ಬೆಂಗಳೂರು
ವಿಧಾನಸಭೆಯ ಉಪಚುನಾವಣೆಯ ಸೋಲಿನ ನೈತಿಕ ಹೊಣೆ ಹೊತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಈ ಸ್ಥಾನಗಳನ್ನು ತಮ್ಮದಾಗಿಸಿಕೊಳ್ಳಲು ಪ್ರಮುಖ ನಾಯಕರು ಹೈಕಮಾಂಡ್ ಮಟ್ಟದಲ್ಲಿ ಲಾಬಿ ಆರಂಭಿಸಿದ್ದಾರೆ.
ಮೂಲ ಕಾಂಗ್ರೆಸ್ಸಿಗರು ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದಿದ್ದ ಬೆನ್ನಲ್ಲೆ ಉಪಚುನಾವಣೆಯ ಸೋಲು ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಅವರಿಗೆ ಅರಗಿಸಿಕೊಳ್ಳಲಾರದೆ ಬೀಸು ದೊಣ್ಣೆಯಿಂದ ಪಾರಾಗಲು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ರಾಜೀನಾಮೆಯಿಂದ ತೆರವಾಗುವ ಸ್ಥಾನಗಳ ಮೇಲೆ ಹಿರಿಯ ನಾಯಕರಾದ ಡಾ. ಜಿ. ಪರಮೇಶ್ವರ್, ಹೆಚ್.ಕೆ. ಪಾಟೀಲ್ ಸೇರಿದಂತೆ ಹಲವು ನಾಯಕರು ಕಣ್ಣಿಟ್ಟಿದ್ದಾರೆ. ಅಲ್ಲದೆ ಕೆಪಿಸಿಸಿ ಅಧ್ಯಕ್ಷ ಗಾದಿಯ ಮೇಲೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ದೃಷ್ಟಿ ನೆಟ್ಟಿದೆ.
ಈ ನಡುವೆ ಇನ್ನು ಹಲವು ನಾಯಕರು ತೆರೆ-ಮರೆಯಲ್ಲಿ ಲಾಬಿ ನಡೆಸುವ ಮೂಲಕ ಹೈಕಮಾಂಡ್ ಮೇಲೆ ಪ್ರಭಾವ ಬೀರಿ ಪ್ರಮುಖ ಹುದ್ದೆ ಗಿಟ್ಟಿಸಿಕೊಳ್ಳಲು ಮುಂದಾಗಿದ್ದಾರೆ.
ಆಪ್ತರ ಮೂಲಕ ಲಾಬಿ
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿದ್ದರಾಮಯ್ಯ ಅವರು, ತಮ್ಮ ಆಪ್ತರ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರಿ ಅವರಿಂದಲೇ ಮುಂದುವರೆಯಿರಿ ಎಂದು ಹೇಳಿಸಿಕೊಳ್ಳುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.
ಈಗಾಗಲೇ ಅವರ ಆಪ್ತ ಬಳಗ ಹೈಕಮಾಂಡ್ನಲ್ಲಿ ಲಾಬಿ ನಡೆಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿದೆ.
ಇದು ಸಾಧ್ಯವಾಗದಿದ್ದರೆ ತಮ್ಮ ಆಪ್ತರನ್ನೇ ಕೆಪಿಸಿಸಿ ಅಧ್ಯಕ್ಷಸ್ಥಾನ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರ ಸ್ಥಾನದಲ್ಲಿ ಕೂರಿಸಲು ಸಿದ್ದರಾಮಯ್ಯ ತಂತ್ರ ಹೆಣೆದಿದ್ದಾರೆ. ಹೈಕಮಾಂಡ್ ಸಮ್ಮತಿ ನೀಡಿದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಸಾರಥ್ಯ ವಹಿಸಿಕೊಳ್ಳಲು ಮುಂದಾಗಿದ್ದಾರೆ. ಇದಕ್ಕೆಲ್ಲ ಮೂಲ ಕಾಂಗ್ರೆಸ್ ನಾಯಕರು ಅವಕಾಶ ಮಾಡಿಕೊಡುತ್ತಾರಾ? ಇಲ್ಲವೇ? ಎನ್ನುವುದು ಸದ್ಯಕ್ಕಿರುವ ಕುತೂಹಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ