ದಾವಣಗೆರೆ:
ದಸ್ತಗಿರಿ ಆಗಿ ಬಂದವರಿಗೆ, ನೊಂದವರಿಗೆ ಕಾನೂನು ನೆರವು ನೀಡಲು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಗೂ ಕಾನೂನು ಸೇವಾ ಕೇಂದ್ರಗಳನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.
ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಕಾನೂನು ಸೇವಾ ಕೇಂದ್ರವನ್ನು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಸಿವಿಲ್ ನ್ಯಾಯಾಧೀಶರು ಆದ ಪ್ರಭು ಎನ್. ಬಡಿಗೇರ್ ಅವರೊಂದಿಗೆ ಸೇರಿ ಉದ್ಘಾಟಿಸಿ ಅವರು ಮಾತನಾಡಿದರು.
ಸುಪ್ರೀಂ ಕೋರ್ಟ್ ನಿರ್ದೇಶದನ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕಾನೂನ ಸೇವಾ ಪ್ರಾಧಿಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ಮೊದಲನೆಯ ಹಂತದಲ್ಲಿ ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ದಸ್ತಗಿರಿ ಆಗಿ ಬಂದ ಆರೋಪಿಗಳಿಗೆ ಹಾಗೂ ಪೊಲೀಸ್ ಠಾಣೆಗಳಿಗೆ ಬರುವ ನೊಂದವರಿಗೆ ಕಾನೂನು ನೆರವು, ಸಹಾಯ ನೀಡುವ ಉದ್ದೇಶದಿಂದ ಬಡಾವಣೆ ಠಾಣೆಯಲ್ಲಿ ಕಾನೂನು ಸೇವಾ ಕೇಂದ್ರ ಆರಂಭಿಸಲಾಗಿದ್ದು, ಈ ಕೆಂದ್ರಗಳನ್ನು ಜಿಲ್ಲೆಯ ಎಲ್ಲಾ ಠಾಣೆಗಳಲ್ಲೂ ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಈ ಕಾನೂನು ಸೇವಾ ಕೇಂದ್ರದಲ್ಲಿ ಓರ್ವ ನುರಿತ ಪ್ಯಾನಲ್ ವಕೀಲ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಕಾರ್ಯ ನಿರ್ವಹಿಸಲಿದ್ದು, ಇವರ ಬಳಿ ಪೊಲೀಸರಿಂದ ಬಂಧನವಾಗಿ ಬಂದವರು, ಠಾಣೆಗೆ ಬರುವ ನೊಂದವರು ಉಚಿತವಾಗಿ ಸೂಕ್ತ ಸಲಹೆ, ಮಾರ್ಗದರ್ಶ ಹಾಗೂ ಕಾನೂನು ನೆರವು ಪಡೆಯಬಹುದಾಗಿದ್ದು, ಬಂಧಿತರು ನೊಂದವರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು, ನ್ಯಾಯಾಧೀಶರು ಆದ ಪ್ರಭು ಎನ್ ಬಡಿಗೇರ್ ಮಾತನಾಡಿ, ದಸ್ತಗಿರಿ ಆಗಿ ಠಾಣೆಗಳಿಗೆ ಬರುವ ಆರೋಪಿಗಳಿಗೆ ಅನುಕೂಲವಾಗುವಂತೆ ಉಚಿತ ಕಾನೂನಿನ ಸಲಹೆ ಮತ್ತು ನೆರವು ನೀಡುವ ಉದ್ದೇಶದಿಂದ ಬಡಾವಣೆ ಪೊಲೀಸ್ ಠಾಣೆಯಲ್ಲಿ ‘ಕಾನೂನು ಸೇವಾ ಕೇಂದ್ರ’ ತೆರೆಯಲಾಗಿದ್ದು ಕಾನೂನಿನ ನೆರವು ಅವಶ್ಯಕತೆ ಇರುವವರು ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.
ದಸ್ತಗಿರಿ ಆಗಿ ಠಾಣೆಗೆ ಬರುವ ಅನೇಕ ಆರೋಪಿಗಳಿಗೆ ಕಾನೂನಿನ ನೆರವು ಪಡೆಯಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಸರ್ವೋಚ್ಛ ನ್ಯಾಯಾಲಯ ದಸ್ತಗಿರಿಯಾದ ಆರೋಪಿಗಳಿಗೆ ಉಚಿತ ಕಾನೂನಿನ ಸಲಹೆ ಮತ್ತು ನೆರವು ನೀಡುವ ಉದ್ದೇಶದಿಂದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕಾನೂನು ಸೇವಾ ಕೇಂದ್ರ ಆರಂಭಿಸಬೇಕೆಂದು ಆದೇಶಿಸಿದೆ. ಈ ಆದೇಶದ ಮೇರೆಗೆ ಇಂದು ದಾವಗಣಗೆರೆಯಲ್ಲಿ ಮೊದಲನೆಯದಾಗಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಈ ಕೇಂದ್ರ ತೆರೆಯಲಾಗಿದೆ ಎಂದರು.ಈ ಸಂದರ್ಭದಲ್ಲಿ ಡಿವೈಎಸ್‍ಪಿ ನಾಗೇಶ್ ಐತಾಳ್, ಪಿಎಸ್‍ಐ ವೀರಬಸಪ್ಪ ಕುಸಲಾಪುರ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
