ಹುಳಿಯಾರು
ಬಾಕಿ ಉಳಿದಿರುವ ವೇತನ ಪಾವತಿ, ಉದ್ಯೋಗ ಭದ್ರತೆ ಸೇರಿ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹುಳಿಯಾರು ಹೋಬಳಿಯ ಅತಿಥಿ ಉಪನ್ಯಾಸಕರಾದ ಬಿ.ಆರ್.ಚಂದ್ರಹಾಸ, ಬಿ.ಆರ್.ಕರಿಯಪ್ಪ, ಎಲ್.ಬಿ.ಮಂಜುನಾಥ್ ಅವರುಗಳು ಪತ್ರ ಚಳುವಳಿ ಮಾಡಿದರು.
ಬಿ.ಆರ್.ಕರಿಯಪ್ಪ ಅವರು ಪಾವಗಡ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಬಿ.ಆರ್.ಚಂದ್ರಹಾಸ ಅವರು ಚಿ.ನಾ.ಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಎಲ್.ಬಿ.ಮಂಜುನಾಥ್ ಅವರು ತಿಪಟೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಇವರು ತಮ್ಮ ಬೇಡಿಕೆಗಳನ್ನು ಹೊತ್ತ ಪತ್ರವನ್ನು ಮುಖ್ಯಮಂತ್ರಿ ಯಡಿಯೂರಪ್ಪ, ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹಾಗೂ ಇನ್ನಿತರ ಸುಮಾರು ಹದಿನೆಂಟು ವಿಭಾಗಗಳಿಗೆ ರವಾನಿಸಿದರು.
ಅತಿಥಿ ಉಪನ್ಯಾಸಕರುಗಳಿಗೆ ಸೇವಾ ಭದ್ರತೆಯನ್ನು ನೀಡಿ ಅಥವಾ ಯಾವುದೇ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರು ಗಳನ್ನು ವಿಲೀನಗೊಳಿಸಬೇಕು, ಯುಜಿಸಿ ಪ್ರಕಾರ ಮಾಸಿಕ 50000 ರೂ. ಅಥವಾ ಒಂದು ಉಪನ್ಯಾಸಕ್ಕೆ 1500 ರೂ. ನೀಡಬೇಕು, ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಹೊರಡಿಸಿರುವ ಅಧಿಸೂಚನೆಯಲ್ಲಿ ಅತಿಥಿ ಉಪನ್ಯಾಸಕರಿಗೆ ಆದ್ಯತೆ ನೀಡಬೇಕು, ಲಾಕ್‍ಡೌನ್ ಅವಧಿಯನ್ನು ಕರ್ತವ್ಯದ ಅವಧಿ ಎಂದು ಪರಿಗಣಿಸಿ ವೇತನ ನೀಡಬೇಕು ಇವು ಇವರ ಬೇಡಿಕೆಗಳಾಗಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
