ದಾವಣಗೆರೆ :
ನಾನು ಕೋಡು, ಕಿರೀಟ ಇಟ್ಟುಕೊಂಡು ಇಲ್ಲಿ ಕುಳಿತಿಲ್ಲ. ಸೇವಕನಾಗಿ ಕೆಲಸ ಮಾಡುಲು ಇಲ್ಲಿ ಬಂದಿದ್ದೇನೆ. ಅಧಿಕಾರಿಗಳು ಅಧಿಕಾರದ ಅಹಂ ಇಟ್ಟುಕೊಂಡು ಕೆಲಸ ಮಾಡಿದರೆ, ಕುರ್ಚಿಯಲ್ಲಿ ಕುಳಿತು ಕೆಲಸ ಮಾಡಲಾಗಲ್ಲ. ಹೀಗಾಗಿ ಎಲ್ಲರೂ ನಮ್ಮಲ್ಲಿರುವ ಅಹಂ ಬಿಟ್ಟು ಜನಸ್ನೇಹಿಯಾಗಿ ಜನರ ಬಳಿಗೆ ಹೋಗಿ, ಅವರ ಸಮಸ್ಯೆಗಳಿಗೆ ಸ್ಪಂದಿಸೋಣ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ, ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಇನ್ನೂ ಮುಂದೆ ಮೋಜಿಣಿ, ಸರ್ವೇ, ಖಾತೆ ಬದಲಾವಣೆ, ಸ್ವಚ್ಛತೆಯ ಬಗ್ಗೆ ದೂರು ಬಾರದಂತೆ ನೋಡಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಒಂದು ತಂಡವಾಗಿ ಕೆಲಸ ಮಾಡುವ ಮೂಲಕ ಜನರ ಮನೆಯ ಬಾಗಿಲಿಗೆ ಆಡಳಿತವನ್ನು ತೆಗೆದುಕೊಂಡು ಹೋಗೋಣ ಎಂದು ಸಲಹೆ ನೀಡಿದರು.
ಜನರು ತಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳಲು ದೂರದಿಂದ ಬರುತ್ತಿದ್ದಾರೆ. ಆದರೆ, ಜನತೆಯ ಕುಂದುಕೊರತೆ, ಸಮಸ್ಯೆಗಳನ್ನು ಅರಿತು, ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಒಂದು ತಂಡವನ್ನು ರಚಿಸಿ 15 ದಿನಗಳಿಗೊಮ್ಮೆ ಜನರಿರುವ ಬಳಿಯೇ ಹೋಗಿ ಇಂತಹ ಸಮಸ್ಯೆಗಳನ್ನು ಬಗೆಹರಿಸುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಸಾಮಾಜಿಕ ಕಾರ್ಯಕರ್ತ ಎಂ.ಜಿ.ಶ್ರೀಕಾಂತ್ ಅರ್ಜಿ ಸಲ್ಲಿಸಿ, ಜಿಲ್ಲೆಯಲ್ಲಿ ಸುಮಾರು 900ಕ್ಕೂ ಹೆಚ್ಚು ವೈದ್ಯಕೀಯ ಘಟಕಗಳಿದ್ದು, ಕೆಲವು ಪ್ರಯೋಗಾಲಯಗಳು ಹಾಗೂ ವೈದ್ಯರು ಕೆ.ಪಿ.ಎಂ.ಇ ಕಾಯ್ದೆಯಡಿ ನೋಂದಣಿ ಆಗಿಲ್ಲ. ಅಲ್ಲದೇ, ವೈದ್ಯಕೀಯ ತಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲಾಗುತ್ತಿಲ್ಲ. ನಗರದಲ್ಲಿ ನಕಲಿ ವೈದ್ಯರ ಹಾವಳಿ ಸಹ ಹೆಚ್ಚಾಗಿದ್ದು, ಇವರುಗಳನ್ನು ಪತ್ತೆ ಹಚ್ಚಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿ ಮಹಾಂತೆಶ್ ಬೀಳಗಿ, ಇಂತಹ ವೈದ್ಯಕೀಯ ಘಟಕಗಳು ಹಾಗೂ ನಕಲಿ ವೈದ್ಯರ ಬಗ್ಗೆ ಮಾಹಿತಿಯಿದ್ದರೆ ನೀಡಿ. ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಹಾಗೂ ಜಿಲ್ಲಾಡಳಿತ ಮತ್ತು ಆರೋಗ್ಯ ಅಧಿಕಾರಿಗಳೊಂದಿಗೆ ತಂಡವನ್ನು ರಚಿಸಿ ನಕಲಿ ವೈದ್ಯರನ್ನು ಪತ್ತೆ ಹಚ್ಚುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಇಲ್ಲಿನ ಎಸ್‍ಒಜಿ ಕಾಲೋನಿ, ರಾಮನಗರ, ಬಸವ ಬುದ್ಧ ನಗರ, ಪಾಮೇನಹಳ್ಳಿ ನಾಗರಿಕರು ತಿಮ್ಮಣ್ಣನವರ ನೇತೃತ್ವದಲ್ಲಿ ಅರ್ಜಿ ಸಲ್ಲಿಸಿ, ಎಸ್‍ಒಜಿ ಕಾಲೋನಿಗೆ ಕಳೆದ 20 ವರ್ಷಗಳಿಂದ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಈ ಕುರಿತು ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೈಟೆಕ್ ಆಸ್ಪತ್ರೆಯ ಹಿಂದೆ ಸ್ಮಶಾನದಲ್ಲಿ ವಿದ್ಯುತ್ ದೀಪವಿಲ್ಲ, ಬೀದಿ ದೀಪಗಳಿಲ್ಲ ಹೀಗಾಗಿ ಕೆಲ ತಿಂಗಳ ಹಿಂದೆ ಹತ್ಯೆ ಸಹ ನಡೆದಿದೆ.
ಅಲ್ಲದೆ, ಇತ್ತೀಚೆಗೆ ವ್ಯಕ್ತಿಯೊಬ್ಬರನ್ನು ತಡೆದು ಹಲ್ಲೆ ಮಾಡಿ ಹಣ ಕಿತ್ತುಕೊಂಡು ಹೋಗಿದ್ದಾರೆ. ಆದ್ದರಿಂದ ಇಲ್ಲಿ ಬೀದಿ ದೀಪದ ವ್ಯವಸ್ಥೆ, ಪೊಲೀಸ್ ಬೀಟ್ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ಮನವಿ ಮಾಡಿದರು.ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಮಾತನಾಡಿ, ನಗರದಲ್ಲಿ ಮೊದಲು 41 ವಾರ್ಡ್‍ಗಳಿದ್ದವು ಈಗ 45 ವಾರ್ಡ್‍ಗಳಾಗಿವೆ. ಅನುದಾನದ ಲಭ್ಯತೆ ಮೇಲೆ ಸೂಕ್ತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಯಿಸಿದ ಡಿಸಿ ಮಹಾಂತೇಶ್ ಬೀಳಗಿ, ಈ ಹಿಂದೆ ಆಗಿರುವುದನ್ನು ಬಿಡಿ, ಮುಂಬರುವ ದಿನಗಳಲ್ಲಿ ತಮ್ಮ ಕಾಲೋನಿಗೆ ಭೇಟಿ ನೀಡಿ ಸೂಕ್ತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಿಟ್ಟುವಳ್ಳಿಯ ಪರುಶುರಾಮಪ್ಪ ತಮಗೆ 2007 ರಿಂದ ವೃದ್ಧಾಪ್ಯ ವೇತನ ಮಂಜೂರಾಗಿದ್ದರು. ಯಾವುದೇ ಪಿಂಚಣಿ ನೀಡಿಲ್ಲ ಎಂದು ಆರೋಪಿಸಿದರು.ಇದಕ್ಕೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿ, ಇನ್ನೂ ಒಂದು ವಾರದಲ್ಲಿ ಅವರಿಗೆ ಪಿಂಚಣಿ ಸಿಗುವಂತೆ ಮಾಡಬೇಕೆಂದು ತಹಶೀಲ್ದಾರ್ ಸಂತೋಷ ಕುಮಾರ್‍ಗೆ ಸೂಚಿಸಿದರು.
ಸಾಮಾಜಿಕ ಕಾರ್ಯಕರ್ತ ಎಂ.ಎಸ್.ಮಲ್ಲಿಕಾರ್ಜುನ ಇಂಗಳೇಶ್ವರ, ಪಾಲಿಕೆ ವ್ಯವಸ್ಥಾಪಕಿ ಅನ್ನಪೂರ್ಣ ಎಂಬುವವರು ನಕಲಿ ಸಿಂಧುತ್ವ ಮತ್ತು ವಂಶವೃಕ್ಷದ ದಾಖಲೆ ನೀಡಿ, ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಸಭೆಯಲ್ಲಿದ್ದ ಆಯುಕ್ತರಿಗೆ ಈ ಕುರಿತು ಖುದ್ದಾಗಿ ಪರಿಶೀಲನೆ ನಡೆಸಿ ಸುಳ್ಳು ದಾಖಲೆಗಳು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಸಭೆಯಲ್ಲಿ ಆಶ್ರಯ ಮನೆ, ವೃದ್ಧಾಪ್ಯ ವೇತನ, ಅನಧೀಕೃತ ಕಟ್ಟಡ ತೆರೆವು, ರಸ್ತೆ ಅಭಿವೃದ್ಧಿ, ನಗರದ 18 ಮತ್ತು 30ನೇ ವಾರ್ಡಿನಲ್ಲಿ ಒಳಚರಂಡಿ ಇಲ್ಲದೆ ಸ್ಥಳೀಯರಿಗೆ ಆಗುತ್ತಿರವ ಸಮಸ್ಯೆಗಳ ಕುರಿತು ಅರ್ಜಿ ಸ್ವೀಕರಿಸಲಾಯಿತು.
ಸಭೆಯಲ್ಲಿ ಉಪವಿಭಾಗಧಿಕಾರಿ ಬಿ.ಟಿ,.ಕುಮಾರಸ್ವಾಮಿ, ಸಮಾಜಕಲ್ಯಾಣ ಇಲಾಖೆಯ ಉಪನಿರ್ದೇಶಕ ಶಿವಾನಂದ್‍ಕುಂಬಾರ್, ವಿಶೇಷ ಭೂಸ್ವಾಧೀನಾಧಿಕಾರಿ ರೇಷ್ಮಾ ಹಾನಗಲ್, ತಹಶೀಲ್ದಾರ್ ಸಂತೋಷ್‍ಕುಮಾರ್, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ಡಿಎಸ್ ಡಾ.ನಾಗರಾಜ್ ಜಿಲ್ಲಾ ಅಂಬೇಡ್ಕರ್ ಅಭಿವೃದ್ಧಿ ನಿಗಮ ವ್ಯವಸ್ಥಾಪಕಿ ರೇಷ್ಮ ಕೌಸರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ