ದುರಭ್ಯಾಸ ತ್ಯಜಿಸಿ ಹೊಸ ಬದುಕು ಕಟ್ಟಿಕೊಳ್ಳಬೇಕು

ಚಿತ್ರದುರ್ಗ:

       ವರ್ಷವಿಡಿ ಮೈಮುರಿದು ದುಡಿಯುವ ಕಾರ್ಮಿಕರು, ಬಡವರು ಅಯ್ಯಪ್ಪಸ್ವಾಮಿ ದರ್ಶನಕ್ಕಾಗಿ ಪ್ರತಿ ವರ್ಷ ಶಬರಿಮಲೈಗೆ ಹೋಗುವುದು ತಪ್ಪಲ್ಲ. ಸ್ವಾಮಿಯ ದರ್ಶನ ಮಾಡಿ ಬಂದ ಮೇಲೆ ದುರ್ಗಣ, ದುರಭ್ಯಾಸಗಳನ್ನು ತ್ಯಜಿಸಿ ಹೊಸತನವನ್ನು ಜೀವನದಲ್ಲಿ ರೂಢಿಸಿಕೊಳ್ಳಿ ಎಂದು ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ.ಶಾಂತವೀರಸ್ವಾಮೀಜಿ ಅಯ್ಯಪ್ಪ ಮಾಲಾಧಾರಿಗಳಿಗೆ ಹೇಳಿದರು.ಕೆ.ಎಸ್.ಆರ್.ಟಿ.ಸಿ.ಡಿಪೋ ರಸ್ತೆಯಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಪಡಿಪೂಜೆಯಲ್ಲಿ ಭಾಗವಹಿಸಿ ಮಾತನಾಡಿದರು.

         ಕಲ್ಲು, ಮಣ್ಣು, ಮರವನ್ನು ದೇವರನ್ನಾಗಿ ಪೂಜಿಸುವ ಮಾನವನಿಗೆ ಮೊದಲು ಎಚ್ಚರಿಕೆ ಇರಬೇಕು. ಮೈಮೇಲೆ ತೊಡುವ ಬಟ್ಟೆಯಿಂದ ಯಾರು ಶ್ರೇಷ್ಟರಲ್ಲ. ಅಯ್ಯಪ್ಪ ಮಾಲಾಧಾರಿಗಳೆಲ್ಲಾ ದೇವರಲ್ಲ. ಖಾವಿ ತೊಟ್ಟವರಲ್ಲ ಶ್ರೇಷ್ಟರಲ್ಲ, ಸಂಸಾರಿಗಳೆಲ್ಲಾ ಕನಿಷ್ಟರಲ್ಲ. ಅಂರ್ತರಂಗಕ್ಕೆ ಅಂರ್ತಪ್ರಜ್ಞೆಯೇ ಸಾಕ್ಷಿ. ಅಂತರಾತ್ಮದ ಮಾತನ್ನು ಯಾರು ಕೇಳುತ್ತಾರೋ ಅವರುಗಳೆಲ್ಲಾ ಮಹಾತ್ಮರಾಗುತ್ತಾರೆ. ಬುದ್ದ, ಬಸವ, ಗಾಂಧಿ, ಅಂಬೇಡ್ಕರ್ ಇವರುಗಳೆಲ್ಲಾ ತಾಯಿ ಗರ್ಭದಿಂದ ಜನಿಸಿದವರು. ಅವರುಗಳೆಲ್ಲಾ ತಮ್ಮ ತಮ್ಮ ಕಾರ್ಯಸಾಧನೆಯಿಂದ ಮಹಾತ್ಮರಾಗಿ ವಿಶ್ವದ ಗಮನ ಸೆಳೆದರು ಎಂದು ತಿಳಿಸಿದರು.

         ಬುದ್ದ ಅರಮನೆಯನ್ನು ಬಿಟ್ಟು ಬೀದಿಗೆ ಬಂದರು. ದೇವರನ್ನು ತಂದೆ ತಾಯಿಗಳನ್ನು ನಂಬಬೇಕು. ಅವಮಾನಿಸಬಾರದು, ಅಗೌರವಿಸಬಾರದು. ಎಲ್ಲಾ ಶಕ್ತಿಗಿಂತ ದೊಡ್ಡ ಶಕ್ತಿ ತಂದೆ-ತಾಯಿಗಳು ಎಂಬುದನ್ನು ಯಾರು ಮರೆಯಬಾರದು. ನಿಮ್ಮ ವ್ರತ ಸಾರ್ಥಕವಾಗಬೇಕು. ರಾಜಕಾರಣಿಗಳು, ಸನ್ಯಾಸಿಗಳು, ಅಧಿಕಾರಿಗಳು, ಸಂಸಾರಿಗಳಲ್ಲೂ ಕೆಲವರು ಕೆಟ್ಟವರಿದ್ದಾರೆ. ಮಾನವ ಎಂದರೆ ದೌರ್ಬಲ್ಯ. ದೌರ್ಬಲ್ಯ ಎಂದರೆ ಮಾನವ. ತಪ್ಪು ಮಾಡದ ಮನುಷ್ಯ ಜಗತ್ತಿನಲ್ಲಿ ಯಾರು ಇಲ್ಲ. ಆದರೆ ಮಾಡಿದ ತಪ್ಪನ್ನು ತಿದ್ದುಕೊಂಡು ಸರಿದಾರಿಯಲ್ಲಿ ನಡೆಯಬೇಕು ಎಂದು ಅಯ್ಯಪ್ಪ ಮಾಲಾಧಾರಿಗಳಿಗೆ ಕಿವಿಮಾತು ಹೇಳಿದರು.

          ಧಾರ್ಮಿಕ ವಾತಾವರಣ ಎಲ್ಲರಿಗೂ ಬೇಕು. ಹಣ, ಐಶ್ವಯ, ಸೌಂದರ್ಯ ಎಲ್ಲವೂ ಇರುತ್ತದೆ. ಮನಸ್ಸಿಗೆ ನೆಮ್ಮದಿ ಮಾತ್ರ ಇರುವುದಿಲ್ಲ. ಅಮೇರಿಕಾದಲ್ಲಿ ಬೀದಿ ಬೀದಿಗಳಲ್ಲಿ ಆಂಜನೇಯ, ಗಣೇಶನ ದೇವಸ್ಥಾನಗಳಿವೆ. ಭಾರತೀಯ ಪರಂಪರೆಯನ್ನು ವಿದೇಶದವರು ಅನುಕರಿಸುತ್ತಿದ್ದಾರೆ ಎಂದರೆ ನಮ್ಮ ದೇಶದಲ್ಲಿ ಗಟ್ಟಿ ಸಂಪ್ರದಾಯವಿದೆ ಎನ್ನುವುದು ಗೊತ್ತಾಗುತ್ತದೆ. ಪ್ರಕೃತಿ ಅಸಮತೋಲನದಿಂದ ವಾತಾವರಣದಲ್ಲಿ ದುಸ್ಥಿತಿಯಾಗಿದೆ.

         ಅದಕ್ಕಾಗಿ ಪ್ರತಿಯೊಬ್ಬರು ಸತ್ಯ, ಧರ್ಮ, ನ್ಯಾಯದ ಹಾದಿಯಲ್ಲಿ ಸಾಗಬೇಕಾಗಿದೆ ಎಂದರು.ಅಯ್ಯಪ್ಪಮಾಲಾಧಾರಿ ಕೆ.ಟಿ.ಶಿವಕುಮಾರಸ್ವಾಮಿ ಮಾತನಾಡಿ ಶೋಕಿಗಾಗಿ ಅಯ್ಯಪ್ಪಮಾಲೆ ಧರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಒತ್ತಡ ಹಾಗೂ ಆಧುನಿಕ ಯುಗದಲ್ಲಿ ಮನಸ್ಸಿಗೆ ನೆಮ್ಮದಿ ಸಿಗಬೇಕಾದರೆ ದೇವರ ಸನ್ನಿಧಿಗೆ ಹೋಗಿ ಧ್ಯಾನ ಪೂಜೆ ಮಾಡಿದಾಗ ಮಾತ್ರ ಜೀವನದಲ್ಲಿ ಒಳ್ಳೆಯದಾಗುತ್ತದೆ. ಆಡಂಭರಕ್ಕಾಗಿ ದೇವರನ್ನು ಪೂಜಿಸುವುದಕ್ಕಿಂತ ಗಳಿಸಿ ಹಣದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದಾಗ ನಿಜವಾಗಿಯೂ ಭಗವಂತನಿಗೆ ಮೆಚ್ಚುಗೆಯಾಗುತ್ತದೆ ಎಂದು ತಿಳಿಸಿದರು.

          ಉದಯ್‍ಗುರುಸ್ವಾಮಿ, ರಮೇಶ್ ಗುರುಸ್ವಾಮಿ, ಮೋಹನ್‍ಸ್ವಾಮಿ ಭಜನಾಮಂಡಳಿ, ಚಾಮುಂಡೇಶ್ವರಿ ಅಯ್ಯಪ್ಪ ಭಜನಾ ಮಂಡಳಿಯವರು ಸುಮಾರು ಮೂರು ಗಂಟೆಗಳ ಕಾಲ ಸತತವಾಗಿ ಅಯ್ಯಪ್ಪನ ಹಾಡುಗಳನ್ನು ಹಾಡುವ ಮೂಲಕ ಮೈಮರೆತು ಅಯ್ಯಪ್ಪನನ್ನು ಧ್ಯಾನಿಸಿದರು. ನೂರಾರು ಅಯ್ಯಪ್ಪ ಮಾಲಾಧಾರಿಗಳು ಭಜನೆಯಲ್ಲಿ ಭಾಗಹಿಸಿದ್ದರು.ವೀಣಗೌರಣ್ಣ, ರೇಖ ಗಿರೀಶ್, ಶಶಿಕಲ ಶ್ರೀನಿವಾಸ್ ಇನ್ನು ಮುಂತಾದವರು ಪಡಿಪೂಜೆಯಲ್ಲಿ ಪಾಲ್ಗೊಂಡು ಆಯ್ಯಪ್ಪಸ್ವಾಮಿಗೆ ಭಕ್ತಿ ಸಮರ್ಪಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap