ಆಸ್ತಿ ತೆರಿಗೆ ಪಾವತಿ ಮಾಡುವ ಕಾಲಾವಧಿ ಜುಲೈ 31ರವರೆಗೂ ವಿಸ್ತರಣೆ

ತುಮಕೂರು

      ಸರ್ಕಾರದ ಆದೇಶದಂತೆ ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕಾಗಿ ಜಾರಿಯಲ್ಲಿರುವ ಲಾಕ್‍ಡೌನ್ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯ ಆಸ್ತಿ ತೆರಿಗೆ ಪಾವತಿ ಮೇಲಿನ ಶೇ.5ರ ರಿಯಾಯಿತಿ ಕಾಲಾವಧಿಯನ್ನು ಮೇ 31 ರಿಂದ ಜುಲೈ 31ರವರೆಗೆ ವಿಸ್ತರಿಸಲಾಗಿದೆಯೆಂದು ಮೇಯರ್ ಫರೀದಾ ಬೇಗಂ ತಿಳಿಸಿದರು.

      ತಮ್ಮ ಕಛೇರಿಯಲ್ಲಿಂದು ಮಾತನಾಡಿದ ಅವರು ಲಾಕ್‍ಡೌನ್ ಅವಧಿಯಲ್ಲಿ ವೈಯಕ್ತಿಕ ಆದಾಯವಿಲ್ಲದೆ ಸಂಕಷ್ಟದಲ್ಲಿರುವವರು ನಿಗಧಿತ ಅವಧಿಯೊಳಗೆ ಆಸ್ತಿ ತೆರಿಗೆ ಪಾವತಿಸಲು ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಈ ಕಾಲಾವಧಿಯನ್ನು ವಿಸ್ತರಣೆ ಮಾಡಲಾಗಿದೆ. ಆಸ್ತಿ ತೆರಿಗೆ ಪಾವತಿಗೆ ಕಾಲಾವಕಾಶ ನೀಡಲು ಸರ್ಕಾರಕ್ಕೆ ಮನವಿ ಮಾಡಲಾಗಿದ್ದ ಹಿನ್ನೆಲೆಯಲ್ಲಿ ತೆರಿಗೆ ಪಾವತಿಗೆ 2 ತಿಂಗಳ ಕಾಲಾವಕಾಶ ದೊರೆತಿದೆ. ನಾಗರಿಕರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕೆಂದರು.ತಮ್ಮ ಜವಬ್ದಾರಿಯನ್ನರಿತು ನಿಗದಿತ ಅವಧಿಯೊಳಗೆ ಆಸ್ತಿ ತೆರಿಗೆಯನ್ನು ಸ್ವಯಂ ಇಚ್ಛೆಯಿಂದ ಪಾವತಿಸುತ್ತಿರುವ ನಾಗರಿಕರಿಗೆ ಅಭಿನಂದಿಸಿದರು.

     ಪ್ರತಿ 3 ವರ್ಷಕೊಮ್ಮೆ ಆಸ್ತಿ ತೆರಿಗೆಯನ್ನು ಶೇ.15ರಷ್ಟು ಏರಿಸುವಂತೆ ಸರ್ಕಾರದ ಆದೇಶವಿದ್ದು, ಈ ಆದೇಶದನ್ವಯ ಪ್ರಸಕ್ತ ವರ್ಷ ಶೇ.15ರಷ್ಟು ಆಸ್ತಿ ತೆರಿಗೆಯನ್ನು ಏರಿಸಬೇಕಾಗುತ್ತದೆ. ಈ ಸಂದರ್ಭದಲ್ಲಿಯೇ ಕೊರೋನಾ ಸೋಂಕು ಹರಡಿರುವುದು ನಮ್ಮ ದುರಾದೃಷ್ಟ ಎಂದು ತಿಳಿಸಿದರಲ್ಲದೆ ಪ್ರಸಕ್ತ ವರ್ಷ ವಿಧಿಸುವ ಶೇ.15ರಷ್ಟು ತೆರಿಗೆ ಏರಿಕೆಯನ್ನು ಕೈಬಿಡಬೇಕೆಂದು ಪಾಲಿಕೆಯ ಎಲ್ಲಾ ಸದಸ್ಯರು ಮನವಿ ಮಾಡಿರುವ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಸಂಸದ ಜಿ.ಎಸ್ ಬಸವರಾಜು ಹಾಗೂ ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಸಹಮತ ನೀಡಿದ್ದಾರೆ ಎಂದು ತಿಳಿಸಿದರು.

     ರಾಜ್ಯದಲ್ಲಿ ಪ್ರತಿದಿನ ಕೊರೋನಾ ಸೋಂಕಿತರ ಸಂಖ್ಯೆ ದ್ವಿಗುಣವಾಗುತ್ತಿರುವುದರಿಂದ ಪಾಲಿಕೆಯಿಂದ ನಗರದಾದ್ಯಂತ ಸ್ಯಾನಿಟೈಸಿಂಗ್ ಮಾಡುವುದರೊಂದಿಗೆ ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಾಗರಿಕರು ಸಹ ಸರ್ಕಾರ ಲಾಕ್ ಡೌನ್ ಸಡಿಲಿಕೆಗೊಳಿಸಿದೆಯೆಂದು ಅನಾವಶ್ಯಕವಾಗಿ ತಿರುಗಾಡದೆ ಸ್ವಯಂ ಹೊಣೆಗಾರಿಕೆಯಿಂದ ನಮಗೆ ನಾವೇ ಕೆಲವು ನಿಯಂತ್ರಣಾ ಕ್ರಮಗಳನ್ನು ಅನುಸರಿಸುವುದರಿಂದ ಕೊರೋನಾ ವೈರಸ್ ಸೋಂಕು ಹರಡದಂತೆ ತಡೆಗಟ್ಟಬಹುದು ಎಂದು ತಿಳಿಸಿದರು.

     ಈ ಸಂದರ್ಭದಲ್ಲಿ ನಾವು ಎಚ್ಚರಿಕೆ ವಹಿಸದಿದ್ದರೆ ಕೊರೊನಾ ವೈರಸ್‍ನಿಂದ ಬಿಡುಗಡೆ ಸಿಗುವುದಿಲ್ಲ. ಕೊರೊನಾ ವೈರಸ್ ಹರಡುವಿಕೆಯು ಜಾತಿ/ಧರ್ಮಕ್ಕೆ ಸೀಮಿತವಾಗಿಲ್ಲ. ಎಚ್ಚರ ತಪ್ಪಿದರೆ ಈ ರೋಗ ಬಹುಬೇಗ ಹರಡುವ ಸಾಧ್ಯತೆಯಿದೆ. ಕೋವಿಡ್-19 ನಿಯಂತ್ರಣಕ್ಕಾಗಿ ಅಗತ್ಯ ಇಲಾಖೆಗಳ ಅಧಿಕಾರಿ/ಸಿಬ್ಬಂದಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಜವಬ್ದಾರಿಯನ್ನರಿತು ಪಾಲಿಕೆಯೊಂದಿಗೆ ಸಹಕರಿಸಬೇಕು ಎಂದರು.

       ಮಹಾರಾಷ್ಟ್ರ ಸೇರಿದಂತೆ ಅಂತರಾಜ್ಯದಿಂದ ಬರುತ್ತಿರುವವರಿಂದ ಬಹುಬೇಗ ಸೋಂಕು ಹರಡುತ್ತಿದೆ. ಕಣ್ತಪ್ಪಿಸಿ ನಗರಕ್ಕೆ ಆಗಮಿಸುವವರ ಬಗ್ಗೆ ನಾಗರಿಕರು ಪಾಲಿಕೆಗೆ ಮಾಹಿತಿ ನೀಡಿ ಸಹಕರಿಸಬೇಕೆಂದು ಮನವಿ ಮಾಡಿದರು. ಮಾಹಿತಿ ನೀಡದೆ ಅಂತರಾಜ್ಯದಿಂದ ಸೋಂಕು ತರುವವರಿಂದ ಸಾಮಾನ್ಯರಿಗೂ ಹರಡುವ ಸಾಧ್ಯತೆಯಿದೆ.

       ಈ ಹಿನ್ನೆಲೆಯಲ್ಲಿ ಅಂತರಾಜ್ಯದಿಂದ ಬಂದವರು ಸ್ವಯಂ ಕ್ವಾರಂಟೈನ್‍ಗೆ ಒಳಗಾಗಿ ವೈದ್ಯಕೀಯ ಪರೀಕ್ಷೆ ಗೊಳಗಾಗಬೇಕು. ತುಮಕೂರು ನಗರವನ್ನು ಕರೋನಾ ಮುಕ್ತ ನಗರವನ್ನಾಗಿ ನಿರ್ಮಿಸುವ ಹೊಣೆ ನಮ್ಮೆಲ್ಲರ ಮೇಲಿರುವುದರಿಂದ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಪಾಲಿಕೆ ಸದಸ್ಯ ಮಹೇಶ್, ಕುಮಾರ್, ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap