ಶಿರಾ
ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸಿ, ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪಿಸಿದ ಗುರು ವೃಂದಕ್ಕೆ ಶಿಷ್ಯರು ನಮನ ಸಲ್ಲಿಸಿದಾಗ ಗುರುವಿನಿಂದ ಪಡೆದ ವಿದ್ಯೆ ನಿಜಕ್ಕೂ ಸಾರ್ಥಕತೆ ಕಾಣಲಿದೆ. ಐಶ್ವರ್ಯ ಕಳೆದು ಹೋಗ ಬಹುದಾದರೂ, ಕಲಿತ ವಿದ್ಯೆ ಅಳಿಸಲಾಗದ ಸಂಪತ್ತು ಎಂದು ಶಾಸಕ ಬಿ.ಸತ್ಯನಾರಾಯಣ ಹೇಳಿದರು.
ಶಿರಾ ತಾಲ್ಲೂಕಿನ ಚಂಗಾವರ ಗ್ರಾಮದಲ್ಲಿ ಹಳೆ ವಿದ್ಯಾರ್ಥಿಗಳ ಸಂಘ ಭಾನುವಾರ ಆಯೋಜಿಸಿದ್ದ ಸರ್ಕಾರಿ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಯಲ್ಲಿ ಸರ್ಕಾರ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಇಂತಹ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಐಎಎಸ್, ಐಪಿಎಸ್‍ನಂತಹ ಹುದ್ದೆಯಲ್ಲಿರುವುದು ಕನ್ನಡ ಶಾಲೆಗಳ ಶಿಕ್ಷಣದ ಮಹತ್ವ ಎಷ್ಟು ಶೇಷ್ಠ ಎಂಬುದು ಗೊತ್ತಾಗುತ್ತದೆ. ಸಾವಿರಾರು ಹಳೆ ವಿದ್ಯಾರ್ಥಿಗಳು ಸೇರಿ ಸರ್ಕಾರಿ ಶಾಲೆಯ ಸುವರ್ಣ ಮಹೋತ್ಸವ ಹಬ್ಬದಂತೆ ಆಚರಣೆ ಮಾಡುತ್ತಿರುವುದು ಶ್ಲಾಘನೀಯ. ಬೆಳೆದ ಮೇಲೆ ಎಲ್ಲವನ್ನು ಮರೆಯುವಂತ ಈ ಕಾಲಘಟ್ಟದಲ್ಲಿ ಗುರುಗಳಿಗೆ ಗುರುವಂದನೆ ಸಲ್ಲಿಸುತ್ತಿರುವುದು ಇತರೆ ಶಾಲೆಗಳಿಗೆ ಮಾದರಿಯಾಗಲಿ ಎಂದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಲತಾ ಕೆ.ರವಿಕುಮಾರ್ ಮಾತನಾಡಿ, ಶಾಲೆಯೇ ದೇವಾಲಯ, ಗುರುವೇ ದೇವರು ಎಂಬದನ್ನು ಈ ಸುವರ್ಣ ಮಹೋತ್ಸವ ಸಾಕ್ಷೀಕರಿಸಿದೆ. ವಿದ್ಯೆಯ ಜೊತೆ ವಿನಯತೆ, ತಂದೆ ತಾಯಿಯನ್ನು ಗೌರವಿಸುವಂತಹ ಮನೋಭಾವವನ್ನು ಪ್ರತಿಯೊಬ್ಬ ವಿದ್ಯಾರ್ಥಿ ರೂಢಿಸಿ ಕೊಂಡಾಗ ಸಮಾಜದಲ್ಲಿ
ಉನ್ನತ ಸ್ಥಾನಕ್ಕೇರಲು ಸಾಧ್ಯ. ಕಲಿತು ಉತ್ತಮ ಸ್ಥಾನಕ್ಕೆ ಹೋದ ವಿದ್ಯಾರ್ಥಿಗಳು ತಮ್ಮ ಸೇವೆಯಲ್ಲಿ ಪ್ರ್ರಾಮಾಣಿಕತೆ ಅಳವಡಿಸಿ ಕೊಂಡು ಸಮಾಜದಲ್ಲಿ ಮಾದರಿಯಾಗಿ ಬದುಕ ಬೇಕೆಂದರು.
ಹಳೆ ವಿದ್ಯಾರ್ಥಿಗಳು ಸಂಘದ ಅಧ್ಯಕ್ಷ ಸಾರಿಗೆ ಇಲಾಖೆ ಎಆರ್‍ಟಿಓ ಟಿ.ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಡಿಂಕು ಖ್ಯಾತಿ ಇಂದುಶ್ರೀ ನಡೆಸಿ ಕೊಟ್ಟ ಮಾತನಾಡುವ ಗೊಂಬೆ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ನೆರದಿದ್ದ ಸಹಸ್ರಾರು ಜನರಿಗೆ ಉತ್ತಮ ಮನರಂಜನೆ ನೀಡಿದರೆ, ಹಾಸ್ಯ ಕಲಾವಿದೆ ಸುಧಾ ಬರಗೂರು ನಡೆಸಿ ಕೊಟ್ಟ ನಗೆ ಹಬ್ಬ ಕಾರ್ಯಕ್ರಮದಲ್ಲಿ ನಗೆಯ ಹೊನಲನ್ನೆ ಹರಿಸಿತು. ಡಿವೈಎಸ್ಪಿ ಮಂಜುನಾಥ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ್ ಈ ಶಾಲೆಯಲ್ಲಿ ಸೇವೆಸಲ್ಲಿಸಿದ ಶಿಕ್ಷಕರ ವೃಂದಕ್ಕೆ ಸನ್ಮಾನಿಸಿ ಗೌರವಿಸಿದರು.
ಶಾಲೆಗೆ ಭೂದಾನ ಮತ್ತು ಕೊಠಡಿದಾನ ನೀಡಿದ ಕುಟುಂಬಸ್ಥರಿಗೆ ಎಆರ್‍ಟಿಓ ಟಿ.ಮಂಜುನಾಥ್ ಮತ್ತು ಜೆಡಿಎಸ್ ಮುಖಂಡ ಚಂಗಾವರ ಮಾರಣ್ಣ ಸನ್ಮಾನಿಸಿದರು.
ಎಪಿಎಂಸಿ ಅಧ್ಯಕ್ಷೆ ನರಸಿಂಹೆಗೌಡ, ಚಂಗಾವರ ಗ್ರಾಪಂ ಅಧ್ಯಕ್ಷೆ ಪುಟ್ಟರಂಗಮ್ಮ ಕೃಷ್ಣಮೂರ್ತಿ, ತಾಪಂ ಸದಸ್ಯ ನಾಗರಾಜು, ಜೆಡಿಎಸ್ ಯುವ ಮುಖಂಡ ಶಿವುಚಂಗಾವರ, ಮುಖ್ಯ ಶಿಕ್ಷಕ ಪಿ.ಜಿ.ಮಂಜುನಾಥ್, ಮುಖಂಡ ರಮೇಶ್‍ಗೌಡ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಿಂಗಯ್ಯ, ನಿವೃತ್ತ ಶಿಕ್ಷಕರಾದ ನರಸಿಂಹಯ್ಯ, ನಿಜಲಿಂಗಪ್ಪ, ಗ್ರಾಪಂ ಸದಸ್ಯ ದೊಡ್ಡಣ್ಣ, ಪ್ರಭು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ