ತುಮಕೂರು:
ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಶಿಸ್ತು ಮತ್ತು ಸ್ವಚ್ಛತೆಯ ಬಗ್ಗೆ ಅರಿವು ಅಗತ್ಯ ಎಂದು ಜಿಲ್ಲಾ ಪರಿಶಿಷ್ಟ ಪಂಗಡ ಕಲ್ಯಾಣಾಧಿಕಾರಿ ಕೆ.ಆರ್.ರಾಜ್‍ಕುಮಾರ್ ತಿಳಿಸಿದರು.
ಎಂಪ್ರೆಸ್ ಬಾಲಕಿಯರ ಪದವಿ ಪೂರ್ವ ಕಾಲೇಜು ವತಿಯಿಂದ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಎನ್.ಎಸ್.ಎಸ್. ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಬಹಳಷ್ಟು ವಿದ್ಯಾರ್ಥಿಗಳು ಸ್ವಚ್ಛತೆಯ ಬಗ್ಗೆ ಗಮನ ಹರಿಸುವುದಿಲ್ಲ. ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಅಲ್ಲಿನ ಸ್ವಚ್ಛತೆಯನ್ನು ಮತ್ತೊಬ್ಬರ ಮೇಲೆ ಹೊರಿಸುತ್ತಾರೆ. ತಮ್ಮ ಕೊಠಡಿಗಳ ಸ್ವಚ್ಛತೆಯನ್ನು ಮಾಡಿಕೊಳ್ಳಲಾಗದ ವಿದ್ಯಾರ್ಥಿಗಳು ಮುಂದೆ ಇನ್ನೇನು ಸಾಧಿಸುತ್ತಾರೆ ಎಂದು ಪ್ರಶ್ನಿಸಿದರು.
ಶೈಕ್ಷಣಿಕ ಚಟುವಟಿಕೆಗಳಂತೆಯೇ ಜೀವನದಲ್ಲಿ ಶಿಸ್ತು ಮತ್ತು ಸ್ವಚ್ಛತೆ ತುಂಬಾ ಪ್ರಮುಖವಾದುದು. ಇವುಗಳ ಬಗ್ಗೆ ಗಮನ ಹರಿಸದೇ ಹೋದರೆ ವಿದ್ಯಾರ್ಥಿಗಳು ಸೋಮಾರಿಗಳಾಗುವುದರಲ್ಲಿ ಸಂದೇಹವೇ ಇಲ್ಲ. ತಾವು ಊಟ ಮಾಡುವ ಜಾಗ, ಕಲಿಯುವ ಸ್ಥಳ ಇವೆಲ್ಲವೂ ಸ್ವಚ್ಛತೆಯಿಂದ ಇದ್ದರೆ ಮಾತ್ರವೇ ಉತ್ತಮ ಪರಿಸರ ಇರಲು ಸಾಧ್ಯ. ಅಂತಹ ಪರಿಸರ ವಿದ್ಯಾರ್ಥಿಗಳಲ್ಲಿ ಮೂಡಲಿ ಎಂದರು.
ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಮೆರಿಟ್ ಅಂಕಗಳು ಅಗತ್ಯ. ವಿದ್ಯಾರ್ಥಿ ವೇತನದಿಂದ ಹಿಡಿದು ಹಾಸ್ಟೆಲ್‍ಗಳಲ್ಲಿ ಸೀಟು ದೊರಕಿಸಿಕೊಳ್ಳಲು ಇದೇ ಮಾನದಂಡವಾಗುತ್ತಿದೆ. ಆದರೆ ಒಮ್ಮೆ ಸೀಟು ಗಿಟ್ಟಿಸಿಕೊಂಡ ನಂತರ ಉತ್ತಮ ಜ್ಞಾನಾರ್ಜನೆ ವಿಷಯವನ್ನೇ ಕೆಲವರು ಮರೆತುಬಿಡುತ್ತಾರೆ. ಹೀಗಾದರೆ ಸರ್ಕಾರಿ ಸೌಲಭ್ಯಗಳನ್ನು ಪಡೆದು ಪ್ರಯೋಜನವಾದರೂ ಏನು ಎಂದು ಪ್ರಶ್ನಿಸಿದರು.
ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಪ್ರಾಚಾರ್ಯ ಟಿ.ಎನ್.ಗೋವಿಂದರಾಜು ಮಾತನಾಡಿ ಎನ್.ಎಸ್.ಎಸ್. ಶಿಬಿರಗಳ ಮೂಲಕ ಸಹಬಾಳ್ವೆ, ಸಹಭೋಜನ, ಭಾವೈಕ್ಯತೆಯನ್ನು ಮೈಗೂಡಿಸಿಕೊಳ್ಳಲು ಸಾಧ್ಯವಿದೆ. ಇಂತಹ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ದೇಶ ಸೇವೆಗೆ ಮುಂದಾಗಬೇಕು ಎಂದರು.
ನಿವೃತ್ತ ಪ್ರಾಂಶುಪಾಲ ಜಿ.ಎಚ್.ಮಹದೇವಪ್ಪ ಮಾತನಾಡಿ ಗ್ರಾಮಾಂತರ ವಿದ್ಯಾರ್ಥಿಗಳು ಹೆಚ್ಚಾಗಿ ಈ ಕಾಲೇಜಿಗೆ ದಾಖಲಾಗುತ್ತಾರೆ. ಅವರಿಗೆ ಶಿಕ್ಷಣದ ಜೊತೆಗೆ ಇತರೆ ಚಟುವಟಿಕೆಗಳ ಅರಿವು ಅಗತ್ಯವಾಗಿ ಬೇಕಾಗಿದೆ. ಇಲ್ಲಿ ಎಲ್ಲ ಮಕ್ಕಳು ಒಂದಾಗಿ ಕಲಿಯುವ ವಾತಾವರಣ ಇರುವುದರಿಂದ ಸಹಪಾಠಿಗಳ ಜೊತೆ ಸೇರಿ ಸಮುದಾಯದ ಕೆಲಸಗಳನ್ನು ಮಾಡುವ ಅವಕಾಶವಿರುತ್ತದೆ. ಇದು ಜೀವನ ಕೌಶಲ್ಯಗಳ ಅನುಭವಕ್ಕೆ ಅವಕಾಶ ನೀಡುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಕೆ.ಎಸ್. ಸಿದ್ಧಲಿಂಗಪ್ಪ ಮಾತನಾಡಿ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಸಮುದಾಯದ ಶಿಕ್ಷಣ ಅಗತ್ಯವಿದೆ. ಇದರಿಂದ ಅನುಭವ ಸಿದ್ಧಿಸಲಿದೆ. ಕಾಲೇಜು ದಿನಗಳಲ್ಲಿ ಉತ್ತಮ ಅನುಭವ ಪಡೆಯಲು ಸಮುದಾಯ ಶಿಕ್ಷಣ ಪ್ರೇರೇಪಣೆ ನೀಡಲಿದೆ. ಮುಂದಿನ ದಿನಗಳಲ್ಲಿ ಇದು ಎಲ್ಲ ರೀತಿಯ ಏಳಿಗೆಗೆ ಸಹಕಾರಿಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿ ಟಿ.ಎಚ್.ಪುಷ್ಪಲತಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೃಷ್ಣಮೂರ್ತಿ, ಗಂಗಾಧರಯ್ಯ, ಪಾಲಾಕ್ಷಯ್ಯ, ವಿಶ್ವೇಶ್ವರಯ್ಯ ಎಸ್.ವಿ. ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
