ಚಳ್ಳಕೆರೆ
ತಾಲ್ಲೂಕಿನ ಬಹುತೇಕ ಕೆರೆಗಳು ಅ.18ರ ಗುರುವಾರ ರಾತ್ರಿ ಬಿದ್ದ ಮಳೆಯಿಂದ ಕೆರೆಗಳಲ್ಲಿ ನೀರು ಅಲ್ಪ ಪ್ರಮಾಣದಲ್ಲಿ ದಾಸ್ತಾನಿದ್ದು, ಕರೆಯಲ್ಲಿ ಬೆಳೆದಿರುವ ಜಾಲಿ ಗಿಡಗಳಿಂದ ಕೆರೆ ಏರಿಯಲ್ಲಿ ನೀರು ಪೋಲಾಗುತ್ತಿದ್ದು ಇದರಿಂದ ಕೆರೆಯ ಏರಿಯೇ ಒಡೆಯುವ ಸಂಭವಿದೆ ಎನ್ನುವುದು ಗ್ರಾಮಸ್ಥರ ಆತಂಕವಾಗಿದೆ.
ಕಳೆದ ಕೆಲವು ವರ್ಷಗಳಿಂದ ಮಳೆ ವೈಪಲ್ಯದಿಂದ ಕೆರೆಗಳ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಸಣ್ಣ ನೀರಾವರಿ ಇಲಾಖೆಗೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಮಳೆಯಿಂದ ಕೆಲವು ಕೆರೆಗಳಲ್ಲಿ ನೀರು ದಾಸ್ತಾನಿದ್ದು, ಅವೂ ಸಹ ನಿಲ್ಲದೆ ಲೀಕೇಜ್ ಮೂಲಕ ಕೆರೆಯಿಂದ ಹೊರಹೋಗುತ್ತಿವೆ. ನಗರದ ಅಜ್ಜಯ್ಯನಗುಡಿ ಕೆರೆಯಲ್ಲೂ ಸಹ ಮಳೆಯಿಂದ ಸುಮಾರು ಎರಡು ತಿಂಗಳ ಅವಧಿಯ ನೀರು ದಾಸ್ತಾನಿದ್ದು, ಪ್ರಸ್ತುತ ಕೆರೆ ಏರಿಯಲ್ಲಿ ನೀರು ಲೀಕೇಜ್ ಆಗುತ್ತಿದ್ದು, ಇದರಿಂದ ಅಪಾಯವಿದೆ ಎನ್ನುತ್ತಾರೆ ಗ್ರಾಮಸ್ಥರು.
ಸರ್ಕಾರ ಕೆರೆ ಸಂಜೀವಿನಿ ಯೋಜನೆಯಡಿ ಹಲವಾರು ಕೆರೆಗಳನ್ನು ದುರಸ್ಥಿ ಮಾಡಲು ಈಗಾಗಲೇ ಹಣ ನೀಡಿದೆ.
ಆದರೆ, ಬಹುತೇಕ ಕೆರೆಗಳು ರಿಪೇರಿ ಕಾಣದೆ ಯಾವುದೇ ರೀತಿಯ ಮುನ್ನಚ್ಚರಿಕೆ ಇಲ್ಲದೆ ಕೆರೆಯ ನೀರು ಲೀಕೇಜ್ ಮೂಲಕ ಹೊರಹೋಗುತ್ತಿದೆ. ಲೀಕೇಜ್‍ನ ಪ್ರಮಾಣ ಹೆಚ್ಚಾದಲ್ಲಿ ಕೆರೆಯ ಏರಿಯೇ ಒಡೆಯುವ ಸಂಭವಿದೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಲಿದೆ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಇಂತಹ ಅಪಾಯದ ಸ್ಥಿತಿಯನ್ನು ಎದುರಿಸುತ್ತಿರುವ ಕೆರೆಗಳ ಸ್ಥಿತಿಯನ್ನು ಅರಿತು ನೀರು ಲೀಕೇಜ್ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಕಾರಣ ಕಳೆದ ಹಲವಾರು ವರ್ಷಗಳ ನಂತರ ಮಳೆ ಬಂದಿದ್ದು, ಬೆಳೆಗೆ ಉತ್ತಮವಲ್ಲದಿದ್ದರೂ ಜಾನುವಾರುಗಳಿಗೆ ಮತ್ತು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಲು ಈಗ ದಾಸ್ತಾನಿರುವ ನೀರಿನಿಂದ ಸಾಧ್ಯವಾಗುತ್ತದೆ.
ಕಳೆದ ಸುಮಾರು 4 ದಿನಗಳಿಂದ ನೀರು ಲೀಕೇಜ್ ಆಗುತ್ತಿದ್ದರೂ ಸಹ ಇದನ್ನು ತಡೆಯಲು ಇಲಾಖೆ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷತನದ ಬಗ್ಗೆ ಬೇಸರ ವ್ಯಕ್ತ ಪಡಿಸಿರುವ ಹಲವಾರು ಮುಖಂಡರು ನೀರು ಲೀಕೇಜನ್ನು ತಪ್ಪಿಸಲು ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ಧಾರೆ.
ಈಗಾಗಲೇ ತಾಲ್ಲೂಕಿನ ಬಹುತೇಕ ಕೆರೆಗಳಲ್ಲಿ ಇದೇ ಪರಿಸ್ಥಿತಿ ಮುಂದುವರೆದಿದೆ. ದೊಡ್ಡೇರಿ, ಎನ್.ಉಪ್ಪಾರಹಟ್ಟಿ, ರಾಣೀಕೆರೆ, ಚಿಕ್ಕಮಧುರೆ ಕೆರೆ, ಅಜ್ಜಯ್ಯನಗುಡಿ ಕೆರೆ, ನಗರಂಗೆರೆ ಕೆರೆ, ತಳಕು ಕೆರೆ, ಬೆಳೆಗೆರೆ ಕೆರೆ ಮುಂತಾದ ಕೆರೆಗಳಲ್ಲಿ ಮೀತಿ ಮೀರಿ ಬೆಳೆದಿರುವ ಜಾಲಿ ಗಿಡಗಳಿಂದ ಗಿಡಗಳ ಬೇರು ಆಳಾವಾಗಿ ಬೇರೂರಿದ್ದು, ಇವುಗಳಿಂದ ಕೆರೆ ಏರಿಯಲ್ಲಿ ಬಿರುಕು ಕಾಣಿಸಿಕೊಂಡು ಲೀಕೇಜ್ ಉಂಟಾಗಲು ಕಾರಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ತುರ್ತು ಗಮನ ಹರಿಸಿ ಲೀಕೇಜನ್ನು ನಿಯಂತ್ರಿಸಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
