ಕುಣಿಗಲ್
ಜನಪ್ರತಿನಿಧಿಗಳಿಗೆ ಪ್ರಾಣ ಬೆದರಿಕೆಯಾಕಿರುವುದರ ಬಗ್ಗೆ ಖುದ್ದು ತಾಲೂಕು ಪಂಚಾಯ್ತಿ ಸದಸ್ಯರೇ ಪೊಲೀಸರಿಗೆ ದೂರುನೀಡಿದರೂ ಆ ಬಗ್ಗೆ ಇನ್ನೂ ಪ್ರಕರಣದಾಖಲಿಸಲು ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪಿಎಸ್‍ಐ ಅವರು ಮೀನಾ ಮೇಷ ಎಣಿಸುತ್ತಿರುವುದು ಅನುಮಾನಕ್ಕೆಡೆ ಮಾಡಿದೆ ಎಂದು ಪಿಎಸ್‍ಐ ಪುಟ್ಟೇಗೌಡ ವಿರುದ್ದ ತಾ.ಪಂ. ಅಧ್ಯಕ್ಷ ಹರೀಶನಾಯಕ್ ಸೇರಿದಂತೆ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭೆಯಲ್ಲಿ ಸದಸ್ಯ ಕೆಂಪೇಗೌಡ ಮಾತನಾಡಿ, ಕಾರ್ಖಾನೆ ವಿಚಾರವಾಗಿ ನಾನು ಹೋರಾಟ ಆರಂಭಿಸಿದ್ದು ವಿಜಯಾಸ್ಟೀಲ್ ಹಾಗೂ ಸೆಮಿಲ್ಯಾಬ್ ಕಂಪನಿ ಕಡೆಯಿಂದ ಕೊಲೆ ಬೆದರಿಕೆ ಇರುವ ಬಗ್ಗೆ ತುರ್ತು ಎಂದು ಅಕ್ಟೋಬರ್ 4 ರಂದು ದೂರು ನೀಡಿದ್ದು ಇದುವರೆವಿಗೂ ಸಂಬಂಧಪಟ್ಟವರ ಬಗ್ಗೆ ದೂರು ದಾಖಲಿಸಿಲ್ಲ ಎಂದಾಗ, ಅದಕ್ಕೆ ಉತ್ತರಿಸಿದ ಪಿಎಸ್‍ಐ ಜಿಲ್ಲಾ ವರಿಷ್ಠರಿಂದ ದೂರಿನ ಪತ್ರ ಬಂದಿದೆ. ಈ ಬಗ್ಗೆ ನೀವು ನೀಡಿರುವ ದೂರುದಾರರನ್ನು ಕರೆಯಿಸಿ ಮಾತನಾಡಿ ನಂತರ ಪ್ರಕರಣ ದಾಖಲಿಸುತ್ತೇವೆ ಎಂದು ಉತ್ತರಿಸಿದರು.
ತಾಲ್ಲೂಕಿನ ಹಲವಾರು ಸಮಸ್ಯೆಗಳ ಬಗ್ಗೆ ಇತರ ಸದಸ್ಯರು ಧ್ವನಿ ಎತ್ತಿದಾಗ ವೃತ್ತ ನಿರೀಕ್ಷಕರನ್ನು ಕರೆಸಬೇಕಿದೆ. ಸಬ್ ಇನ್ಸ್‍ಪೆಕ್ಟರಿಗೆ ಸಂಬಂಧಿಸುವುದಿಲ್ಲ ಎಂದು ಸಭೆಯಿಂದ ಹೊರ ಕಳುಹಿಸಿದರು.
ಸಭೆಯಲ್ಲಿ ಮನರೇಗಾ ವಿಚಾರ ಪ್ರಸ್ತಾಪಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಕೊಡಗೀಹಳ್ಳಿ ದಿನೇಶ್ 36 ಗ್ರಾಮ ಪಂಚಾಯ್ತಿಯಲ್ಲಿ ತಮ್ಮ ಮನ ಬಂದಂತೆ ಕ್ರಿಯಾಯೋಜನೆ ನಡೆಯುತ್ತಿದೆ. ಕಾಮಗಾರಿಗಳ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಸದಸ್ಯ ಹಾಗೂ ತಾ.ಪಂ ಸದಸ್ಯರ ಗಮನಕ್ಕೆ ಬರದಂತೆ ಕಾಮಗಾರಿ ನಡೆಯುತ್ತಿದೆ. ಗ್ರಾ.ಪಂಚಾಯ್ತಿಯ ಪಿಡಿಓಗಳಿಗೂ ಹಲವಾರು ಜನಪ್ರತಿನಿಧಿಗಳು ಪತ್ರ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾಲ್ಲೂಕಿನಲ್ಲಿ ನಡೆಯುವ ಹಲವಾರು ಅಭಿವೃದ್ಧಿ, ಶಂಕುಸ್ಥಾಪನೆ , ಉದ್ಘಾಟನೆಗಳನ್ನು ಕಾನೂನು ಬಾಹಿರವಾಗಿ ಒಂದು ಪಕ್ಷದ ಕಾರ್ಯಕ್ರಮದಂತೆ ಮಾಡುತ್ತಾರೆ. ಕೆಲವು ಜನಪ್ರತಿನಿಧಿಗಳ ಕೈಗೊಂಬೆಯಂತೆ ಕುಣಿಯುತ್ತಾ ಶಿಷ್ಠಾಚಾರವನ್ನು ಗಾಳಿಗೆ ತೂರಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿ ತಹಸೀಲ್ದಾರ್ ಇದರ ಬಗ್ಗೆ ಕ್ರಮ ಜರುಗಿಸುತ್ತಿಲ್ಲ ಎಂದು ದಿನೇಶ್ ಕಿಡಿಕಾರಿದರು.
ಸಭೆಯಲ್ಲಿದ್ದ ತಹಸೀಲ್ದಾರ್ ಯಾವುದೇ ಇಲಾಖೆಯಲ್ಲಿ ಕಾರ್ಯಕ್ರಮ ನಡೆದರು ಅವರು ಕರಪತ್ರ , ಆಹ್ವಾನ ಪತ್ರಿಕೆ ಮುದ್ರಿಸುವಾಗ ತಹಸೀಲ್ದಾರ್ ಕಚೇರಿಯಿಂದ ಅನುಮೋದನೆ ಪಡೆಯಬೇಕು. ಇನ್ನು ಮುಂದೆ ಅಂತಹ ಕೆಲಸ ಆಗದಿದ್ದರೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಎಚ್ಚರಿಸಿದರು.
ಸದಸ್ಯ ವಿಶ್ವನಾಥ್ ತಾಲ್ಲೂಕಿನಲ್ಲಿ ಶಾಸಕರು ಹಲವಾರು ಗ್ರಾಮವಾಸ್ತವ್ಯಗಳನ್ನು ನಡೆಸುತ್ತಾರೆ. ಆದರೆ ಅಧಿಕಾರಿಗಳು ಕೇವಲ ಬೆರಳೆಣಿಕೆಯಷ್ಟು ಮಂದಿ ಭಾಗವಹಿಸುತ್ತಾರೆ. ಇದರ ಬಗ್ಗೆ ತಹಸೀಲ್ದಾರ್ ಮತ್ತು ಇಓ ಶಿಸ್ತು ಕ್ರಮ ಕೈಗೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಸತಿಗೃಹದಲ್ಲಿನ ಮಕ್ಕಳ ಬಟ್ಟೆ ಹರಿದಿರುವುದನ್ನು ಇತ್ತೀಚೆಗೆ ಭೇಟಿ ನೀಡಿದ ಹಿಂದುಳಿದ ವರ್ಗಗಳ ಸಚಿವರು ಗುರುತಿಸಿದ್ದು ಮಾಧ್ಯಮದಲ್ಲಿ ಪ್ರಸಾರವಾಗಿತ್ತು. ಅಂತಹ ಸಮಸ್ಯೆ , ಬಟ್ಟೆ ಹರಿದಿರುವ ಬಗ್ಗೆ ಮಾಹಿತಿ ಕೇಳಿದಾಗ ಬಿಸಿಎಂ ವಿಸ್ತರಣಾಧಿಕಾರಿ ಪಾರ್ವತವ್ವ ಇನ್ನು ಬಟ್ಟೆ ಸರ್ಕಾರದಿಂದ ಬಂದಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು
ಈ ಸಂದರ್ಭದಲ್ಲಿ ತಾಲ್ಲೂಕು ತಾ.ಪಂ.ಇ.ಒ. ಶಿವರಾಜಯ್ಯ , ಉಪಾಧ್ಯಕ್ಷೆ ಶರೀಫಾ ಬಿ ಶಮೀಉಲ್ಲಾ, ಸದಸ್ಯರಾದ ಕೆಂಪೇಗೌಡ , ಯು ಕೆ ಕುಮಾರ್ , ವಿಶ್ವನಾಥ್ , ಅಲ್ಲಭಕಾಷ್ , ಗಂಗರಂಗಯ್ಯ ಸೇರಿದಂತೆ ಹಲವು ಸದಸ್ಯರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
