ದಾವಣಗೆರೆ:
ಎಲ್ಲಿಯ ವರೆಗೂ ಜನತೆಗೆ ಕಾನೂನಿನ ಅರಿವು ಆಗಲ್ವೋ, ಅಲ್ಲಿಯ ವರೆಗೂ ನೆರವು ಸಿಗಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕುಲಕರ್ಣಿ ಅಂಬಾದಾಸ್ .ಜಿ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ವಕೀಲರ ಸಂಘದ ಸಭಾ ಭವನದಲ್ಲಿ ಶುಕ್ರವಾರ ಸಂಜೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಜನಸಂಖ್ಯೆ ಗಮನಿಸಿದರೆ, ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ಇದಕ್ಕೆ ಬಹುತೇಕರಿಗೆ ಕಾನೂನು ಅರಿವು ಇಲ್ಲದಿರುವುದೇ ಕಾರಣವಾಗಿದೆ. ದೇಶದಲ್ಲಿ ಎಷ್ಟೋ ಬುಡಕಟ್ಟು ಹಾಗೂ ಆದಿವಾಸಿ ಜನಾಂಗಳಿದ್ದು, ಅವರಿಗೆ ಕಾನೂನು ದತ್ತವಾಗಿ ಸಿಗಬೇಕಾದ ಸೌಲಭ್ಯಗಳು ದೊರೆಯದಾಗಿದೆ. ಇದಕ್ಕೆ ಕಾರಣ ಈ ಜನಾಂಗಳಿಗೆ ಕಾನೂನಿನ ಅರಿವು ಇಲ್ಲದಿರುವುದಾಗಿದೆ. ಹೀಗಾಗಿಯೇ ಇವರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳ ಮಾಹಿತಿಯೇ ಇಲ್ಲವಾಗಿದೆ. ಆದ್ದರಿಂದ ವಕೀಲರು ಸಾರ್ವಜನಿಕರಲ್ಲಿ ಕಾನೂನು ಅರಿವು ಮೂಡಿಸುವ ಸೌಲಭ್ಯ ಕೊಡಿಸುವಲ್ಲಿ ನೆರವಾಗಬೇಕೆಂದು ಹೇಳಿದರು.
ಲೋಕ ಅದಾಲತ್ ಹಾಗೂ ಕಾನೂನು ಸೇವೆ ಹಸ್ತಾಂತರಿಸಿದ ಬಳಿಕ ವಕೀಲರ ಮತ್ತು ನ್ಯಾಯಾಧೀಶರ ಜವಾಬ್ದಾರಿ ಹೆಚ್ಚಾಗಿದ್ದು, ಲೋಕ ಅದಾಲತ್ ಕಾರ್ಯಕ್ರಮ ಮತ್ತಷ್ಟು ಸಶಕ್ತಗೊಳ್ಳಬೇಕಾದರೆ, ವಕೀಲರ ಸಹಕಾರ ಮುಖ್ಯವಾಗಿದೆ ಎಂದ ಅವರು, ಒಂದು ವಾರ ಕಾಲ ಕಾನೂನು ಅರಿವು ಮೂಡಿಸಲು ಮನೆ, ಮನೆ ಜಾಗೃತಿ ಕಾರ್ಯಕ್ರಮ ನಡೆಸಲು ತಿಳಿಸಿ ನ್ಯಾಯಾಂಗ ಇಲಾಖೆಯು ಸುತ್ತೋಲೆ ಹೊರಡಿಸಿದೆ ಎಂದರು.
ವಕೀಲರ ಬಳಿ ಪ್ರಕರಣ ಬಂದಾದ ತಕ್ಷಣವೇ ತೀರ್ಪು ಏನಾಗಬಹುದೆಂಬ ಊಹೆಯನ್ನು ವಕೀಲರು ಮಾಡುತ್ತಾರೆ. ಹೀಗಾಗಿಯೇ ವಕೀಲರು ಮೊದಲ ನ್ಯಾಯಾಧೀಶರಾಗಿದ್ದಾರೆ. ವಕೀಲರ ಮುಂದೆ ಪ್ರಕರಣಗಳು ಬಂದಾಗ ಪ್ರಕರಣಗಳನ್ನು ಲೋಕ ಅದಾಲತ್‍ಗೆ ಶಿಫಾರಸು ಮಾಡಿದರೆ, ಪ್ರಕರಣಗಳನ್ನು ಆದಷ್ಟು ಬೇಗನೇ ಇತ್ಯರ್ಥ ಪಡಿಸಲು ಸಹಕಾರಿಯಾಗಲಿದೆ ಎಂದರು
ಓರ್ವ ನ್ಯಾಯಾಧೀಶರ ಮುಂದೆ 500 ಪ್ರಕರಣಗಳಿದ್ದರೆ, ಸಮರ್ಥವಾಗಿ ವಾದ-ವಿವಾದ ನಡೆಸಿ, ಪರಿಣಾಮಕಾರಿಯಾಗಿ ತೀರ್ಪು ನೀಡಲು ಸಹಕಾರಿಯಾಗಲಿದೆ. ಆದರೆ, ಪ್ರಸ್ತುತ ಓರ್ವ ನ್ಯಾಯಾಧೀಶರ ಎದುರು ಒಂದರಿಂದ ಎರಡು ಸಾವಿರ ಪ್ರಕರಣಗಳಿವೆ. ಹೀಗಾಗಿ ಪ್ರಕರಣಗಳನ್ನು ನಿಯಮಿತ ಅವಧಿಯಲ್ಲಿ ಇತ್ಯರ್ಥಪಡಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಗಮನಿಸಿದ ಸರ್ಕಾರ ಹಾಗೂ ನ್ಯಾಯಾಂಗ ಇಲಾಖೆಯು ಆರ್ಬಿಟೇಷನ್, ಲೋಕ ಅದಾಲತ್ ಹಾಗೂ ಮಿಡಿಟೇಷನ್ ಮೂಲಕ ನ್ಯಾಯದಾನ ಮಾಡುವ ಅವಕಾಶ ನೀಡಿದೆ. ಆದರೆ, ಲೋಕ ಅದಾಲತ್‍ನಲ್ಲಿ ಇತ್ಯರ್ಥಗೊಳ್ಳುತ್ತಿರುವ ಪ್ರಕರಣಗಳು ತೃಪ್ತಿಕರವಾಗಿಲ್ಲ. ಆದ್ದರಿಂದ ಕಾನೂನು ಸೇವಾ ಪ್ರಾಧಿಕಾರದವರು, ಇರುವ ಅವಕಾಶವನ್ನು ಬಳಿಸಿಕೊಂಡು ರಾಜೀಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು.
ಹಲವರಿಗೆ ಕಾನೂನು ಅರಿವು ಇಲ್ಲದ ಕಾರಣ ಅವರಿಗೆ ಹಕ್ಕಿನ ಪರಿವೇ ಇಲ್ಲವಾಗಿದೆ. ಹಕ್ಕುಗಳಿಂದ ಚ್ಯುತಿಯಾದವರನ್ನು ಭೇಟಿ ಮಾಡಿಸಿದರೆ, ಸಮಸ್ಯೆಗಳನ್ನು ನಿವಾರಣೆ ಮಾಡಬಹುದಾಗಿದೆ ಎಂದ ಅವರು ಪ್ರಾಧಿಕಾರದಿಂದ ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ಉಚಿತ ವಕೀಲ ಸೇವೆ ನೀಡಲಾಗುವುದು. ಆದರೆ, ಪುಕ್ಕಟೆಯಾವಿ ವಕೀಲಿ ಸೇವೆ ದೊರೆತರೆ ನ್ಯಾಯ ಸಿಗದಿರಬಹುದೆಂಬ ಮನೋಭಾವನೆ ಜನರಲ್ಲಿದ್ದು, ಇದರಿಂದ ಮೊದಲು ಹೊರ ಬರಬೇಕೆಂದು ಕಿವಿಮಾತು ಹೇಳಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ, ಪ್ರಾಧಿಕಾರದ ಸದಸ್ಯ ಎಲ್.ಹೆಚ್.ಅರುಣಕುಮಾರ್, 3ನೇ ಹೆಚ್ಚುವರಿ ನ್ಯಾಯಾಧೀಶ ಐ.ಪಿ. ನಾಯ್ಕ್, 2ನೇ ಜೆಎಂಎಫ್‍ಸಿ ನ್ಯಾಯಾಧೀಶ ಯತೀಶ್, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ದಿವಾಕರ್ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ