ತುಮಕೂರು
ವಿಶೇಷ ವರದಿ:ಆರ್.ಎಸ್.ಅಯ್ಯರ್
ತುಮಕೂರು ಜಿಲ್ಲೆಯಲ್ಲಿ 2019 ರ ಜನವರಿ 1 ರಿಂದ ಆಗಸ್ಟ್ 5 ರವರೆಗಿನ ಅವಧಿಯಲ್ಲಿ ವಾಡಿಕೆಗಿಂತ ಅತಿ ಕಡಿಮೆ ಪ್ರಮಾಣದ ಮಳೆ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಆಗಿದ್ದ ಮಳೆಯ ಪ್ರಮಾಣಕ್ಕಿಂತ ಈಗ ಕಡಿಮೆ ಆಗಿದೆಯೆಂಬುದು ಕಳವಳಕ್ಕೆ ಎಡೆ ಮಾಡುವಂತಿದೆ.
ಜನವರಿಯಿಂದ ಆಗಸ್ಟ್ 5 ರವರೆಗೆ ವಾಡಿಕೆ ಪ್ರಕಾರ 368.6 ಮಿಲಿ ಮೀಟರ್ ಮಳೆ ಆಗಬೇಕು.
ಆದರೆ ಈ ವರ್ಷ ಈ ಅವಧಿಯಲ್ಲಿ ಆಗಿರುವ ಸರಾಸರಿ ಮಳೆಯ ಪ್ರಮಾಣ ಕೇವಲ 202.9 ಮಿ.ಮೀ. ಮಾತ್ರ. ಕಳೆದ ವರ್ಷ ಇದೇ ಅವಧಿಯಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಿತ್ತಾದರೂ, 275.6 ಮಿ.ಮೀ.ನಷ್ಟು ಮಳೆ ಆಗಿತ್ತು. ಅಂದರೆ ಈ ವರ್ಷದ ಮಳೆ ಪ್ರಮಾಣಕ್ಕಿಂತ ಅದು ಸ್ವಲ್ಪ ಅಧಿಕವಾಗಿಯೇ ಇತ್ತು. ಆದರೆ ಈ ಬಾರಿ ಅದಕ್ಕಿಂತ ಕಡಿಮೆ ಆಗಿರುವುದೇ ಆತಂಕಕ್ಕೆ ಕಾರಣವಾಗಿದೆ.
ಆಗಿರುವ ಮಳೆಯ ಪ್ರಮಾಣವನ್ನು ತಾಲ್ಲೂಕುವಾರು ಹೋಲಿಕೆ ಮಾಡಿದರೆ, ಪಾವಗಡ ತಾಲ್ಲೂಕಿನಲ್ಲಿ ಅತಿ ಕಡಿಮೆ ಅಂದರೆ 130.2 ಮಿ.ಮೀ. ಮಳೆ ಆಗಿದೆ. ಅತಿ ಹೆಚ್ಚು ಅಂದರೆ ತುಮಕೂರು ತಾಲ್ಲೂಕಿನಲ್ಲಿ 304.1 ಮಿ.ಮೀ. ಮಳೆ ಆಗಿರುವುದು ಅಂಕಿ ಅಂಶಗಳಿಂದ ಬೆಳಕಿಗೆ ಬಂದಿದೆ.
ತಾಲ್ಲೂಕುವಾರು ಮಳೆ ವಿವರ :
ಈ ವರ್ಷ ತಾಲ್ಲೂಕುವಾರು ಆಗಬೇಕಿದ್ದ ಸಂಚಿತ ವಾಡಿಕೆ ಮಳೆ ಪ್ರಮಾಣ ಹಾಗೂ ಈಗ ಆಗಿರುವ ಮಳೆಯ ಪ್ರಮಾಣದ ವಿವರ ಮಿಲಿ ಮೀಟರ್‍ಗಳಲ್ಲಿ ಈ ರೀತಿ ಇದೆ :-
ತುಮಕೂರು ತಾಲ್ಲೂಕು: ವಾಡಿಕೆ ಮಳೆ- 359, ವಾಸ್ತವಿಕ ಮಳೆ-304.1; ಗುಬ್ಬಿ ತಾಲ್ಲೂಕು: ವಾಡಿಕೆ ಮಳೆ-315, ವಾಸ್ತವಿಕ ಮಳೆ- 157.2; ಕುಣಿಗಲ್ ತಾಲ್ಲೂಕು: ವಾಡಿಕೆ ಮಳೆ- 349, ವಾಸ್ತವಿಕ ಮಳೆ-150.1; ತಿಪಟೂರು ತಾಲ್ಲೂಕು: ವಾಡಿಕೆ ಮಳೆ-275, ವಾಸ್ತವಿಕ ಮಳೆ- 261.1; ಚಿಕ್ಕನಾಯಕನಹಳ್ಳಿ ತಾಲ್ಲೂಕು: ವಾಡಿಕೆ ಮಳೆ- 296, ವಾಸ್ತವಿಕ ಮಳೆ- 163.9; ತುರುವೇಕೆರೆ ತಾಲ್ಲೂಕು: ವಾಡಿಕೆ ಮಳೆ-288, ವಾಸ್ತವಿಕ ಮಳೆ-212.9; ಮಧುಗಿರಿ ತಾಲ್ಲೂಕು: ವಾಡಿಕೆ ಮಳೆ-254, ವಾಸ್ತವಿಕ ಮಳೆ-192.1; ಶಿರಾ ತಾಲ್ಲೂಕು: ವಾಡಿಕೆ ಮಳೆ-221, ವಾಸ್ತವಿಕ ಮಳೆ-192.5; ಕೊರಟಗೆರೆ ತಾಲ್ಲೂಕು: ವಾಡಿಕೆ ಮಳೆ-281, ವಾಸ್ತವಿಕ ಮಳೆ-264.4; ಪಾವಗಡ ತಾಲ್ಲೂಕು: ವಾಡಿಕೆ ಮಳೆ-204, ವಾಸ್ತವಿಕ ಮಳೆ-130.2.
ಕಳೆದ ವರ್ಷ ಅಂದರೆ 2018 ರಲ್ಲಿ ತಾಲ್ಲೂಕುವಾರು ಆಗಿದ್ದ ಸಂಚಿತ ಮಳೆಯ ಪ್ರಮಾಣವನ್ನು ಗಮನಿಸಿದಾಗ ಈ ವರ್ಷದ ಪರಿಸ್ಥಿತಿ ಅರ್ಥವಾಗುತ್ತದೆ. ತುಮಕೂರು-499.9, ಗುಬ್ಬಿ- 331.5, ಕುಣಿಗಲ್- 349.7, ತಿಪಟೂರು- 213.8, ಚಿಕ್ಕನಾಯಕನಹಳ್ಳಿ- 146.1, ತುರುವೇಕೆರೆ- 380.8, ಮಧುಗಿರಿ- 183.1, ಶಿರಾ- 225.2, ಕೊರಟಗೆರೆ- 291.7, ಪಾವಗಡ-133.9 ಮಿಲಿ ಮೀಟರ್‍ಗಳಷ್ಟು ಮಳೆ ಆಗಿತ್ತು.
ಜನವರಿ ಮಾಹೆಯಲ್ಲಿ ಜಿಲ್ಲೆಯಲ್ಲಿ ವಾಡಿಕೆ ಮಳೆ ಸರಾಸರಿ 3 ಮಿ.ಮೀ. ಆಗಬೇಕು. ಆದರೆ ಆ ತಿಂಗಳಲ್ಲಿ 0.9 ಮಿ.ಮೀ.ಯಷ್ಟು ಮಾತ್ರ ಮಳೆ ಬಂದಿದೆ. ಫೆಬ್ರವರಿ ಮಾಹೆಯಲ್ಲಿ ವಾಡಿಕೆ ಮಳೆ 3.2 ಮಿ.ಮೀ.ನಷ್ಟು ಆಗಬೇಕಿದ್ದು, 6.2 ಮಿ.ಮೀ. ಆಗಿದೆ. ಮಾರ್ಚ್ ತಿಂಗಳಿನಲ್ಲಿ ವಾಡಿಕೆ ಮಳೆ ಪ್ರಮಾಣವು 7.7 ಮಿ.ಮೀ. ಇದ್ದು, ಕೇವಲ 0.3 ಮಿ.ಮೀ. ಆಗಿದೆ. ಏಪ್ರಿಲ್ ಮಾಹೆಯಲ್ಲಿ ವಾಡಿಕೆ ಮಳೆಯು 36.3 ಮಿ.ಮೀ. ಆಗಬೇಕಿದ್ದು, ಕೇವಲ 14.3 ಮಿ.ಮೀ. ಮಾತ್ರ ಆಗಿದೆ. ಮೇ ತಿಂಗಳಿನಲ್ಲಿ 92.3 ಮಿ.ಮೀ.ನಷ್ಟು ವಾಡಿಕೆ ಮಳೆ ಆಗಬೇಕಿದ್ದು, 74.13 ಮಿ.ಮೀ. ಮಾತ್ರ ಮಳೆ ಬಂದಿದೆ. ಜೂನ್ ತಿಂಗಳಿನಲ್ಲಿ 66.20 ಮಿ.ಮೀ.ನಷ್ಟು ವಾಡಿಕೆ ಮಳೆ ಬೀಳಬೇಕಿದ್ದು, ಈ ಒಂದು ತಿಂಗಳು ಮಾತ್ರ ವಾಡಿಕೆಗಿಂತ ಅಧಿಕ ಅಂದರೆ 74.27 ಮಿ.ಮೀ. ಮಳೆ ಬಂದಿದೆ. ಜುಲೈ ತಿಂಗಳಿನಲ್ಲಿ ವಾಡಿಕೆ ಮಳೆಯು 75.40 ಮಿ.ಮೀ. ಬರಬೇಕಿದ್ದು, 32.30 ಮಿ.ಮೀ.ಯಷ್ಟು ಮಾತ್ರ ಮಳೆ ಬಂದಿದೆ. ಆಗಸ್ಟ್ ತಿಂಗಳಿನಲ್ಲಿ ವಾಡಿಕೆ ಮಳೆ ಪ್ರಮಾಣವು 84.50 ಮಿ.ಮೀ. ಇದ್ದು, ಆಗಸ್ಟ್ 1ರಿಂದ 5 ರವರೆಗೆ ಜಿಲ್ಲಾದ್ಯಂತ ಸರಾಸರಿ 0.47 ಮಿ.ಮೀ. ಮಳೆ ಬಂದಿದೆ.
ಮಳೆಯ ಕೊರತೆಯಿಂದ ಜಿಲ್ಲಾದ್ಯಂತ ಕೃಷಿ ಚಟುವಟಿಕೆಗಳಿಗೆ ಬಲವಾದ ಪೆಟ್ಟು ಬಿದ್ದಿದೆಯಲ್ಲದೆ, ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ಕುಡಿಯುವ ನೀರಿನ ಸಮಸ್ಯೆಯೂ ಪ್ರಬಲವಾಗಿಯೇ ಕಾಡತೊಡಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
