ಹುಳಿಯಾರು
ಹುಳಿಯಾರು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕುಷ್ಠರೋಗ ನಿರ್ಮೂಲನಾ ಆಂದೋಲನದ ಪ್ರಯುಕ್ತ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಆಂದೋಲನಕ್ಕೆ ಚಾಲನೆ ನೀಡಿದ ಸರ್ಕಾರಿ ಆಸ್ಪತ್ರೆಯ ಹಿರಿಯ ಆರೋಗ್ಯ ಸಹಾಯಕ ಸಿ.ವಿ. ವೆಂಕಟರಾಮಯ್ಯ ಮಾತನಾಡಿ ಅ.22ರಿಂದ ನ.4 ರವರೆಗೆ ಕುಷ್ಠರೋಗ ನಿರ್ಮೂಲನಾ ಆಂದೋಲನ ಹಮ್ಮಿಕೊಳ್ಳಲಾಗಿದೆ. ಈ ಆಂದೋಲನದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ಪರೀಕ್ಷೆ ನಡೆಸಲಿದ್ದು ಸಾರ್ವಜನಿಕರು ತಪ್ಪದೇ ಪರೀಕ್ಷೆಗೆ ಒಳಗಾಗಬೇಕೆಂದು ಮನವಿ ಮಾಡಿದರು.
ಸ್ಪರ್ಶ ಜ್ಞಾನವಿಲ್ಲದ, ತಿಳಿಬಿಳಿ ತಾಮ್ರ ವರ್ಣದ ಮಚ್ಚೆಗಳು ದೇಹದ ಯಾವುದೇ ಭಾಗದಲ್ಲಿ ಕಂಡು ಬಂದರೂ ಸಹ ಹೆದರದೆ ತಮ್ಮ ಮನೆ ಬಾಗಿಲಿಗೆ ಬರುವ ಆರೋಗ್ಯ ಇಲಾಖೆ ಸಿಬ್ಬಂದಿಗೆ ತೋರಿಸುವ ಮೂಲಕ ರೋಗ ಪತ್ತೆ ಹಚ್ಚುವ ಕಾರ್ಯಕ್ಕೆ ಸಹಕರಿಸುವಂತೆ ಅಥವಾ ಸಮೀಪದ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ತೋರಿಸುವಂತೆ ಮನವಿ ಮಾಡಿದರು.
ಚರ್ಮ ಮತ್ತು ನರಗಳಿಗೆ ಸಂಬಂಧಿಸಿದ ಯಾವುದೇ ತೊಂದರೆ ಕಂಡು ಬಂದಲ್ಲಿ ಸ್ಥಳೀಯ ಆರೋಗ್ಯ ಕಾರ್ಯಕರ್ತರಿಂದ ಪರೀಕ್ಷೆಗೊಳಗಾಗಬೇಕು . ಕಾಯಿಲೆ ದೃಢಪಟ್ಟಲ್ಲಿ ಕೂಡಲೇ ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾದ ಚಿಕಿತ್ಸೆ ಲಭ್ಯವಿದ್ದು ಸರಿಯಾದ ಚಿಕಿತ್ಸೆ ಮೂಲಕ ಕುಷ್ಠರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬಹುದು ಎಂದರು.
ಈ ವೇಳೆ ಆರೋಗ್ಯ ಇಲಾಖೆಯ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಅನಸೂಯಮ್ಮ , ಸರ್ಕಾರಿ ಆಸ್ಪತ್ರೆಯ ಚಂದ್ರಕಲಾ, ಮಹಾಲಕ್ಷ್ಮಿ , ಜ್ಯೋತಿಕಲಾ, ಚಂದ್ರಕಾಂತ್ ಸೇರಿದಂತೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸ್ವಯಂ ಸೇವಾ ಕಾರ್ಯಕರ್ತರು ಪಾಲ್ಗೊಂಡಿದ್ದರು.
