ಮೌಢ್ಯ ತೊರೆದು ಬಸವ ಪ್ರಜ್ಞೆ ಬೆಳೆಸಿಕೊಳ್ಳೋಣ

ದಾವಣಗೆರೆ:

      ಸಾಮಾಜಿಕ ಪಿಡುಗು ಹಾಗೂ ಮೌಢ್ಯದಿಂದ ಹೊರ ಬಂದು, ಬಸವ ಪ್ರಜ್ಞೆ  ಬೆಳೆಸಿಕೊಳ್ಳಬೇಕೆಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಕರೆ ನೀಡಿದರು.

      ನಗರದ ಬಂಬೂ ಬಜಾರ್‍ನ ಶ್ರೀ ಮಲ್ಲಿಕಾರ್ಜುನ ಕಲ್ಯಾಣ ಮಂಟಪದಿಂದ ಲಿಂಗೈಕ್ಯ ಶ್ರೀ ಜಯದೇವ ಜಗದ್ಗುರುಗಳ 62ನೇ ಸ್ಮರಣೋತ್ಸವ, ಶರಣ ಸಂಸ್ಕತಿ ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಜನ ಜಾಗೃತಿ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

      ಮೇದಾರ ಸಮಾಜದ ಮೂಲ ಪುರುಷ ಕೇತಯ್ಯನವರು 12ನೇ ಶತಮಾನದ ಅನುಭವ ಮಂಟಪದಲ್ಲಿ ಹಿರಿಯ ಶರಣರಾಗಿದ್ದವರು. ವಿಶ್ವಗುರು ಬಸವಣ್ಣನವರು ಕೇತಯ್ಯನವರನ್ನು ಅಪ್ಪಿಕೊಂಡಿದ್ದರು. ಮೇದಾರ ಕೇತಯ್ಯನವರಂತೆ ಇಂದು ಮೇದಾರ ಬಾಂಧವರೂ ಕಾಯಕ ಮಾಡಿಕೊಂಡೇ ಬರುತ್ತಿದ್ದಾರೆ. ಆದರೂ, ಈ ಸಮಾಜದಲ್ಲಿ ಕೆಲವರು ದುಶ್ಚಟಗಳಿಗೆ ಬಲಿಯಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದರು.

      ಭಗವಂತ ನೀಡಿರುವ ಶರೀರದಲ್ಲೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ದುಶ್ಟಟಗಳಿಂದ, ಜೂಜಾಟಗಳಿಂದ ಸಂಸಾರಗಳೇ ನಾಶವಾಗುತ್ತವೆ. ಇಡೀ ಕುಟುಂಬ ಸದಸ್ಯರ ಶಾಂತಿ, ನೆಮ್ಮದಿಗೆ ಭಂಗ ಉಂಟಾಗುತ್ತದೆ. ದುಶ್ಚಟಕ್ಕೆ ತುತ್ತಾದ ವ್ಯಕ್ತಿಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲಾಗುವುದಿಲ್ಲ. ಒಳ್ಳೆಯ ಭವಿಷ್ಯವನ್ನು ಕಟ್ಟಿಕೊಡಲಾಗುವುದಿಲ್ಲ. ಮದ್ಯಪಾನದಿಂದ ತನ್ನ ಆರೋಗ್ಯವೂ ಹಾಳಾಗುತ್ತದೆಂಬ ಸತ್ಯವನ್ನು ವ್ಯಸನಿಗಳು ಅರಿತು, ತಕ್ಷಣದಿಂದಲೇ ಮದ್ಯಪಾನವನ್ನು ತ್ಯಜಿಸಬೇಕೆಂದು ಸಲಹೆ ನೀಡಿದರು.

        ಮೇದಾರ ಸಂಸ್ಕತಿ ವಿಶಿಷ್ಟವಾದುದಾಗಿದ್ದು, ಕರ ಕುಶಲ ಕರ್ಮಿಗಳಾಗಿದ್ದು, ಸಮಾಜ ಬಾಂಧವರು ತಯಾರಿಸುವ ಉತನ್ನಗಳಿಗೆ ಮಾರುಕಟ್ಟೆಯಲ್ಲಿ ಅತ್ಯಂತ ಮಹತ್ವವಿದೆ. ಚೆನ್ನಾಗಿ ದುಡಿಮೆ ಮಾಡಿ, ಚಟಗಳಿಗೆ ದಾಸರಾಗಿ ಹಣ ಕಳೆದುಕೊಳ್ಳುತ್ತಿರುವುದು ಸರಿಯಲ್ಲ. ಸಮಾಜ ಬಾಂಧವರು ಕಾಯಕ ಸಂಸ್ಕತಿ ಬಿಡದೇ ಕಾಯಕದೊಂದಿಗೆ ಜೀವನ ಸಾರ್ಥಕಪಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ದೇಶವನ್ನು ಕಾಡುತ್ತಿರುವ ಬಡತನ, ಅನಕ್ಷರತೆ, ನಿರುದ್ಯೋಗದಂತಹ ಅನೇಕ ಸಮಸ್ಯೆಗಳಿಗೆ ಬಸವ ತತ್ವದಲ್ಲಿ ಪರಿಹಾರವಿದ್ದು, ಆ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಭಾರತದ ಚಿತ್ರಣವೇ ಬದಲಾಗುತ್ತದೆ. ಬಸವ ತತ್ವವನ್ನು ನಮ್ಮ ಬದುಕಿನ ಅವಿಭಾಜ್ಯ ಅಂಗವನ್ನಾಗಿ ಅಳವಡಿಸಿಕೊಂಡಾಗ ನಮ್ಮ ಬದುಕಿನ ಜೊತೆಗೆ ದೇಶದ ಭವಿಷ್ಯವೂ ಉಜ್ವಲವಾಗುತ್ತದೆ ಎಂದರು.

         ಪಾದಯಾತ್ರೆಯಲ್ಲಿ ಚಳ್ಳಕೆರೆಯ ಶ್ರೀಬಸವಕಿರಣ ಸ್ವಾಮೀಜಿ, ಎನ್‍ಆರ್ ಪುರದ ಶ್ರೀಬಸವಪ್ರಭು ಸ್ವಾಮೀಜಿ, ತಿಳುವಳ್ಳಿಯ ಶ್ರೀಬಸವ ನಿರಂಜನ ಸ್ವಾಮೀಜಿ, ಹೊಳಲ್ಕೆರೆಯ ಶ್ರೀಬಸವಪ್ರಜ್ಞ ಸ್ವಾಮೀಜಿ, ನಿಪ್ಪಾಣಿಯ ಶ್ರೀಮಲ್ಲಿಕಾರ್ಜುನ ಸ್ವಾಮೀಜಿ, ಮೇದಾರ ಸಮಾಜದ ಅಧ್ಯಕ್ಷ ಬಸವರಾಜಪ್ಪ, ಹುಲಿಕುಂಟೆಪ್ಪ, ಸೋಮಣ್ಣ, ಚಂದ್ರಶೇಖರ, ರಾಘವೇಂದ್ರ ಮತ್ತಿತರರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap