ಚಿತ್ರದುರ್ಗ;
ಐತಿಹಾಸಿಕ ಕೋಟೆಗೆ ಶಬ್ದ ಮತ್ತು ಧ್ವನಿ ಬೆಳಕು ಅಳವಡಿಸಲು ಉದ್ದೇಶಿಸಲಾಗಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಕ್ಯಾದಿಗೆರೆಯಿಂದ ನೇರವಾಗಿ ಕೋಟೆವರೆಗೆ ನೇರ ರಸ್ತೆ ಸಂಪರ್ಕಕ್ಕೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಇವೆರೆಡೂ ಶೀಘ್ರದಲ್ಲಿ ಆಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಗುರುವಾರ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರವಾಸೋದ್ಯಮ ಇಲಾಖೆ ಪ್ರವಾಸಿ ನೀತಿ ಜಾರಿಗೊಳಿಸಿದೆ. ಪ್ರವಾಸಿಗರಿಗೆ ಅನುಕೂಲವಾಗುವ ಹೋಟೆಲ್ ಕಟ್ಟಿದರೆ 1 ಕೋಟಿ ರೂಪಾಯಿವರೆಗೂ ಸಬ್ಸಿಡಿ ಸಿಗಲಿದೆ. ಇದನ್ನು ಬಳಕೆ ಮಾಡಿಕೊಂಡು ಉತ್ತಮ ಪ್ರವಾಸಿ ತಾಣಗಳನ್ನಾಗಿ ಮಾಡಿ ಪ್ರವಾಸಿಗರನ್ನು ಆಕರ್ಷಿಸಬೇಕಾಗಿದೆ. ಅದಕ್ಕಾಗಿ ಎಲ್ಲರ ಸಹಕಾರ ಮುಖ್ಯ ಎಂದು ಹೇಳಿದರು.
ದೇಶದ ಜಿಡಿಪಿಯಲ್ಲಿ ಪ್ರವಾಸೋದ್ಯಮದ ಕೊಡುಗೆ ಶೇಕಡ 10 ರಷ್ಟಿದೆ. ವಿದೇಶಿ ಕರೆನ್ಸಿ 3 ಬಿಲಿಯನ್ ಇದೆ. 20 ರಿಂದ 30 ವರ್ಷಗಳ ಹಿಂದಿನ ಪ್ರವಾಸೋದ್ಯಮ ಸ್ಥಿತಿ ಈಗ ಬದಲಾವಣೆಯಾಗಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮದಲ್ಲಿ 3ನೇ ಸ್ಥಾನದಲ್ಲಿದೆ. ಕರ್ನಾಟಕ ರಾಜ್ಯದಲ್ಲಿರುವ ಪ್ರವಾಸಿ ತಾಣಗಳ ವೈವಿಧ್ಯತೆ ಬೇರೆ ಎಲ್ಲೂ ಇಲ್ಲ. ಅದು 1ನೇ ಸ್ಥಾನಕ್ಕೆ ಬರಬೇಕಾಗಿದೆ ಎಂದರು.
ಪ್ರವಾಸಿತಾಣಗಳಲ್ಲಿ ವ್ಯವಹಾರ ಮಾಡಿದರೆ ಅಭ್ಯಂತರವಿಲ್ಲ ಆದರೆ ಪ್ರವಾಸಿಗರಿಗೆ ಮೋಸವಾಗಬಾರದು. ಎಲ್ಲಕ್ಕಿಂತ ಮುಖ್ಯವಾಗಿ ಪ್ರವಾಸಿ ತಾಣಗಳಲ್ಲಿ ಮಾರ್ಗದರ್ಶಿಗಳು ಹೆಚ್ಚಿನ ಹಣ ವಸೂಲಿ ಮಾಡುವುದನ್ನು ತಡೆಯಬೇಕು ಎಂದು ಸೂಚನೆ ನೀಡಿದ ಜಿಲ್ಲಾಧಿಕಾರಿಳು ಚಿತ್ರದುರ್ಗ ಕೋಟೆ ನೋಡಲು ಬರುವ ಪ್ರವಾಸಿಗರು ಬಂದ ಕೂಡಲೇ ಗೈಡ್‍ಗಳು ಸಿಗಬೇಕು. ಗೈಡ್‍ಗಳು ಸಿಗದಿದ್ದರೆ ಪ್ರವಾಸಿತಾಣಗಳ ಮಾಹಿತಿ ಪಡೆಯುವುದು ಕಷ್ಟವಾಗಲಿದೆ.
ಇದಕ್ಕಾಗಿ ಮೊದಲು ಪ್ರವಾಸಿತಾಣಗಳಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಸ್ವಯಂ ಸೇವಕರನ್ನು ಸಿದ್ದಗೊಳಿಸಬೇಕು. ನಂತರ ಗೈಡ್‍ಗಳು ಪ್ರವಾಸಿಗರಿಂದ 500 ರೂಪಾಯಿ 1 ಸಾವಿರ ರೂಪಾಯಿ ತೆಗೆದುಕೊಳ್ಳುವುದಕ್ಕೆ ಕಡಿವಾಣ ಹಾಕಬೇಕು. ಕನಿಷ್ಠ ಇಂತಿಷ್ಟು ಎಂದು ನಿಗಧಿಪಡಿಸಬೇಕು. ಇಲ್ಲದಿದ್ದರೆ ಪ್ರವಾಸಿಗರು ದುಬಾರಿಯಾಗುತ್ತದೆ ಎನ್ನುವ ಹಿನ್ನೆಲೆಯಲ್ಲಿ ಗೈಡ್ ಇಲ್ಲದೆ ಕೋಟೆ ನೋಡಿಕೊಂಡು ಹೋಗುತ್ತಾರೆ. ಆಗ ಗೈಡ್‍ಗಳಿಗೆ ಕೆಲಸವಿಲ್ಲದಂತಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಚೀನಾ ದೇಶದಲ್ಲಿ ಬಹುತೇಕ ವಸ್ತುಗಳು ನಕಲಿ. ಅಲ್ಲಿ ವಸ್ತು ಖರೀದಿಸಿದ ವ್ಯಕ್ತಿಯೊಬ್ಬರಿಗೆ ಚಿಲ್ಲರೆಯಲ್ಲಿ ನಕಲಿ ನೋಟು ಇತ್ತು. ಇದು ಪ್ರವಾಸಿಗರ ಮೇಲೆ ಪರಿಣಾಮ ಬೀರಲಿದೆ. ಪ್ರವಾಸಿಗರು ಉತ್ತಮ ಅನುಭವದೊಂದಿಗೆ ಹೋಗಬೇಕೆ ಹೊರತು ಕಹಿ ಅನುಭವದೊಂದಿಗೆ ಹೋಗಬಾರದು. ವ್ಯವಹಾರ ಮಾಡಿ ಲಾಭ ಪಡೆದುಕೊಂಡರೆ ಯಾವುದೇ ಅಭ್ಯಂತರವಿಲ್ಲ. ಯಾವುದೇ ಕಾರಣಕ್ಕೂ ಪ್ರವಾಸಿಗರಿಗೆ ಮೋಸವಾಗಬಾರದು ಎಂದರು.
ಪ್ರೊಬೆಷನರಿ ಐಎಎಸ್ ಅಧಿಕಾರಿ ನಂದಿನಿದೇವಿ ಮಾತನಾಡಿ, ಚಿತ್ರದುರ್ಗ ಜಿಲ್ಲೆಯಲ್ಲಿ ಸಾಹಸ ಮತ್ತು ಎಕೋ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶ ಇದೆ. ಎಕೋ ಪ್ರವಾಸೋದ್ಯಮ ಅಭಿವೃದ್ದಿಗೆ ಫೈಲಟ್ ಯೋಜನೆ ತಯಾರಿಸುವಂತೆ ಸಲಹೆ ಸಹ ನೀಡಿದ್ದೇನೆ. ಇದರ ಬಗ್ಗೆ ಅಧಿಕಾರಿಗಳು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.
ಪ್ರವಾಸೋದ್ಯಮ ಇಲಾಖೆ ಸಹಾಯಕ ನಿದೇರ್ಶಕ ಡಾ.ಎಸ್.ತಿಪ್ಪೇಸ್ವಾಮಿ ಮಾತನಾಡಿ, ಪ್ರತಿವರ್ಷ ಕೋಟೆ ಒಳಗೆ ಸಾಂಕೇತಿಕವಾಗಿ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತಿತ್ತು. ನೂತನ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಕಾಲೇಜಿನಲ್ಲಿ ಕಾರ್ಯಕ್ರಮ ನಡೆಸಲಾಗಿದೆ. ಪ್ರವಾಸೋದ್ಯಮ ಇಲಾಖೆಯಲ್ಲಿ ಸಾಕಷ್ಟು ಉದ್ಯೋಗ ಅವಕಾಶಗಳು ಇದ್ದರೂ ಅರ್ಹತೆ ಇಲ್ಲದೆ ಮತ್ತು ಕೌಶಲ್ಯ ಇಲ್ಲದೆ ಇರುವುದರಿಂದ ಹುದ್ದೆಗಳು ಖಾಲಿ ಇವೆ. ಹೊಸ ಹೊಸ ಕೋರ್ಸ್ ಅದರಲ್ಲಿಯೂ ಪ್ರವಾಸೋದ್ಯಮ ಕೋರ್ಸ್‍ಗಳನ್ನು ಮಾಡಿದರೆ ಬಿಕಾಂ ಬಿಬಿಎಂ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಇದೆ ಎಂದು ಹೇಳಿದರು.
ಹೆದ್ದಾರಿ ನಾಲ್ಕರಿಂದ ಕೋಟೆವರೆಗೆ ನೇರ ರಸ್ತೆ ಸಂಪರ್ಕಕ್ಕೆ 31 ಕೋಟಿಯಿಂದ 50ಕೋಟಿ ಅನುದಾನಕ್ಕೆ ಹೆಚ್ಚಿಸಿರುವ ಕೀರ್ತಿ ಜಿಲ್ಲಾಧಿಕಾರಿಗೆ ಸಲ್ಲುತ್ತದೆ. ಕೋಟೆಗೆ ರಸ್ತೆ ಸಂಪರ್ಕ ಇಲ್ಲದೆ ಇರುವುದರಿಂದಲೇ ಪ್ರವಾಸಿಗರು ಬರುತ್ತಿಲ್ಲ. ರಸ್ತೆ ಸಂಪರ್ಕವಾದರೆ ವಿಶ್ವ ಭೂಪಟದಲ್ಲಿ ಜಿಲ್ಲೆ ಮಾನ್ಯತೆ ಪಡೆಯಲಿದೆ ಎಂದು ತಿಳಿಸಿದರು.
ಪ್ರಾಚಾರ್ಯರಾದ ಪ್ರೊ.ಸುಧಾಕರ್ ಅಧ್ಯಕ್ಷತೆ ವಹಿಸಿದ್ದರು. ಸ್ನಾತಕೋತ್ತರ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಗುಡದ್ದೇಶ್ವರಪ್ಪ, ಡಾ.ನಾಗರಾಜಪ್ಪ ಹಾಗೂ ಇನ್ನಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ