ಚಿತ್ರದುರ್ಗ:
ನಗರದ ಕುಂಬಾರ ಬೀದಿಯಲ್ಲಿ ಚಿತ್ರಡಾನ್ಬೋಸ್ಕೋ ಸಂಸ್ಥೆಯಿಂದ ಮಹಿಳೆಯರಿಗಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ಶನಿವಾರ ಏರ್ಪಡಿಸಲಾಗಿತ್ತು.
ನ್ಯಾಯವಾದಿ ಕೆ.ಎಸ್.ವಿಜಯರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ ಸಂಸಾರ ಮತ್ತು ಸಮಾಜ ಉತ್ತಮ ಸ್ಥಿತಿಯಲ್ಲಿರಬೇಕಾದರೆ ಮೊದಲು ಮಹಿಳೆಯರು ಜಾಗೃತರಾಗಬೇಕು. ಶಿಕ್ಷಣದ ಜೊತೆ ಸಾಮಾನ್ಯ ಕಾನೂನು ಅರಿವು ಅತ್ಯವಶ್ಯಕ. ಮಹಿಳೆಯರು ತಮ್ಮ ಹಕ್ಕನ್ನು ರಕ್ಷಿಸಿಕೊಂಡು ನೆಮ್ಮದಿಯಾಗಿ ಜೀವಿಸಲು ಕಾನೂನು ಅರಿವಿರಬೇಕು. ಆದರೆ ಅದನ್ನೇ ಅಸ್ತ್ರವನ್ನಾಗಿ ಬಳಸಿಕೊಳ್ಳಬಾರದು ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆ ವಿರುದ್ದ ಒಟ್ಟಾಗಿ ಹೋರಾಡಲು ಕಾನೂನಿನ ಅರಿವು ಇರಬೇಕು. ಲಯನ್ಸ್ ಕ್ಲಬ್ ಚಿತ್ರದುರ್ಗ ಫೋರ್ಟ್, ರೋಟರಿ ಕ್ಲಬ್, ಕಾನೂನು ಸೇವಾ ಪ್ರಾಧಿಕಾರ ಕಾನೂನು ಅರಿವು ಮೂಡಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದೆ. ಮಹಿಳೆಯರು ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನ್ಯಾಯವಾದಿ ದಿಲ್ಷಾದ್ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರತಿ ಸಾಮಾನ್ಯ ಪ್ರಜೆಗೂ ಕಾನೂನು ಏಕೆ ಬೇಕು, ಹೇಗೆ ಪಡೆಯಬೇಕು, ಕಾನೂನನ್ನು ಯಾವ ರೀತಿ ಬಳಸಿಕೊಳ್ಳಬೇಕು ಎಂಬುದು ಬಹಳ ಮುಖ್ಯ. ಸಮಾಜ ತುಂಬ ಕೆಟ್ಟಿದೆ ಎಂದು ಹೇಳುವ ಬದಲು ಮೊದಲು ನಾನು ಸರಿಯಾಗಿದ್ದರೆ ದೇಶ ಚೆನ್ನಾಗಿರುತ್ತದೆ ಎನ್ನುವ ಸಾಮಾನ್ಯ ಜ್ಞಾನವನ್ನು ಎಲ್ಲರೂ ರೂಢಿಸಿಕೊಂಡಾಗ ಮಾತ್ರ ಬದಲಾವಣೆ ಕಾಣಲು ಸಾಧ್ಯ ಎಂದರು.
ನಗರಸಭೆ ಸದಸ್ಯ ಶಶಿಧರ್, ಚಿತ್ರಡಾನ್ಬೋಸ್ಕೋ ಸಂಸ್ಥೆಯ ಸಿಬ್ಬಂದಿಗಳು, ಸ್ವಸಹಾಯ ಸಂಘದ ಮಹಿಳೆಯರು ಕಾನೂನು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ