ಚಿತ್ರದುರ್ಗ.
ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಹಬ್ಬವಾಗಿದ್ದು, ಲೋಕಸಭೆ ಚುನಾವಣೆಗೆ ಏ. 18 ರಂದು ಮತದಾನ ನಡೆಯಲಿದ್ದು, ಮಂಗಳ ಮುಖಿಯರು (ಲೈಂಗಿಕ ಅಲ್ಪಸಂಖ್ಯಾತರು) ತಪ್ಪದೆ ಮತದಾನ ಮಾಡಬೇಕು. ಮತದಾನ ಮಾಡಿದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಧ್ವನಿಯೂ ಹೆಚ್ಚಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ್ದ ಮತದಾನದ ಮಹತ್ವ, ಇವಿಎಂ, ವಿವಿ ಪ್ಯಾಟ್ ಬಳಕೆ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಾದ್ಯಂತ ಸುಮಾರು 700 ಲೈಂಗಿಕ ಅಲ್ಪಸಂಖ್ಯಾತರು ಇದ್ದು, ಕಳೆದ ವಿಧಾನಸಭೆ ಚುನವಾಣೆಯಲ್ಲಿ 68 ಜನ ಮತದಾನ ಮಾಡಿದ್ದಾರೆ, ಈ ಬಾರಿಯ ಲೋಕಸಭಾ ಚುನಾವಣೆಗೆ ಮತದಾನ ಮಾಡಲು ಮತದಾರರ ಪಟ್ಟಿಯಲ್ಲಿ 89 ಲೈಂಗಿಕ ಅಲ್ಪಸಂಖ್ಯಾತರು ಹೆಸರು ನೋಂದಾಯಿಸಿಕೊಂಡಿದ್ದಾರೆ, ಇನ್ನು ಉಳಿದವರು ಯಾಕೆ ನೋಂದಾಯಿಸಿಕೊಂಡಿಲ್ಲ ಎಂದು ಲೈಂಗಿಕ ಅಲ್ಪಸಂಖ್ಯಾತರ ಮುಖಂಡರಾದ ಚಂದ್ರಕಲಾರನ್ನು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅವರು, ಕೆಲವರು ಮನೆಗಳಲ್ಲಿ ಕುಟುಂಬದ ಜೊತೆ ಇದ್ದು, ಅವರ ಹೆಸರಗಳು ಗುರುತಿನ ಚೀಟಿಗಳಲ್ಲಿ ಪುರುಷರೆಂದು ಬಂದಿರುವ ಪ್ರಕರಣಗಳೇ ಹೆಚ್ಚು. ಹೀಗಾಗಿ ಅವರು ಸೀರೆ ತೊಟ್ಟು ಸಮಾಜದ ಮುಖ್ಯವಾಹಿನಿಯಲ್ಲಿ ಮಂಗಳ ಮುಖಿಯರು ಎಂದು ಗುರುತಿಸಿಕೊಳ್ಳಲು ಮುಜುಗರ ಅನುಭವಿಸುತ್ತಿದ್ದಾರೆ. ಸಮಾಜದಲ್ಲಿ ಮಂಗಳ ಮುಖಿಯರು ಎಂದು ಗುರುತಿಸಿಕೊಂಡವರ ಪೈಕಿ 89 ಜನ ಮಾತ್ರ ಮತದಾರರ ಪಟ್ಟಿಯಲ್ಲಿ ನೊಂದಾಯಿಸಿಕೊಂಡಿದ್ದಾರೆ ಎಂದು ಹೇಳಿದರು.
ಸಿಇಒ ಸತ್ಯಭಾಮ ಮಾತನಾಡಿ, ಎಲ್ಲರಂತೆಯೆ ತೃತೀಯ ಲಿಂಗಿಗಳಿಗೂ ಪ್ರಜಾಪ್ರಭುತ್ವದಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಗೆ ವ್ಯವಸ್ಥೆಯಿದ್ದು, ಏ.18 ರಂದು ಎಲ್ಲರೂ ತಪ್ಪದೆ ಮತದಾನ ಮಾಡಬೇಕು. ಮತದಾನ ಮಾಡಿದರೆ ನಿಮ್ಮ ಸಮಸ್ಯೆಗಳನ್ನು ನೀವು ಆಯ್ಕೆ ಮಾಡಿದ ಜನಪ್ರತಿನಿಧಿಗಳ ಗಮನಕ್ಕೆ ತಂದು, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನೈತಿಕತೆ ಇರುತ್ತದೆ ಎಂದು ತಿಳಿಸಿದರು.
ಇದಕ್ಕೆ ಲೈಂಗಿಕ ಅಲ್ಪಸಂಖ್ಯಾತರೆಲ್ಲ್ಲರೂ ಧ್ವನಿಗೂಡಿಸಿ ನಾವೆಲ್ಲರೂ ತಪ್ಪದೆ ಈ ಬಾರಿ ಮತದಾನ ಮಾಡುತ್ತೇವೆ. ಅದರೆ ನಮಗೆ ವಾಸಮಾಡಲು ಮನೆಗಳು ಇಲ್ಲ. ಮನೆ ಇದ್ದವರಿಗೇ ಮನೆಗಳನ್ನು ಕೊಡುತ್ತಾರೆ, ನಮಗೆ ಮನೆ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಸ್ವಂತ ನಿವೇಶನ ಹೊಂದಿದವರಿಗೆ ಮನೆ ನಿರ್ಮಿಸಿಕೊಳ್ಳಲು ನೆರವು ನೀಡುವ ಯೋಜನೆಗಳು ಲಭ್ಯವಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಈ ವಿಷಯದ ಬಗ್ಗೆ ಈಗ ಹೆಚ್ಚು ಚರ್ಚೆ ಮಾಡುವುದು, ನೀತಿ ಸಂಹಿತೆಯ ಉಲ್ಲಂಘನೆ ಮಾಡಿದಂತಾಗುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರೊಂದಿಗೆ ಮತ್ತೊಮ್ಮೆ ಸಭೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ರಾಜಾನಾಯಕ್ ಮಾತನಾಡಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ, ಚುನಾವಣಾ ಗುರುತಿನ ಚೀಟಿಯನ್ನು ಪಡೆಯಲು ಎಲ್ಲ ಲೈಂಗಿಕ ಅಲ್ಪಸಂಖ್ಯಾತರು ಮುಂದಾಗಬೇಕು ಎಂದರು.
ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಕೆ.ಕೆ. ಕಾಮನಿ ಮಾತನಾಡಿ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕನ್ನು ನೀಡಿದ್ದು, ಎಲ್ಲರು ಏ. 18 ರಂದು ತಪ್ಪದೆ ಮತದಾನ ಮಾಡಬೇಕು. ಅಲ್ಲದೆ, ನೆರೆಹೊರೆಯ ಎಲ್ಲ ಸ್ನೇಹಿತರು, ಸಂಬಂಧಿಕರಿಗೂ ಮತದಾನದ ಮಹತ್ವ ತಿಳಿಸಬೇಕು. ಯಾವ ಆಭ್ಯರ್ಥಿಗೂ ಮತದಾನ ಮಾಡಲು ಇಷ್ಟವಿಲ್ಲ ಎಂದರೆ ನೋಟಾ ಚಲಾವಣೆಗೆ ಅವಕಾಶವಿದೆ ಎಂದು ಹೇಳಿದರು.
ಸಭೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಮತದಾನ ಜಾಗೃತಿಯ ಕುರಿತ ಪ್ರತಿಜ್ಞಾ ವಿಧಿ ಬೋಧಿಸಲಾಯಿತು ಹಾಗೂ ವಿದ್ಯುನ್ಮಾನ ಮತಯಂತ್ರ, ವಿವಿ ಪ್ಯಾಟ್ ಬಳಕೆ ಕುರಿತು ಪ್ರಾತ್ಯಕ್ಷಿಕೆ ಏರ್ಪಡಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ರಾಧ ಹಾಗೂ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಲೈಂಗಿಕ ಅಲ್ಪಸಂಖ್ಯಾತರು ಉಪಸ್ಥಿತರಿದ್ದರು.