ದಾವಣಗೆರೆ
ಕನ್ನಡಿಗರಿಗೆ ಕೆಲಸ ಕೊಡುವ ಉದ್ಯಮಿಗಳಿಗೆ ಮಾತ್ರ ನಮ್ಮ ನೆಲದಲ್ಲಿ ಉದ್ಯಮ ಆರಂಭಿಸಲು ಸರ್ಕಾರ ಅವಕಾಶ ಮಾಡಿಕೊಡ ಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಬನವಾಸಿ ಬಳಗದ ಉಪಾಧ್ಯಕ್ಷ ಅರುಣ್ ಜಾವಗಲ್ ಒತ್ತಾಯಿಸಿದರು.
ನಗರದ ಮಾಗನುರು ಬಸಪ್ಪ ಸ್ಕೂಲ್‍ನಲ್ಲಿ ಭಾನುವಾರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ವಿಷಯದಲ್ಲಿ 125 ಅಂಕ ಪಡೆದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ‘ಜ್ಞಾನಕಾಶಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ನೆರೆಯ ಆಂಧ್ರ ಪ್ರದೇಶದ ಸರ್ಕಾರವು, ತಿಂಗಳ ಹಿಂದೆ ಅಲ್ಲಿ ಸ್ಥಾಪನೆಯಾಗುವ ಉದ್ಯಮದಲ್ಲಿ ಶೇ.75ರಷ್ಟು ಸ್ಥಳೀಯರಿಗೆ ಕಡ್ಡಾಯವಾಗಿ ಉದ್ಯೋಗ ನೀಡಬೇಕೆಂಬ ಕಾನೂನು ರೂಪಿಸಿದೆ. ಅದರಂತೆ ನಮ್ಮ ಕರ್ನಾಟಕ ಸರ್ಕಾರ ಸಹ ಕನ್ನಡ ಮಕ್ಕಳಿಗೆ ಉದ್ಯೋಗಾವಕಾಶ ದೊರಕಿಸಿಕೊಡಲು ಮುಂದಾಗಬೇಕೆಂದು ಆಗ್ರಹಿಸಿದರು.
ಎಲ್ಲಿಂದಲೊ ನಮ್ಮ ನೆಲದೊಳಗೆ ಬರುವ ಉದ್ಯಮಕ್ಕೆ ಭೂಮಿ ಸೇರಿದಂತೆ ಅನೇಕ ಸವಲತ್ತುಗಳನ್ನು ನೀಡುವ ಮೂಲಕ ನಮ್ಮ ಸರ್ಕಾರ ಎಲ್ಲವನ್ನೂ ತ್ಯಾಗ ಮಾಡುತ್ತದೆ. ಆದರೆ, ಆ ಉದ್ಯಮಿಗಳು ಅನ್ಯರನ್ನು ಕೆಲಸ ತೆಗೆದುಕೊಳ್ಳುವ ಮೂಲಕ ಕನ್ನಡಿಗರನ್ನು ಕಡೆಗಣಿಸುತ್ತಿದ್ದಾರೆ. ಹೀಗಾಗಿ ಕನ್ನಡದ ಮಕ್ಕಳು ಕೆಲಸದಿಂದ ವಂಚಿತರಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ಜನಪ್ರತಿನಿಧಿಗಳು ಸಹ ಕನ್ನಡದ ಮಕ್ಕಳಿಗೆ ಉದ್ಯೋಗ ದೊರಕಿಸುವ ವಿಚಾರದಲ್ಲಿ ತಲೆ ಹಾಕುವುದಿಲ್ಲ. ಕನ್ನಡಿಗರು ಉದ್ಯೋಗ ಪಡೆಯಲು ಹೋರಾಟ ಅನಿವಾರ್ಯವಾಗಿದೆ. ಈಗ ನಾವು ಮೈಮರೆತು ಸುಮ್ಮನೇ ಕೂತರೇ ಭವಿಷ್ಯದಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಸೂಚ್ಯವಾಗಿ ಎಚ್ಚರಿಸಿದರು.
ಮಕ್ಕಳ ಪೋಷಕರು, ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಪ್ರಬಲ ಹೋರಾಟ ಕಟ್ಟಬೇಕೆಂದು ಕರೆ ನೀಡಿದ ಅವರು, ಇಂಗ್ಲೀಷ್ ವ್ಯಾಮೋಹಕ್ಕೆ ಒಳಗಾಗಿ ಮಾತೃಭಾಷೆ ಶಿಕ್ಷಣ ನಿರ್ಲಕ್ಷ ಮಾಡುತ್ತಿದ್ದೇವೆ. ಮಾತೃಭಾಷಾ ಶಿಕ್ಷಣವೇ ವೈಜ್ಞಾನಿಕವಾಗಿ ಪರಿಣಾಮಕಾರಿ ಆಗಲಿದೆ. ಪ್ರಪಂಚದ ಯಾವುದೇ ಮುಂದುವರೆದ ರಾಷ್ಟ್ರಗಳಲ್ಲಿ ಅಲ್ಲಿಯ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಲಾಗುತ್ತಿದೆ ಎಂದರು.
ನಮ್ಮಲ್ಲಿ ಇಂಗ್ಲೀಷ್‍ನಲ್ಲಿ ಶಿಕ್ಷಣ ಪಡೆದರೆ ಮಾತ್ರ ನಾವುಗಳು ಸುಶಿಕ್ಷತರು ಎಂಬ ಮನೋಭಾವನೆ ಬಂದಿದೆ. ಆದರೆ, ಇನ್ಪೋಸಿಸ್‍ನ ನಾರಾಯಣ ಮೂರ್ತಿ, ಸುಧಾ ಮೂರ್ತಿ ಅಷ್ಟೇ ಏಕೆ ಇಸ್ರೋದಲ್ಲಿರುವ ಪ್ರತಿಯೊಬ್ಬ ವಿಜ್ಞಾನಿಗಳು ಮಾತೃ ಭಾಷೆಯಲ್ಲೇ ಶಿಕ್ಷಣ ಪಡೆದು ಸಾಧಕರಾಗಿದ್ದಾರೆ ಎನ್ನುವುದನ್ನು ಯಾರೂ ಸಹ ಮರೆಯಬಾರದು ಎಂದು ಸಲಹೆ ನೀಡಿದರು.
ದಾವಣಗೆರೆ ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಕೊಟ್ರೇಶ್ ಕಾರ್ಯಕ್ರಮ ಉದ್ಘಾಟಿಸಿ, ದೇಶ, ವಿದೇಶದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಅನೇಕರು ದೊಡ್ಡ ಸ್ಥಾನ-ಮಾನ ಹೊಂದಿದ್ದಾರೆ. ಅದಕ್ಕೆ ಮುಖ್ಯವಾಗಿದ್ದು ಪರಿಶ್ರಮ ಮತ್ತು ಮಾತೃಭಾಷೆಯ ಮೇಲಿದ್ದ ಪ್ರೀತಿ ಕಾರಣ. ಸೋಲೇ ಗೆಲುವಿನ ಸೋಪಾನವಾಗಿದೆ. ಅದನ್ನು ಆತ್ಮಸ್ಥೈರ್ಯದಿಂದ ಮೆಟ್ಟಿ ನಿಂತರೆ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ 180 ವಿದ್ಯಾರ್ಥಿಗಳಿಗೆ ಜ್ಞಾನಕಾಶಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಅಧ್ಯಕ್ಷತೆ ವಹಿಸಿದ್ದರು. ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್‍ನ ಗೌರವ ಕಾರ್ಯದರ್ಶಿ ಎಂ.ಬಿ.ಸಂಗಮೇಶ್ವರ ಗೌಡ್ರು, ಎಟಿಕೆ ಕನ್‍ಸ್ಟ್ರಕ್ಷನ್ಸ್‍ನ ಎ.ರಮೇಶ್, ಸುವರ್ಣ ಕರ್ನಾಟಕ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಾರ್ಗೆಟ್ ಆಸ್ಲಾಂ, ಲಯನ್ಸ್ ಕ್ಲಬ್ ಅಧ್ಯಕ್ಷ ವೈ.ಬಿ.ಸತೀಶ್, ಖಜಾಂಚಿ ಎಸ್.ಜಿ ಉಳವಿ, ಕರವೇ ಮಹಿಳಾ ಘಟಕದ ಅಧ್ಯಕ್ಷೆ ಬಸಮ್ಮ, ಓ ಮಹೇಶ್ವರ, ತಿಮ್ಮೇಶ್, ಮಂಜುಶ್ರೀ ಗೌಡ, ಶ್ರೀನಿವಾಸ್ ಚಿನಕಟ್ಟಿ, ಲಿಂಗರಾಜು ಮತ್ತಿತರರಿದ್ದರು. ವೇದಿಕೆ ಗೌರವಾಧ್ಯಕ್ಷ ವಾಸುದೇವ ರಾಯ್ಕರ್ ಸ್ವಾಗತಿಸಿದರು. ಶ್ರೀಕಾಂತ್ ಭಟ್ ಕಾರ್ಯಕ್ರಮ ನಿರೂಪಿಸಿದರು.