ಮಳೆಯಿಂದ ಅಸ್ತವ್ಯಸ್ತವಾದ ಜನ ಜೀವನ

ಚಳ್ಳಕೆರೆ

      ತಾಲ್ಲೂಕಿನಾದ್ಯಂತ ಜನತೆ ಚುನಾವಣೆಯ ಫಲಿತಾಂಶದ ಬಿಸಿಯಲ್ಲಿದ್ದರೆ, ಜನರ ಮನಸ್ಸನ್ನು ತಣ್ಣಗಾಲಿಸಲು ಕಳೆದ ಮೂರ್ನಾಲ್ಕು ದಿನಗಳಿಂದ ಚಳ್ಳಕೆರೆ ತಾಲ್ಲೂಕಿನ ಕೆಲವು ಭಾಗದಲ್ಲಿ ಮಳೆ ಮೇಲಿಂದ ಮೇಲೆ ಬರುತ್ತಿದ್ದು, ಮಂಗಳವಾರ ಸಂಜೆ ಬಿದ್ದ ಅಲ್ಪ ಮಳೆ- ಬಿರುಗಾಳಿ ಗಾಳಿ ಜನರಿಗೆ ಗಾಬರಿಯನ್ನುಂಟು ಮಾಡಿದೆ.

       ಕಾರಣ, ತಾಲ್ಲೂಕಿನ ಬುಡ್ನಹಟ್ಟಿ, ಚಿಕ್ಕಮ್ಮನಹಳ್ಳಿ ಗಳಲ್ಲಿ ಮಂಗಳವಾರ ಸಂಜೆ ನಿರೀಕ್ಷೆಗೂ ಮೀರಿ ಬಿರುಗಾಳಿ ಬೀಸಿದ್ದು, ಗ್ರಾಮಗಳಲ್ಲಿನ ಬೇವು, ಹುಣಸೆ, ತೆಂಗಿನ ಮರ, ಇತರೆ ಮರಗಳು ಹಾಗೂ ಮನೆಗಳ ಮೇಲ್ಚಾವಣಿ ಗಾಳಿಗೆ ಹಾರಿಹೋಗಿವೆ. ಇದೇ ಸಂದರ್ಭದಲ್ಲಿ ಖಾಸಗಿ ಮಿಲ್‍ವೊಂದರ ಮೇಲ್ಚಾವಣಿ ಸಹ ಹಾರಿದ್ದಲ್ಲದೆ ಕಬ್ಬಿಣದ ಸಲಾಕೆಗಳು ಸಹ ಬಗ್ಗಿವೆ. ರಸ್ತೆಯ ಪಕ್ಕದಲ್ಲಿದ್ದ ಬೆಸ್ಕಾಂ ಇಲಾಖೆಯ ಸಿಮೆಂಟ್‍ನಿಂದ ನಿರ್ಮಾಣ ಮಾಡಲ್ಪಟ್ಟ ವಿದ್ಯುತ್ ಕಂಬವೂ ಸಹ ಮೂರು ಕಡೆ ತುಂಡಾಗಿ ಮನೆಯ ಮೇಲೆ ಬಿದಿದೆ. ಬಿರುಗಾಳಿ ಹಾಗೂ ಮಳೆ ಅಬ್ಬರಕ್ಕೆ ಮನೆಗಳಿಗೆ ಹಾಗೂ ಮಿಲ್‍ಗೆ ಹಾನಿಯಾಗಿದ್ದು, ಯಾವುದೇ ರೀತಿಯ ಪ್ರಾಣಾ ಹಾನಿ ಉಂಟಾಗಿಲ್ಲ.

        ತಾಲ್ಲೂಕಿನ ಬುಡ್ನಹಟ್ಟಿ ಗ್ರಾಮದಲ್ಲಿ ಊರ ಮುಂದೆ ಬರುವ ಸದ್ಗುರು ಶೇಂಗಾ ಮಿಲ್‍ನ ಮೇಲ್ಭಾಗದ ತಗಡು ಶೀಟ್‍ಗಳು ಗಾಳಿಗೆ ಹಾರಿದ್ದಲ್ಲದೆ, ಶೀಟ್‍ಗಳ ಜೋಡಣೆಗೆ ನಿರ್ಮಿಸಿದ್ದ ಕಬ್ಬಿಣದ ಅಂಗ್ಲರ್ ಸಹ ಬಗ್ಗಿವೆ. ಬುಡ್ನಹಟ್ಟಿ ಗ್ರಾಮದ ಹೊರಭಾಗದ ರಸ್ತೆ ಪಕ್ಕದಲ್ಲಿದ್ದ ಹಲವಾರು ವಿದ್ಯುತ್ ಕಂಬಗಳು ನೆಲಕ್ಕುಳಿವೆ.

        ಬುಡ್ನಹಟ್ಟಿಯ ಕಾಲೋನಿಯೊಂದರಲ್ಲಿ ವಿದ್ಯುತ್ ಕಂಬ ಮೂರು ಕಡೆ ತುಂಡಾಗಿ ಮನೆಯ ಮೇಲೆ ಬಿದಿದ್ದು, ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಅಪಾಯವಾಗಿಲ್ಲ. ಕಂಬದ ಬಳಿಯೇ ಮಕ್ಕಳ ಆಟವಾಡುತ್ತಿದ್ದು, ಬಿರುಗಾಳಿಗೆ ಹೆದರಿ ಮನೆ ಸೇರಿಕೊಂಡಿದ್ದರಿಂದ ಪ್ರಾಣಾಪಾಯ ತಪ್ಪಿದೆ. ಗ್ರಾಮದ ಹಲವಾರು ಮನೆಗಳ ತಗಡು ಶೀಟ್‍ಗಳು ಸಹ ಗಾಳಿಗೆ ಹಾರಿ ಹೋಗಿದ್ದು, ನೊಂದ ಜನತೆ ಸರ್ಕಾರದಿಂದ ಯಾವುದೇ ಪರಿಹಾರ ಸಿಗುತ್ತದೆ ಏನೋ ಎಂಬ ಕಾತುರದಲ್ಲಿದ್ಧಾರೆ. ಈ ಸಂದರ್ಭದಲ್ಲಿ ಅನೇಕ ನೊಂದ ಮಹಿಳೆಯರು ಸಹ ಪರಿಹಾರ ಬಗ್ಗೆ ಚಿಂತಾಕ್ರಾಂತರಾಗಿದ್ಧಾರೆ.

       ತಾಲ್ಲೂಕಿನ ಚಿಕ್ಕಮ್ಮನಹಳ್ಳಿ ಗ್ರಾಮದಲ್ಲೂ ಸಹ ಎರಡು ಮರಗಳು ನೆಲಕ್ಕುಳಿದ್ದು, ಎರಡು ವಿದ್ಯುತ್ ಕಂಬವೂ ಸಹ ರಸ್ತೆಗೆ ಅಡ್ಡಲಾಗಿಬಿದಿದ್ದು, ಸುದ್ದಿ ತಿಳಿದ ಬೆಸ್ಕಾಂ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದಾವಿಸಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ ಪ್ರಾಣಾಪಾಯ ಉಂಟಾಗದಂತೆ ಎಚ್ಚರಿಕೆ ವಹಿಸಿದ್ದಾರೆ. ಎರಡೂ ಗ್ರಾಮಗಳಲ್ಲಾಗಿರುವ ಹಾನಿಗಳ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ವರದಿ ಬಂದ ನಂತರವೇ ನಷ್ಟದ ಅಂದಾಜು ಸ್ಪಷ್ಟವಾಗಲಿದೆ.

     ಬೆಸ್ಕಾಂ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ವಿದ್ಯುತ್ ಕಂಬಗಳ ದುರಸ್ಥಿ ಕಾರ್ಯದಲ್ಲಿ ತೊಡಗಿದ್ದಾರೆ.

ಹಳ್ಳ-ಗುಂಡಿಗಳು ಭರ್ತಿ :-

      ತಾಲ್ಲೂಕಿನ ಬುಡ್ನಹಟ್ಟಿ ಮತ್ತು ಚಿಕ್ಕಮ್ಮನಹಳ್ಳಿ ಗ್ರಾಮಗಳಲ್ಲಿ ಮಂಗಳವಾರ ಸಂಜೆ ಬಿದ್ದ ಮಳೆಗೆ ಗ್ರಾಮದ ಹಲವಾರು ಸಣ್ಣ, ಸಣ್ಣ ಗುಂಡಿಗಳು ಮಳೆ ನೀರಿನಿಂದ ತುಂಬಿವೆ. ಹಲವಾರು ಹಳ್ಳಗಳು ಕೆಲ ಕಾಲ ನೀರಿನಿಂದ ತುಂಬಿ ಹರಿದ್ದು, ಒಂದೇ ಮಳೆಗೆ ಇಷ್ಟು ನೀರು ಕಂಡ ರೈತರು ಸಂತಸಗೊಂಡರು.

       ಕಂದಾಯಾಧಿಕಾರಿ ಮಹಮ್ಮದ್ ರಫೀ ಈ ಬಗ್ಗೆ ಮಾಹಿತಿ ನೀಡಿ, ಬಿರುಗಾಳಿ ಹಾಗೂ ಮಳೆಗೆ ಗ್ರಾಮಗಳಲ್ಲಿನ ಕೆಲವು ಮನೆಗಳಿಗೆ ಹಾನಿಯಾದ ಬಗ್ಗೆ ಮಾಹಿತಿ ಲಭ್ಯವಿದ್ದು, ಈ ಬಗ್ಗೆ ಈಗಾಗಲೇ ತಹಶೀಲ್ದಾರ್‍ಗೆ ವರದಿ ನೀಡಲಾಗಿದೆ. ಹಾನಿಯಾದ ಮನೆಗಳಿಗೆ ಭೇಟಿ ನೀಡಿ ನಷ್ಟದ ಅಂದಾಜು ಪರಿಶೀಲಿಸಿ ವರದಿಯನ್ನು ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು ಎಂದಿದ್ಧಾರೆ. ಕಳೆದ ಹಲವಾರು ವರ್ಷಗಳಿಂದ ಮಳೆ, ಮಳೆ ಎಂದು ಜಪಿಸುತ್ತಿದ್ದ ಸಾರ್ವಜನಿಕರು ಈಗ ಎರಡೂ ಗ್ರಾಮಗಳಲ್ಲಿ ದಿಢೀರನೆ ಉಂಟಾದ ಹಾನಿಯ ಬಗ್ಗೆ ಆತಂಕಗೊಂಡಿದ್ದಾರೆ. ಸರ್ಕಾರ ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚು ಮಳೆಯಾಗುವ ಸಂದರ್ಭವಿರುವುದರಿಂದ ಗ್ರಾಮದ ಜನರಿಗೆ ಜಾಗೃತಿಯನ್ನು ಮೂಡಿಸಬೇಕಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link