ದಾವಣಗೆರೆ:
ಮಕ್ಕಳಿಗೆ ಅಪ್ಪ-ಅಮ್ಮ ಸಂಸ್ಕತಿ ಕಲಿಸುವ ಮೂಲಕ ಮನೆಯಿಂದಲೇ ಕನ್ನಡವನ್ನು ಉಳಿಸಿ ಬೆಳೆಸಬೇಕೆಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ತಿಳಿಸಿದರು.
ನಗರದ ಡಾ.ಎಂ.ಸಿ.ಮೋದಿ ವೃತ್ತದಲ್ಲಿ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ)ಯ ವತಿಯಿಂದ ಏರ್ಪಡಿಸಿದ್ದ 63ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಪೋಷಕರು ಮನೆಯಲ್ಲಿ ಮಕ್ಕಳಿಗೆ ಡ್ಯಾಡಿ-ಮಮ್ಮಿ ಸಂಸ್ಕತಿ ಕಲಿಸುವುದನ್ನು ಬಿಟ್ಟು. ಅಪ್ಪ-ಅಮ್ಮ ಸಂಸ್ಕøತಿಯನ್ನು ಕಲಿಸುವ ಮೂಲಕ ಮನೆಯಿಂದಲೇ ಕನ್ನಡವನ್ನು ಉಳಿಸಿ ಬೆಳೆಸಲು ಮುಂದಾಗಬೇಕೆಂದು ಕಿವಿಮಾತು ಹೇಳಿದರು.
ಮನೆಯಲ್ಲಿ ಮಕ್ಕಳು ಮಮ್ಮಿ ಡ್ಯಾಡಿ ಎಂದು ಕರೆಯುತ್ತಾರೆ. ಆದರೆ, ಮಮ್ಮಿ ಎಂದರೆ ಶವದ ಪೆಟ್ಟಿಗೆ, ಡ್ಯಾಡಿ ಎಂದರೆ, ಪಿಶಾಚಿ. ಅದರ ಅರ್ಥವೇ ಗೊತ್ತಿಲ್ಲದೇ ಮಕ್ಕಳು ಕರೆಯುತ್ತಾರೆ. ನಮ್ಮ ಭಾಷೆಗೆ ನಾವೇ ಬೆಲೆ ಕೊಡದೇ ಹೋದರೆ ಇನ್ಯಾರು ಬೆಲೆ ಕೊಡಬೇಕು. ಇದನ್ನು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಕನ್ನಡ ಎನ್ನುವುದು ಒಂದು ದಿನ, ಒಂದು ತಿಂಗಳಿಗೆ ಸೀಮಿತವಾಗಬಾರದು. ಕನ್ನಡವೇ ನಮ್ಮ ಜೀವನ, ಧರ್ಮ, ಬದುಕಾಗಬೇಕು. ಎಲ್ಲರೂ ನಮ್ಮ ಭಾಷೆ ಪ್ರೀತಿಸುವ ಮೂಲಕ ಕನ್ನಡ ಪದಗಳನ್ನು ಬಳಸಬೇಕು. ಫೋನ್‍ನಲ್ಲಿ ಕರೆ ಬಂದರೆ ಸಾಕು ಹಲೋ ಎನ್ನುತ್ತಾರೆ. ಅದರ ಬದಲು ನಮಸ್ಕಾರ, ಶರಣು ಶರಣಾರ್ಥಿ, ನಮಸ್ಕಾರ ಸ್ವಾಮಿ ಎಂದು ಮಾತನ್ನು ಆರಂಭಿಸಬೇಕು. ಸಂಖ್ಯೆಗಳನ್ನು ಕನ್ನಡದಲ್ಲಿಯೇ ಹೇಳುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಪಾಲಿಕೆ ಉಪ ಆಯುಕ್ತ ರವೀಂದ್ರ ಮಲ್ಲಾಪುರ ಮಾತನಾಡಿ, ಕರ್ನಾಟಕ, ಕನ್ನಡ ಎನ್ನುವುದು ಬರೀ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಬಾರದು. ದಾವಣಗೆರೆಯಲ್ಲಿ ಆಂಗ್ಲ ಜಾಹೀರಾತು ಫಲಕಗಳ ವಿರುದ್ಧ ಕರವೇ ಬಹಳ ಹೋರಾಟ ಮಾಡುತ್ತಾ ಬಂದಿದೆ. ನಾವುಗಳು ಸಹ ಹೋರಾಟಕ್ಕೆ ಸ್ಪಂಧಿಸಿ ಜಾಹೀರಾತು ಪ್ರಚಾರ ಫಲಕಗಳಿಗೆ ಅನುಮತಿ ನೀಡುವಾಗ ಫಲಕದಲ್ಲಿ ಶೇ.50ರಷ್ಟು ಕನ್ನಡ ಬರಹ ಇರಲೇ ಬೇಕು, ಇನ್ನುಳಿದ ಶೇ.50ರಷ್ಟು ಬೇರೆ ಭಾಷೆ ಬಳಸುವಂತೆ ಆದೇಶಿಸಿ ಅನುಮತಿ ನೀಡುತ್ತಿದ್ದೇವೆ. ಬೇರೆ ಭಾಷೆ ಪೂರ್ಣ ಇರುವ ಫಲಕಗಳನ್ನು ನಿರ್ಧಾಕ್ಷಿಣ್ಯವಾಗಿ ತೆರವುಗೊಳಿಸುತ್ತಿದ್ದೇವೆ ಎಂದರು.
ಕರವೇ ಜಿಲ್ಲಾ ಘಟಕ ಅಧ್ಯಕ್ಷ ರಾಮೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕರವೇಯ ಸುರೇಶ, ಹನುಮಂತಪ್ಪ, ಲೋಕೇಶ, ತಿಮ್ಮೇಶ, ಶ್ರೀನಿವಾಸ, ರವಿಕುಮಾರ, ಅಭಿಷೇಕ್, ಜಾಕಿರ್, ರಾಘು, ಮಹೇಶ್ವರಪ್ಪ, ಸಂತೋಷ, ಧರ್ಮರಾಜ, ಮಹಿಳಾ ಘಟಕದ ಬಸಮ್ಮ, ಮಂಜುಳಮ್ಮ, ಕಮಲಮ್ಮ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ