ದಾವಣಗೆರೆ:
ಹಂದಿ ಸಾಕಾಣಿಕೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವುದರಿಂದ, ಇವುಗಳ ಮಾಲೀಕರು, ಸಾಕಾಣಿಕೆದಾರರು ಹಂದಿಗಳ ಸಂಖ್ಯೆ ಪ್ರಮಾಣ ಕ್ರಮೇಣ ಕಡಿಮೆಗೊಳಿಸಿ, ಪರ್ಯಾಯ ಉದ್ಯೋಗದತ್ತ ಗಮನ ಹರಿಸಬೇಕೆಂದು ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಸೂಚಿಸಿದರು.
ಇಲ್ಲಿನ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ಹಂದಿ ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು, ನೀವೆಲ್ಲರೂ ಹಂದಿ ಸಾಕಾಣಿಕೆಯನ್ನು ಬಿಟ್ಟು, ಪರ್ಯಾಯ ಉದ್ಯೋಗದತ್ತ ಗಮನ ಹರಿಸಿದರೆ, ಇದಕ್ಕೆ ಮಹಾನಗರ ಪಾಲಿಕೆ ಅಗತ್ಯ ಸಹಕಾರ ನೀಡಲಿದೆ ಎಂದು ಹೇಳಿದರು.
ಬೇರೆ ತಾಲೂಕಿಗಳಿಗಿಂತ ದಾವಣಗೆರೆ ನಗರ ವ್ಯಾಪ್ತಿಯಲ್ಲಿಯೇ ಹಂದಿಗಳ ಸಂಖ್ಯೆ ಹೆಚ್ಚಾಗಿದೆ. ಅಲ್ಲದೇ, ದಿನದಿಂದ ದಿನಕ್ಕೆ ಸಾರ್ವಜನಿಕರಿಗೆ ಅವುಗಳಿಂದ ತೊಂದರೆ ಹೆಚ್ಚಾಗುತ್ತಿದೆ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹೀಗಾಗಿ ಜನರು ಪಾಲಿಕೆಯನ್ನು ಶಪಿಸುತ್ತಿದ್ದಾರೆ. ಆದ್ದರಿಂದ ನಗರದಲ್ಲಿ ಕ್ರಮೇಣ ಹಂದಿ ಸಾಕಾಣಿಕೆ ಪ್ರಮಾಣ ಕಡಿಮೆಗೊಳಿಸಿ ಸ್ವಯಂ ಉದ್ಯೋಗ ಕೈಗೊಳ್ಳಲು ಆಲೋಚಿಸಿ ಎಂದು ಸಲಹೆ ನೀಡಿದರು.
ಪಾಲಿಕೆಯ ಶೇ.24.1, 7.2, 5 ಸೇರಿ ವಿವಿಧ ಯೋಜನೆ ಅನುದಾನದಲ್ಲಿ ಹಂದಿ ಮಾಲೀಕರು, ಸಾಕಾಣಿಕೆದಾರರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಲ್ಯಾಪ್‍ಟಾಪ್, ಸ್ವಯಂ ಉದ್ಯೋಗ ಕೈಗೊಳ್ಳಲು ಕಂಪ್ಯೂಟರ್, ಆಟೋ ಖರೀದಿಗೆ ಆರ್ಥಿಕ ನೆರವು ನೀಡಲಾಗುವುದು ಎಂದರು.
ಈ ವೇಳೆ ಮಾತನಾಡಿದ ಅಖಿಲ ಕರ್ನಾಟಕ ಕುಳುವ ಮಹಾಸಂಘದ ರಾಜ್ಯಾಧ್ಯಕ್ಷ ಎಂ.ಆನಂದಪ್ಪ, ಹಂದಿ ಸಾಕಾಣಿಕೆಯು ಕೊರಮ, ಕೊರಚ, ಕೊರವ, ಹಂದಿಜೋಗಿ ಸಮುದಾಯದವರ ವಂಶಪಾರಂಪರಿಕ ಬಂದಿರುವ ಕುಲ ಕಸುಬು ಆಗಿದೆ. ಸ್ಮಾರ್ಟ್‍ಸಿಟಿ ನೆಪದಲ್ಲಿ ನಮ್ಮನ್ನು ಊರಿನಿಂದ ಹೊರಹಾಕಲಾಗುತ್ತಿದೆ. ಸಂಘ ಸಲ್ಲಿಸಿದ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿ ಹಂದಿ ಸಾಕಾಣಿಕೆದಾರರಿಗೆ ಪುನರ್ವತಿ ಕಲ್ಪಿಸಬೇಕು. ಹಂದಿ ಹಿಡಿಯದಂತೆ ಆದೇಶಿಸಿದೆ. ಈ ವೃತ್ತಿಯನ್ನು ಒಮ್ಮೆಗೆ ಬಿಡಲಾಗುವುದಿಲ್ಲ. ನಮಗೆ ಬದುಕಲಿಕ್ಕೆ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ನಗರದ ಹೊರಗೆ ಇಲ್ಲವೇ ಮಧ್ಯಭಾಗದಲ್ಲಿ ಹಂದಿ ಸಾಕಾಣಿಕೆ ಕೇಂದ್ರ ಆರಂಭಿಸಬೇಕು. ಕೇಂದ್ರಕ್ಕೆ ಆಹಾರ, ನೀರು ಸೇರಿದಂತೆ ಇತರೆ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ಸಾಕಾಣಿಕೆದಾರರಿಗೆ ಜನವಸತಿ ಕಲ್ಪಿಸಬೇಕು. ಸ್ವಚ್ಛ ಭಾರತ ಯೋಜನೆ ಅನುಷ್ಠಾನದಲ್ಲಿ ಪರಿಗಣಿಸಿ ನೆರವು ನೀಡಬೇಕು. ಹಸಿಕಸ ಸಂಗ್ರಹ ಕಾರ್ಯವನ್ನು ಸಂಘಕ್ಕೆ ವಹಿಸಬೇಕೆಂದು ಅವರು ಆಗ್ರಹಿಸಿದರು.
ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್ ಸುಂಕದ್ ಮಾತನಾಡಿ, ಹಂದಿ ಸಾಕಾಣಿಕೆಗೆ ಬಾತಿ, ಆನಗೋಡು ಸೇರಿ ಮೂರು ಕಡೆ ವರಹಾ ಶಾಲೆ ಆರಂಭಕ್ಕೆ ಸ್ಥಳ ನೋಡಲಾಗಿತ್ತು. ಆದರೆ, ಗ್ರಾಮಸ್ಥರ ವಿರೋಧ ವ್ಯಕ್ತವಾಯಿತು. ನೀವು ಸ್ಥಳ ತೋರಿಸಿದರೆ ಪಾಲಿಕೆ ಖರೀದಿಸಲು ಸಿದ್ಧವಿದೆ. ಅವುಗಳ ಸಾಕಾಣಿಕೆಗೆ ವರಾಹ ಶಾಲೆ ತೆರೆದು ಆಹಾರ, ನೀರು ಸೇರಿ ಅಗತ್ಯ ಸೌಲಭ್ಯ ಕಲ್ಪಿಸ ಲಾಗುವುದು ಎಂದು ಭರವಸೆ ನೀಡಿದರು.ಸಭೆಯಲ್ಲಿ ಪಾಲಿಕೆ ಮಾಜಿ ಸದಸ್ಯ ಪರಸಪ್ಪ, ಹಂದಿ ಸಾಕಾಣಿಕೆದಾರರು, ವಿವಿಧ ವಾರ್ಡ್‍ಗಳ ಆರೋಗ್ಯ ನಿರೀಕ್ಷಕರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ