ಅನ್ನ, ನೀರು ಬಿಡುವುದು ದೊಡ್ಡಸ್ತಿಕೆಯಲ್ಲ
ತುಮಕೂರು:
ತೀವ್ರ ಬರಗಾಲ ಎದುರಿಸುತ್ತಿರುವ ಈ ಸಂದಿಗ್ಧ ಸಮಯದಲ್ಲಿ ಹನಿ ಹನಿ ನೀರೂ ಅಮೂಲ್ಯ. ನೀರಿನ ಮಹತ್ವ ಏನೆಂಬುದು ಅದರ ಸಂಕಷ್ಟ ಅನುಭವಿಸಿದವರಿಗಷ್ಟೇ ಗೊತ್ತು. ಯಥೇಚ್ಛವಾಗಿ ನೀರು ಬಳಸುವವರಿಗೆ, ನಲ್ಲಿ ಮೂಲಕ ನೀರು ಸರಬರಾಜು ಆಗುವವರಿಗೆ ಇದಾವುದರ ಅರಿವೂ ಇಲ್ಲ. ನೀರಿನ ಸಂಕಷ್ಟ ಸ್ಥಿತಿಯ ಪರಿವೇ ಇರುವುದಿಲ್ಲ. ಹೀಗಾಗಿ ನೀರನ್ನು ಎಷ್ಟು ಬೇಕಾದರೂ ವ್ಯಯ ಮಾಡುತ್ತಾ ಹೋಗುತ್ತಾರೆ.
ಇನ್ನು ಕೆಲವರು ನೀರು ವ್ಯಯವಾಗುತ್ತಿದ್ದರೂ ಅದಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಾರೆ. ದಾರಿಯಲ್ಲಿ ಹೋಗುವಾಗ ನೀರಿನ ನಲ್ಲಿಯಲ್ಲಿ ನೀರು ತೊಟ್ಟಿಕ್ಕುತ್ತಿದ್ದರೆ, ನಲ್ಲಿಯ ಟ್ಯಾಪ್ ಕಳಚಿ ಹೋಗಿ ನೀರು ಸೋರಿ ಹೋಗುತ್ತಿದ್ದರೆ ನೋಡಿಕೊಂಡು ಹೋಗುತ್ತಾರೆ. ಅದು ನಮಗೆ ಸಂಬಂಧಿಸಿದ್ದಲ್ಲ ಎನ್ನುವವರೇ ಹೆಚ್ಚು. ಸಾರ್ವಜನಿಕ ನಲ್ಲಿಗಳಿರಬಹುದು ಅಥವಾ ಸಾರ್ವಜನಿಕವಾಗಿ ಉಪಯೋಗಿಸುವ ಕೊಳಾಯಿಗಳಿರಬಹುದು. ಎಲ್ಲಿಯಾದರೂ ನೀರು ಸೋರಿಕೆಯಾಗುತ್ತಿದ್ದರೆ ಅದನ್ನು ತಡೆದು ನಿಲ್ಲಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು. ನೀರು ಎಲ್ಲರಿಗೂ ಸೇರಿದ ಸಾರ್ವಜನಿಕ ಸ್ವತ್ತು ಎಂಬುದನ್ನು ಮರೆಯಬಾರದು.
ಮನೆಗಳಿಗೆ ನಗರ ಪಾಲಿಕೆ, ಪಟ್ಟಣ ಪಂಚಾಯತಿ, ಪುರಸಭೆಗಳಿಂದ ನೀರು ಹಾಯಿಸುವ ವ್ಯವಸ್ಥೆ ಇರುತ್ತದೆ. ಪ್ರತಿ ಮನೆಗಳಲ್ಲಿಯೂ ನೀರಿನ ಸಂಪು ಇರುತ್ತದೆ. ಅದು ತುಂಬುವವರೆಗೂ ನೋಡಿಕೊಳ್ಳಬೇಕು. ತುಂಬಿದ ಕೂಡಲೇ ನೀರು ಸ್ಥಗಿತ ಮಾಡಬೇಕು. ಕೆಲವರ ಮನೆಗಳಲ್ಲಿ ಸಂಪುಗಳ ನೀರು ಹರಿದು ಹೋಗುತ್ತಲೇ ಇರುತ್ತದೆ. ಮತ್ತೆ ಕೆಲವರು ಸಂಪಿನಿಂದ ಮನೆಯ ಮೇಲಿನ ಟ್ಯಾಂಕಿಗೆ ನೀರು ಹರಿಸುತ್ತಾರೆ. ಟ್ಯಾಂಕ್ ತುಂಬಿ ಹರಿಯುತ್ತಿದ್ದರೂ ಅತ್ತ ಗಮನ ಹರಿಸುವುದೇ ಇಲ್ಲ. ಈ ಬಗ್ಗೆ ಯಾರಾದರೂ ಹೇಳಿದಾಗಲೇ ನೀರು ಸ್ಥಗಿತ ಮಾಡುತ್ತಾರೆ.
ಪ್ರತಿ ಮನೆಗಳಲ್ಲೂ ಕನಿಷ್ಠ ಮೂರ್ನಾಲ್ಕು ಕಡೆ ನೀರಿನ ನಲ್ಲಿಗಳಿರುತ್ತವೆ. ಪಾತ್ರೆಗಳನ್ನು ತೊಳೆಯುವಾಗ ಆನ್ ಮಾಡಿದ ನಲ್ಲಿ ನೀರು ಪಾತ್ರೆಗಳನ್ನು ತೊಳೆದು ಮುಕ್ತಾಯವಾಗುವವರೆಗೂ ಹರಿದು ಹೋಗುತ್ತಿರುತ್ತದೆ. ಇದರ ಪ್ರಮಾಣ ಎಷ್ಟು ಎಂಬುದನ್ನು ಲೆಕ್ಕ ಹಾಕಿದರೆ ಗಾಬರಿಯಾಗುತ್ತದೆ. ಒಂದು ಮನೆಯಲ್ಲಿ ಅಷ್ಟು ನೀರು ವ್ಯರ್ಥವಾದರೆ ಇಡೀ ಊರಿನ ಮನೆಗಳ ನೀರಿನ ಪ್ರಮಾಣ ಎಷ್ಟಾಗುತ್ತದೆ ಎಂಬುದರ ಅರಿವು ಇರುವುದು ಅಗತ್ಯ.
ಮದುವೆ ಮಂಟಪಗಳಿಗೆ ಹೋದರೆ ಈಗ ಬಾಟಲ್ ನೀರು ಕೊಡುವ ವಾಡಿಕೆ ಇದೆ. ಸಾಮಾನ್ಯವಾಗಿ ಅರ್ಧ ಲೀಟರ್ ಇರುವ ನೀರಿನ ಬಾಟಲ್‍ಗಳನ್ನು ನೀಡಲಾಗುತ್ತದೆ. ಊಟ ಮುಗಿಸಿದ ನಂತರ ಟೇಬಲ್‍ಗಳನ್ನು ಗಮನಿಸಿದಾಗ ಪ್ರತಿ ಬಾಟಲ್‍ನಲ್ಲಿಯೂ ಅರ್ಧದಷ್ಟು ನೀರು ಉಳಿದಿರುವುದು ಕಂಡುಬರುತ್ತದೆ. ಎಲೆಯಲ್ಲಿ ಊಟ ಬಿಡುವುದು ಒಂದು ದೊಡ್ಡಸ್ಥಿಕೆಯಾಗಿದೆ. ಇದರ ಜೊತೆಗೆ ನೀರನ್ನೂ ಉಳಿಸಿ ಬಿಟ್ಟು ಹೋಗುವ ಮಂದಿ ನಮ್ಮಲ್ಲೇನು ಕಡಿಮೆ ಇಲ್ಲ. ಆಹಾರ ತ್ಯಜಿಸಬೇಡಿ, ನೀರು ಬಿಡಬೇಡಿ ಎಂದು ಹೇಳುವ ಹಾಗಿಲ್ಲ. ಹೇಳಿದರೆ ಅದನ್ನು
ತಾಳ್ಮೆಯಿಂದ ಕೇಳಿಸಿಕೊಳ್ಳುವ ವ್ಯವದಾನವೂ ಇಲ್ಲ. ಒಂದು ಮದುವೆ ಛತ್ರದಲ್ಲಿ ಒಂದು ಸಾವಿರ ಜನ ಊಟ ಮಾಡುತ್ತಾರೆಂದಿಟ್ಟು ಕೊಳೋಣ. ಅವರೆಲ್ಲ ಹೀಗೆ ಅರ್ಧ ನೀರನ್ನು ಉಳಿಸಿ ಹೋದರೆ ಎಷ್ಟು ವ್ಯರ್ಥವಾದೀತು. ಒಂದು ಕಡೆ ನೀರು ಹಾನಿ ಮತ್ತೊಂದು ಕಡೆ ಒಂದು ಬಾಟಲ್ ನೀರಿಗೆ ಎಷ್ಟು ಹಣ ತೆತ್ತಿರುತ್ತಾರೆ ಎಂಬುದನ್ನು ಅರ್ಥ ಮಾಡಿಕೊಂಡರೆ ಸಾಕು. ಇದನ್ನು ಯಾರೂ ಹೇಳಬೇಕಿಲ್ಲ.
ಹೇಳಿಸಿ ಕೊಳ್ಳುವುದೂ ತರವಲ್ಲ. ಯಾರಾದರೂ ನೋಡಿ ಆಡಿಕೊಳ್ಳುತ್ತಾರೆ ಎಂಬ ಕಾಲವೂ ಇದಲ್ಲ. ಎಲೆಯ ಮೇಲಿನ ಊಟವನ್ನು ಸಂಪೂರ್ಣವಾಗಿ ತೃಪ್ತಿಯಿಂದ ಸೇವನೆ ಮಾಡುವುದು, ತಮ್ಮ ಮುಂದಿರುವ ನೀರನ್ನು ಖಾಲಿ ಮಾಡುವುದು ಮನುಷ್ಯರಾದ ನಮ್ಮ ಗುಣವಾಗಬೇಕು. ಅದನ್ನು ಅರ್ಧ ಬಿಟ್ಟು ಹೋಗುವುದರಲ್ಲಿ ಯಾವ ಘನಂದಾರಿ ಹೆಗ್ಗಳಿಕೆಯೂ ಇರುವುದಿಲ್ಲ. ಅನ್ನ, ನೀರು ಬಿಡುವುದು ದೊಡ್ಡಸ್ತಿಕೆಯಲ್ಲ. ಇಂತಹ ಸಾಮಾನ್ಯ ಜ್ಞಾನವೂ ಇಲ್ಲದೇ ಇರುವವರನ್ನು ಏನೆಂದು ಕರೆಯಬೇಕು?