ಚನ್ನಪಟ್ಟಣ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷ ಬಿಟ್ಟು ಪ್ರಾದೇಶಿಕ ಪಕ್ಷ ಕಟ್ಟಿ ತೋರಿಸಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಸಾಧ್ಯವಾದರೆ ಕಾಂಗ್ರೆಸ್ ಪಕ್ಷವನ್ನು ಬಿಟ್ಟು, ರಾಜ್ಯದಲ್ಲಿ ಅವರದೇ ಆದ ಪ್ರಾದೇಶಿಕ ಪಕ್ಷ ಕಟ್ಟಿ ಬೆಳೆಸಲಿ ಎಂದರು.
ಸಿದ್ದರಾಮಯ್ಯ ಅವರ ಟ್ವೀಟ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ತಮ್ಮನ್ನು ಬೆಳೆಸಿದ್ದು ರಾಮನಗರದ ಜನತೆಯೇ ಹೊರತು ಸಿದ್ದರಾಮಯ್ಯ ಅಲ್ಲ. ನಾನು ಮುಖ್ಯಮಂತ್ರಿಯಾಗಿದ್ದನ್ನು ಸಹಿಸಲು ಅವರಿಗೆ ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಹೈಕಮಾಂಡ್ ತೀರ್ಮಾನದಿಂದ ನಾನು ಮುಖ್ಯಮಂತ್ರಿಯಾಗಿದ್ದೆ. ಅದನ್ನು ಸಹಿಸದ ಸಿದ್ದರಾಮಯ್ಯ ಅವರು, ಮೈತ್ರಿ ಸರ್ಕಾರವನ್ನು ಕೆಡವಲು ಮುಂದಾದರು. ಸಿದ್ದರಾಮಯ್ಯ ಸಾಕಿದ ಗಿಣಿ ನಾನಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಿದ್ದರಾಮಯ್ಯನಂತಹ ಹಲವು ಗಿಣಿಗಳನ್ನು ಸಾಕಿದರು. ಅವು ತಮಗೆ ಹೇಗೆ ಕುಕ್ಕಿದೆ ಎಂಬುದು ಗೊತ್ತಿದೆ ಎಂದರು. ಹಣ ಹೊಂದಿಸಿ, ಕಾರ್ಯಕರ್ತರನ್ನು ಸೇರಿಸಿ ಸಮಾವೇಶ ನಡೆಸಿದಾಗ ಅಲ್ಲಿ ಬಂದು ಭಾಷಣ ಮಾಡಿ ನಾಯಕರಾದವರು ಸಿದ್ದರಾಮಯ್ಯ. ಅವರ ಸಂಚನ್ನು ಎದುರಿಸಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ನ್ನು ಉಳಿಸಿಕೊಂಡೆವು . ನಾವು ರಾಜ್ಯದಲ್ಲಿ ಒಂದು ಪ್ರಾದೇಶಿಕ ಪಕ್ಷವನ್ನು ಕಟ್ಟಿ ಬೆಳೆಸಿದ್ದೇವೆ.
ಆದರೆ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಹೋಗಿ ಅಲ್ಲಿನ ಶಕ್ತಿಯನ್ನು ಧಾರೆಯೆರೆಸಿಕೊಂಡು ಬೆಳೆದವರು. ಅವರಿಗೆ ಶಕ್ತಿ ಇದ್ದರೆ ಕಾಂಗ್ರೆಸ್ನಿಂದ ಹೊರಬರಲಿ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಮಳೆಯಿಂದ ತೊಂದರೆಗೊಳಗಾದ ಚನ್ನಪಟ್ಟಣದ ಎಪಿಎಂಸಿ ಕ್ವಾಟ್ರ್ರಸ್ 72 ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ ತಲಾ 5 ಸಾವಿರ ರೂ.ಗಳನ್ನು ಕುಮಾರಸ್ವಾಮಿ ವೈಯಕ್ತಿಕ ಪರಿಹಾರ ಧನ ಘೋಷಣೆ ಮಾಡಿದರು.
ಹೊಸ ನಾಟಕ..!:
ಇದಕ್ಕೂ ಮುನ್ನ ಮೈಸೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ ಉಪ ಚುನಾವಣೆ ಫಲಿತಾಂಶ ಬಂದ ನಂತರ ಹೊಸ ನಾಟಕ ಪ್ರಾರಂಭ ವಾಗಲಿದೆ ಎಂದು ಭವಿಷ್ಯ ನುಡಿದರು. ಚುನಾವಣೆಗೆ ಮೊದಲೇ ಹಲವು ನಾಟಕಗಳು ನಡೆಯುತ್ತಿವೆ. ಇನ್ನು ಫಲಿತಾಂಶ ಬಂದ ನಂತರ ಇನ್ನೂ ಹೊಸ ನಾಟಕಗಳು ಪ್ರಾರಂಭವಾಗಲಿವೆ ಎಂದು ಮಾರ್ಮಿಕವಾಗಿ ನುಡಿದರು.ಇನ್ನೆರಡು ದಿನಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವುದಾಗಿ ಎಚ್ಡಿಕೆ ತಿಳಿಸಿದರು.
ಉಪಚುನಾವಣೆ ನಡೆದೆ ನಡೆಯುತ್ತದೆ. ಇದರಲ್ಲಿ ಯಾವುದೇ ಸಂಶಯ ಬೇಕಿಲ್ಲ ಎಂದು ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಎಚ್ಡಿಕೆ 15 ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ಹೆಚ್ಚು ಸ್ಥಾನದಲ್ಲಿ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ಉಪ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಜೆಡಿಎಸ್ ತನ್ನದೇ ಆದ ರಾಜಕೀಯ ತಂತ್ರ ಮಾಡಿದೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಸ್ಥಳೀಯ ಮುಖಂಡರು ಮತ್ತು ನಾಯಕರಿಗೆ ಆದ್ಯತೆ ನೀಡಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
