ಜೋಡಿ ಚಕ್ರಗಳಂತೆ ನಡೆದರೆ ನೆಮ್ಮದಿಯ ಬದುಕು

ದಾವಣಗೆರೆ:

      ಸತಿ-ಪತಿ ಜೀವನವೆಂಬ ಬಂಡಿಯ ಜೋಡಿ ಚಕ್ರಗಳಂತೆ, ಪರಸ್ಪರ ಅರಿತು ಮುನ್ನಡೆದಾಗ ನೆಮ್ಮದಿಯ ಜೀವನ ಹೊಂದಲು ಸಾಧ್ಯವಾಗಲಿದೆ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅಭಿಪ್ರಾಯಪಟ್ಟರು.

       ನಗರದ ಶ್ರೀದುರ್ಗಾಂಭಿಕಾ ದೇವಸ್ಥಾನದ ಆವರಣದಲ್ಲಿ ಶನಿವಾರ ದಸರಾ ಮಹೋತ್ಸವದ ಪ್ರಯುಕ್ತ ಶ್ರೀದುರ್ಗಾಂಭಿಕಾದೇವಿ ದೇವಸ್ಥಾನ ಟ್ರಸ್ಟ್ ಆಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜೀವನವೆಂಬ ಬಂಡಿಯಲ್ಲಿ ಸತಿ-ಪತಿ ಇಬ್ಬರೂ ಚಕ್ರಗಳಿದ್ದಂತೆ, ಹೀಗಾಗಿ ಇಬ್ಬರೂ ಪರಸ್ಪರ ಅರಿತು ಮುನ್ನಡೆದಾಗ ಮಾತ್ರ ಜೀವನ ಎಂಬ ಬಂಡಿ ಸುಸೂತ್ರವಾಗಿ ಸಾಗಲಿದೆ. ಸಂಸಾರದಲ್ಲಿ ಏನೇ ಕಷ್ಟಗಳು ಬಂದರೂ ಸಹಿಸಿಕೊಂಡು, ಪರಸ್ಪರ ಜೀವನ ನಡೆಸುವ ಮೂಲಕ ಸಮಾಜದಲ್ಲಿ ಆದರ್ಶ ದಂಪತಿಗಳಾಗಿ ಹೊರಹೊಮ್ಮಬೇಕೆಂದು ಕಿವಿಮಾತು ಹೇಳಿದರು.

        ಈ ಸಾಮೂಹಿಕ ವಿವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತಿರುವ ನೂತನ ದಂಪತಿಗಳು ಬದುಕಿನಲ್ಲಿ ಒಬ್ಬರನ್ನೊಬ್ಬರು ಅರ್ಥೈಸಿಕೊಂಡು, ಹೊದರೆ ಮಾತ್ರ ಸುಂದರ ಬದುಕು ಕಂಡುಕೊಳ್ಳುವ ಮೂಲಕ ಆದರ್ಶ ಜೀವನ ನಡೆಸಲು ಸಾಧ್ಯ ಎಂದರು.

      ಇತ್ತೀನ ದಿನಗಳಲ್ಲಿ ಸೊಸೆಯಂದಿರು ಅತ್ತೆ-ಮಾವಂದರನ್ನು ಸರಿಯಾಗಿ ನೋಡಿಕೊಳ್ಳದ ಕಾರಣ ಸಮಾಜದಲ್ಲಿ ಅತ್ತೆ-ಮಾವ ಬೀದಿಗೆ ಬಂದು ವೃದ್ಧಾಶ್ರಮಗಳನ್ನು ಸೇರುತ್ತಿರುವುದರಿಂದ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಸೊಸೆಯಂದಿರು ಅತ್ತೆ-ಮಾವಂದಿರನ್ನು ತಂದೆ-ತಾಯಿಯಂತೆ ನೋಡಿಕೊಳ್ಳಬೇಕು ಹಾಗೂ ಆರತಿಗೊಬ್ಬ ಮಗಳು, ಕಿರುತಿಗೊಬ್ಬ ಮಗ ಎಂಬಂತೆ ಸುಂದರ ಮಕ್ಕಳನ್ನು ಪಡೆದು ಜೀವನ ಸಾಗಿಸಬೇಕೆಂದು ಸಲಹೆ ನೀಡಿದರು.

        ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಆವರಗೊಳ್ಳ ಪುರವರ್ಗ ಮಠದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನವ ದಂಪತಿಗಳು ಪ್ರೀತಿ, ವಿಶ್ವಾಸ ಹಾಗೂ ತಂದೆ ತಾಯಿ, ಹಿರಿಯರ ಮಾರ್ಗದರ್ಶನದ ಜತೆಗೆ ಆಶೀರ್ವಾದ ಪಡೆದು ಆದರ್ಶ ಜೀವನವನ್ನು ಮೈಗೂಡಿಸಿಕೊಳ್ಳಬೇಕು. ಯಾವುದೇ ಸಮಸ್ಯೆ, ಸಂಕಷ್ಟಗಳಿಗೆ ಒಬ್ಬರನ್ನೊಬ್ಬರು ದೂಷಿಸದೇ ತಾಳ್ಮೆಯಿಂದ ಸಮಸ್ಯೆ ಕುರಿತು ಚರ್ಚಿಸಿ ಬಗೆಹರಿಸಿಕೊಂಡು ಮುಂದೆ ಸಾಗಬೇಕು ಎಂದರು.

        ನಗರದಲ್ಲಿ ಪ್ರತಿವರ್ಷದಂತೆ ದಸರಾ ಹಬ್ಬದ ಪ್ರಯುಕ್ತ ಉಚಿತ ಸಾಮೂಹಿಕ ವಿವಾಹ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯವಾಗಿದೆ . ಮುಂದಿನ ವರ್ಷಗಳಲ್ಲಿ ಸಾಮೂಹಿಕ ಸರಳ ಮದುವೆಗಳು ಮತ್ತಷ್ಟು ಹೆಚ್ಚಾಗಲಿ. ದುರ್ಗಾದೇವಿಯೂ ಮಳೆ, ಬೆಳೆ ಕರುಣಿಸುವ ಮೂಲಕ ನಾಡನ್ನು ಸಮೃದ್ಧವಾಗಿಡಲಿ. ವಧು-ವರರು ನವದಾಂಪತ್ಯ ಜೀವನಕ್ಕೆ ಪಾದರ್ಪಣೆ ಮಾಡುತ್ತಿದ್ದು, ಎಂದೆಂದಿಗೂ ಸುಖಕರವಾಗಿ ಬಾಳಲಿ ಎಂದು ಹಾರೈಸಿದರು.ಸಾಮೂಹಿಕ ವಿವಾಹದಲ್ಲಿ 20 ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಕಾರ್ಯಕ್ರಮದಲ್ಲಿ ಸಮಿತಿಯ ಧರ್ಮದರ್ಶಿ ಗೌಡ್ರಚನ್ನಬಸಪ್ಪ, ಪಾಲಿಕೆ ಸದಸ್ಯರಾದ ಹೆಚ್.ಬಿ. ಗೋಣೆಪ್ಪ, ಹೆಚ್.ತಿಪ್ಪಣ್ಣ, ಹನುಮಂತರಾವ್ ಸಾವಂತ್, ಪಿಸಾಳೆ ಸತ್ಯನಾರಾಯಣ, ಉಮೇಶ್ ಪಿಸಾಳೆ, ಹನುಮಂತರಾವ್ ಜಾಧವ್, ರಾಮಕೃಷ್ಣ ಬಡಗಿ, ಗುರುರಾಜ ಮತ್ತಿತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap