ಕಾನೂನು ಅರಿವು ಜಾಗೃತಿ ಕಾರ್ಯಕ್ರಮ

ಬ್ಯಾಡಗಿ:

      ಶಿಕ್ಷಣವನ್ನು ಪಡೆದುಕೊಳ್ಳುವ ಮೊದಲೇ ಕುಟುಂಬದಲ್ಲಿನ ಆರ್ಥಿಕ ಒತ್ತಡ ನಿಭಾಯಿಸಲು ಎಳೆ ವಯಸ್ಸಿನ ಮಕ್ಕಳ ನ್ನು ಬೇರೊಬ್ಬರ ಬಳಿ ದುಡಿಮೆಗೆ ಕಳುಹಿಸುವ ಮೂಲಕ ಮಕ್ಕಳ ಹಕ್ಕುಗಳ ರಕ್ಷಣೆ ಕಾನೂನು ದುರ್ಬಳಕೆಯಾಗುತ್ತಿದೆ, ಇದನ್ನು ಅರ್ಥೈಸಿಕೊಂಡು ಸಂಸ್ಕಾರಯುತ ಮತ್ತು ಶಕ್ತಿಯುತ ಸಮಾಜ ನಿರ್ಮಾಣಕ್ಕೆ ಪಾಲಕರು ಸಹಕರಿಸುವಂತೆ ಹಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ಇಬ್ರಾಹಿಂ ಮುಜಾವರ ಕರೆ ನೀಡಿದರು.

       ಪಟ್ಟಣದ ತಾಲ್ಲೂಕ ಪಂಚಾಯತಿ ಆವರಣದಲ್ಲಿ, ತಾಲ್ಲೂಕು ಕಾನೂನುಗಳ ಸೇವಾ ಸಮಿತಿ, ತಾಲ್ಲೂಕ ಪಂಚಾಯತಿ, ನ್ಯಾಯವಾದಿಗಳ ಸಂಘ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಪಾಲನೆ ಪೋಷಣೆ ಅಗತ್ಯವಿರುವ ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳು ಕುರಿತು ಕಾನೂನು ಅರಿವು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

       ಮಕ್ಕಳೆಂದರೇ ದೇವರ ಸಮಾನವೆಂದು ನಂಬಿರುವಂತಹ ಭಾರತೀಯ ಸಂಸ್ಕøತಿಯಲ್ಲಿ ಅವರಿಗೆ ಸೂಕ್ತವಾದ ಮತ್ತು ನ್ಯಾಯಸಮ್ಮತವಾಗಿ ಸಿಗಬೇಕಾದಂತಹ ಸೌಲಭ್ಯಗಳು ದೊರೆಯದಿರುವುದು ದುರದೃಷ್ಟಕರ ವಿಚಾರ, ಅದರಲ್ಲೂ ತಂದೆ ಅಥವಾ ತಾಯಿಯನ್ನು ಕಳೆದುಕೊಂಡಂತಹ ಕುಟುಂಬದಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿದ್ದು ಬಹಳಷ್ಟು ಸಂದರ್ಭಗಳಲ್ಲಿ ನ್ಯಾಯಾಲಯದ ಮೊರೆಗೆ ಹೋದಂತಹ ಉದಾಹರಣೆಗಳಿವೆ, ಎಲ್ಲವೂ ನ್ಯಾಯಾಲಯದಲ್ಲಿಯೇ ಇತ್ಯರ್ಥವಾಗಬೇಕೆಂದಿಲ್ಲ ಮಕ್ಕಳು ನಂಬಿರುವಂತಹ ಪೋಷಕರು ಯಾವುದೇ ರೀತಿಯ ಅನ್ಯಾಯವಾಗದಂತೆ ನಡೆದುಕೊಂಡರಷ್ಟೇ ಸಾಕು ಎಂದರು.

        ಉತ್ತಮ ತೊಡುಗೆಯಿಂದ ಸತ್ಪ್ರಜೆಯಾಗಲ್ಲ: ಅತಿಥಿಗಳಾಗಿ ಪಾಲ್ಗೊಂಡ ಕಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ರಾಜೇಶ್ ಹೊಸ್ಮನಿ ಮಾತನಾಡಿ, ಉತ್ತಮ ಉಡುಗೆ ತೊಡುಗೆಗಳನ್ನು ಕೊಡಿಸುವುದಷ್ಟೇ ಪಾಲಕರ ಅಥವಾ ಪೋಷಕರ ಜವಾಬ್ಧಾರಿ ಯಾಗಬಾರದು, ಇದರಿಂದ ಮಕ್ಕಳು ಉತ್ತಮ ನಾಗರಿಕರಾಗಿ ಅಥವಾ ಸತ್ಪ್ರಜೆಯಾಗಿ ಹೊರಹೊಮ್ಮಲು ಸಾಧ್ಯವಿಲ್ಲ, ಬದಲಾಗಿ ಶಿಕ್ಷಣ, ಮಾನವೀಯ ಮೌಲ್ಯ ಹಾಗೂ ಬದುಕಿನ ಜವಾಬ್ದಾರಿಗಳನ್ನು ತಿಳಿಸುವ ಮೂಲಕ ದೇಶದ ಒಂದು ಶಕ್ತಿಯಾಗಿ ರೂಪುಗೊಳ್ಳಲು ಅವಶ್ಯವಿರುವ ಎಲ್ಲ ಕ್ರಮಗಳನ್ನು ಪಾಲಕರು ತೆಗೆದುಕೊಳ್ಳಬೇಕು ಎಂದರು.

       ಮನೆಯೇ ಮೊದಲ ನ್ಯಾಯಾಲಯವಾಗಬೇಕು: ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪ್ರಕಾಶ ಬನ್ನಿಹಟ್ಟಿ ಮಾತನಾಡಿ, ಬಾಲಾಪರಾಧಗಳು ಹೆಚ್ಚಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಮಕ್ಕಳು ತಪ್ಪು ಮಾಡಿದರೂ ಸಹ ಪಾಲಕರು ಯಾವುದೇ ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ ಸಂಗತಿ, ಶಾಲೆಯಲ್ಲಿ ಪೆನ್ ಅಥವಾ ಪೆನ್ಸಿಲ್ ಕಳ್ಳತನ ಮಾಡಿಕೊಂಡ ಬಂದ ಮಕ್ಕಳಿಗೆ ತಾನು ಮಾಡಿದ್ದು ತಪ್ಪು ಎಂದು ತಾಯಿ ಹೇಳದಿದ್ದರೇ ಬಹುಶಃ ಅದಕ್ಕಿಂತ ದೊಡ್ಡ ದುರಂತ ಬೇರೊಂದಿಲ್ಲ,

        ಹೀಗಾಗಿ ಗ್ರಾಮೀಣ ಪ್ರದೇಶದ ಬಹುತೇಕ ಕಡೆಗಳಲ್ಲಿ ಎಳೆ ವಯಸ್ಸಿನ ಮಕ್ಕಳು ದುಶ್ಚಟಗಳ ದಾಸರಾಗುತ್ತಿದ್ದು ಕುಡಿಯಲು ಹಣವಿಲ್ಲದಿದ್ದಾಗ ತಮ್ಮ ಸ್ವಂತ ಮನೆ ಸೇರಿದಂತೆ ಎಲ್ಲೆಂದರಲ್ಲಿ ಕಳ್ಳತನ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ, ಆ ಕಾರಣಕ್ಕಾಗಿ ಮನೆಯೇ ಮೊದಲ ನ್ಯಾಯಾಲಯವಾಗಬೇಕು ಜನನಿ ತಾಯಿ ಮೊದಲ ನ್ಯಾಯಾಧೀಶೆಯಾಗಿ ಕೆಲಸ ಮಾಡುವ ಮೂಲಕ ತಪ್ಪು ಮಾಡುವ ಮಕ್ಕಳಿಗೆ ಶಿಕ್ಷೆ ಕೊಡುವಂತಹ ಕೆಲಸವಾಗಬೇಕಾಗಿದೆ ಎಂದರು.

        ವೇದಿಕೆಯಲ್ಲಿ ಸರ್ಕಾರಿ ಅಭಿಯೋಜಕಿ ಸಿಂಧೂ ಪೋತದಾರ, ಬಸವರಾಜ ಯಳವತ್ತಿ, ಸಿಡಿಪಿಓ ವಿಜಯಕುಮಾರ, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಎಸ್.ಎಸ್.ಶೆಟ್ಟರ, ಕಾರ್ಯದರ್ಶಿ ಸಿ.ಪಿ.ದೊಣ್ಣೇರ, ಸಹಕಾರ್ಯದರ್ಶಿ ಎಂ.ಕೆ.ಕೋಡಿಹಳ್ಳಿ, ಟಿಇಓ ಪರುಶರಾಮ ಪೂಜಾರ ಹಾಗೂ ಇನ್ನಿತರರು ಉಪಸ್ಥಿತರಿದ್ದರು..

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link