕೆಂದು ನೋಟಿಸ್ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

      ದುಡಿಯು ಕೈ ಇರುವ ಯುವಕರಿಗೆ ಕೆಸಲ ಇದ್ದರೆ, ಸಾಲ ಕಟ್ಟುವುದಿಲ್ಲ ಎಂಬುದಾಗಿ ಯಾರೂ ಹೇಳುವುದಿಲ್ಲ. ನಿರುದ್ಯೋಗಿಗಳು ಜೀವನ ನಡೆಸುವುದೇ ದುಸ್ತರವಾಗಿರುತ್ತೆ. ಅಂಥಹ ಸಂದರ್ಭದಲ್ಲಿ ಸಾಲ ವಸೂಲಾತಿಗೆ ನೋಟಿಸ್ ಕೊಡುವುದು ಒಳ್ಳೆಯದಲ್ಲ. ಒಂದು ವೇಳೆ ಫಲಾನುಭವಿಗೆ ನೌಕರಿ ದೊರೆತಿದ್ದರೆ, ಮುಲಾಜಿಲ್ಲದೇ ಸಾಲ ವಸೂಲಿ ಮಾಡಿ, ಆದರೆ ನಿರದ್ಯೋಗಿಗಳಿಗೆ ಅನಾವಶ್ಯಕವಾಗಿ ತೊಂದರೆ ಕೊಡಬೇಡಿ ಎಂದು ಹೇಳಿದರು.

       ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಮುದ್ರಾ ಯೋಜನೆ ನಿರುದ್ಯೋಗಿ ಯುವಕರ ಪಾಲಿಗೆ ಆಶಾಕಿರಣವಾಗಿದ್ದು, ಅತಿ ಹೆಚ್ಚು ಸಾಲಗಳನ್ನು ಈ ಯೋಜನೆಯಡಿ ನೀಡಬಹುದಾಗಿದೆ. ಈಗಿರುವ ಮಾಹಿತಿಯಂತೆ ಯೋಜನೆ ಜಾರಿಯಾದಾಗಿನಿಂದ ಈ ವರೆಗೂ 61 ಸಾವಿರ ಫಲಾನುಭವಿಗಳಿಗೆ 652.15 ಕೋಟಿ ರೂ. ಸಾಲ ವಿತರಿಸಲಾಗಿದೆ. ಈ ಯೋಜನೆಯಲ್ಲಿ 50 ಸಾವಿರ ರೂ.ಗಳಿಂದ 10 ಲಕ್ಷ ರೂ.ಗಳ ವರೆಗೆ ಸಾಲ ಪಡೆಯಲು ಅವಕಾಶವಿದ್ದು, ನಿರುದ್ಯೋಗಿ ಯುವಕರು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.

       ಈ ಮೂರು ತಿಂಗಳ ಅವಧಿಯಲ್ಲಿ 17,368 ಫಲಾನುಭವಿಗಳಿಗೆ ರೂ.113 ಕೋಟಿ ಸಾಲ ನೀಡಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲೆಯ ವಡ್ನಾಳ್, ಕೊರಟಿಗೆರೆ, ಡಿಸಿಎಂ ಟೌನ್‍ಶಿಪ್, ಸಾಸ್ವೆಹಳ್ಳಿ, ಸೋಮ್ಲಾಪುರ ಹಾಗೂ ಚಟ್ನಳ್ಳಿ ಗ್ರಾಮಗಳಲ್ಲಿ ಬ್ಯಾಂಕುಗಳು ಶಾಖೆಗಳನ್ನು ತೆರೆಯುವ ಮೂಲಕ ಸಾರ್ವಜನಿಕರಿಗೆ ಸಾಲಸೌಲಭ್ಯ ಕಲ್ಪಿಸಬೇಕೆಂದು ಸೂಚಿಸಿದರು.

     ಲೀಡ್ ಬ್ಯಾಂಕ್ ಮ್ಯಾನೇಜರ್ ಎರ್ರಿಸ್ವಾಮಿ, ಜನಧನ್ ಯೋಜನೆಯಲ್ಲಿ 3 ಲಕ್ಷದ 3 ಸಾವಿರದ 10 ಜನ ಪಾಲಿಸಿ ಹೊಂದಿದ್ದಾರೆ. ಪ್ರಧಾನಮಂತ್ರಿ ಜೀವನಜ್ಯೋತಿ ಯೋಜನೆಯಡಿ 95 ಸಾವಿರ ಜನರು ಫಲಾನುಭವಿಗಳಾಗಿದ್ದಾರೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಜಿಲ್ಲೆಯ ಏಳು ಕಡೆ ಸ್ಥಳ ಗುರುತಿಸಲಾಗಿದ್ದು, ಆರು ತಾಲ್ಲೂಕು ಹಾಗು ಮಲೆಬೆನ್ನೂರು ಪುರಸಭೆ ವ್ಯಾಪ್ತಿಯಲ್ಲಿ ಸ್ಥಳ ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದರು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿ ಸ್ಥಳ ಗುರುತಿಸಿದ್ದು ಈ ಏಳೂ ಪ್ರದೇಶಗಳ ವ್ಯಾಪ್ತಿಯ ಬ್ಯಾಂಕುಗಳ ಮುಖ್ಯಸ್ಥರ ಸಭೆ ಕರೆದು ಅವರಿಗೆ ಮನೆಸಾಲ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

     ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಮಾಹಿತಿ ನೀಡಿ 2016-17 ರ ಮುಂಗಾರು ಹಂಗಾಮಿನಲ್ಲಿ 24,885 ರೈತರು ಬೆಳೆ ವಿಮೆ ಮಾಡಿಸಿದ್ದು, 44 ಕೋಟಿ ಪರಿಹಾರ ವಿತರಿಸಲಾಗಿದೆ. 2017-18 ನೇ ಸಾಲಿನಲ್ಲಿ 78375 ರೈತರು ಬೆಳೆ ವಿಮೆ ಮಾಡಿಸಿದ್ದು, 12 ಕೋಟಿ 16 ಲಕ್ಷ ಪ್ರೀಮಿಯಂ ಪಾವತಿಸಿರುತ್ತಾರೆ ಎಂದರು.

     ತೋಟಗಾರಿಕೆ ಉಪನಿರ್ದೇಶಕ ವೇದಮೂರ್ತಿ ಮಾತನಾಡಿ, ತೋಟಗಾರಿಕೆ ಬೆಳೆಗಳಲ್ಲಿ 2016-17 ನೇ ಸಾಲಿನಲ್ಲಿ 6400 ರೈತರು ವಿಮೆ ಪಾವತಿಸಿದ್ದು, ಅದರಲ್ಲಿ 6350 ರೈತರಿಗೆ ವಿಮೆ ಪಾವತಿಯಾಗಿದೆ. ರೈತರು ತುಂಬಿದ ಪ್ರೀಮಿಯಂ ರೂ. 6 ಕೋಟಿ, ರೈತರಿಗೆ ಪಾವತಿಯಾಗಿರುವುದು 16 ಕೋಟಿ ಆಗಿದೆ. 2017-18 ನೇ ಸಾಲಿನಲ್ಲಿ 4824 ರೈತರು 4.30 ಕೋಟಿ ಪ್ರೀಮಿಯಂ ತುಂಬಿದ್ದಾರೆ. ಕ್ಲೇಮುಗಳ ವಿತರಣೆ ಪ್ರಗತಿಯಲ್ಲಿದೆ ಎಂದರು.

      ಸಭೆಯಲ್ಲಿ ಆರ್‍ಬಿಐ ಪ್ರತಿನಿಧಿ ಆನಂದ್ ನಿಮ್, ನಬಾರ್ಡ್ ಸಹಾಯಕ ಪ್ರಬಂಧಕ ರವೀಂದ್ರ, ಕೆನರಾ ಬ್ಯಾಂಕ್ ವಿಭಾಗೀಯ ಮ್ಯಾನೇಜರ್ ರಮೇಶ್, ಆರ್ಥಿಕ ಸಾಕ್ಷರತಾ ಕೇಂದ್ರದ ಸಲಹೆಗಾರರು, ವಿವಿಧ ಬ್ಯಾಂಕುಗಳ ಮುಖ್ಯಸ್ಥರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link