ಮೊದಲು ಪವಿತ್ರ ಮತದಾನ, ನಂತರ ಉಳಿದ ಕೆಲಸ : ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ

ಹುಳಿಯಾರು

      ಭಾರತ ದೇಶದಲ್ಲಿ ಹುಟ್ಟಿದಂತಹ ಪ್ರತಿಯೊಬ್ಬ ಪ್ರಜೆಯೂ ಸಹ ಮತ ಹಾಕುವುದು ಆದ್ಯ ಕರ್ತವ್ಯ. ದೇಶ ಕಟ್ಟುವಂತಹ ನಾವು ಮತ ಚಲಾಯಿಸುವ ಮುಖಾಂತರ ದೇಶಕ್ಕೆ ಭವಿಷ್ಯ ಕೊಡೋಣ. ಮತದಾನ ಮಾಡುವುದರಿಂದ ನಮ್ಮನ್ನು ನಾವು ಪರಿವರ್ತನೆ ಮಾಡಿಕೊಂಡಂತೆ ಆಗುತ್ತದೆ. 18 ವರ್ಷ ತುಂಬಿದ ಪ್ರತಿಯೊಬ್ಬರು ಕಡ್ಡಾಯವಾಗಿ ಮತ ಚಲಾಯಿಸಿ ಎಂದು ಚಿಕ್ಕನಾಯಕನಹಳ್ಳಿ ತಾಲ್ಲೂಕು ಕುಪ್ಪೂರು ಗದ್ದುಗೆ ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿಗಳು ಕರೆ ನೀಡಿದ್ದಾರೆ.

      ಮತ ಜಾಗೃತಿ ಬಗ್ಗೆ ಹೇಳಿಕೆ ನೀಡಿರುವ ಅವರು ನಮ್ಮ ಭಾರತ ಸರ್ವಧರ್ಮ ಸಮನ್ವಯದ ದೇಶ, ವಿಭಿನ್ನತೆಯಲ್ಲಿ ಏಕತೆಯನ್ನು ಸಾರಿದ ದೇಶ. ಅಧಿಕಾರದ ಗದ್ದುಗೆಯನ್ನು ಸಮರ್ಥ ವ್ಯಕ್ತಿಗೆ ನೀಡಬೇಕಾದ ಹೊಣೆಗಾರಿಕೆ ನಮ್ಮೆಲ್ಲರದು. ಮೊದಲು ಮತದಾನ ಮಾಡಿ ಯಾವುದೇ ಆಮಿಷಕ್ಕೆ, ಹಣಕ್ಕೆ ಮತವನ್ನು ಮಾರಿಕೊಳ್ಳಬೇಡಿ. ಜಾತಿ ಮತಗಳನ್ನು ಲೆಕ್ಕಿಸದೆ ಮತ ಹಾಕಿ. ನಮ್ಮ ದೇಶ ರಕ್ಷಣೆ ಮಾಡುವವರಿಗೆ ನಮ್ಮ ಸಂಸ್ಕೃತಿ ಧರ್ಮ ಪರಂಪರೆಗಳನ್ನು ಉಳಿಸಿ ಬೆಳೆಸುವ ನಾಯಕರನ್ನು ಆಯ್ಕೆ ಮಾಡುವ ಹೊಣೆ ನಮ್ಮೆಲ್ಲರದು ಎಂದರು.

     ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಅಪರೂಪದ್ದಾಗಿದ್ದು ನಮ್ಮನ್ನು ಆಳುವ ನಾಯಕರನ್ನು ನಾವೇ ಆರಿಸುವ ಅವಕಾಶವನ್ನು ನಮ್ಮ ಭಾರತದ ಸಂವಿಧಾನ ನಮಗೆ ನೀಡಿದೆ. ಇತ್ತೀಚೆಗೆ ತಂತ್ರಜ್ಞಾನದ ಅಭಿವೃದ್ಧಿಯಿಂದ ನ್ಯಾಯ ಸಮ್ಮತವಾಗಿ ಚುನಾವಣೆ ಯಾಗುತ್ತಿರುವುದು ಸಂತೋಷದಾಯಕ.

     ನಗರ ಪ್ರದೇಶದ ನಾಗರೀಕರು, ಯುವ ಜನರು ತಪ್ಪದೆ ಮತವನ್ನು ನೀಡಿ. ಕೆಲವು ದೇಶಗಳಲ್ಲಿ ಮತವನ್ನು ಹಾಕದಿದ್ದರೆ ಅಪರಾಧ ಎಂದು ದಂಡ ಹಾಕುತ್ತಾರೆ, ಆದರೆ ನಮ್ಮ ದೇಶದಲ್ಲಿ ಆ ವ್ಯವಸ್ಥೆ ಇರುವುದಿಲ್ಲ. ನಾವೇ ಎಚ್ಚೆತ್ತುಕೊಂಡು ನಮ್ಮ ಮತಗಳನ್ನು ಬುಲೆಟ್ ಗಿಂತ ಬಲಶಾಲಿ ಎಂದು ತೋರಿಸಬೇಕಾಗುತ್ತದೆ. ಪವಿತ್ರವಾದ ಮತವನ್ನು ನೀಡಿ ನಮ್ಮ ರಾಷ್ಟ್ರದ ಗೌರವ ಪ್ರತಿಷ್ಠೆ ಮೌಲ್ಯಗಳನ್ನು ಹೆಚ್ಚಿಸುವ ಕಾರ್ಯದಲ್ಲಿ ನಾವೆಲ್ಲರೂ ಭಾಗಿಯಾಗೋಣ ಎಂದು ಕರೆ ನೀಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link