ತುಮಕೂರು
ಏ.1ರಂದು ನಡೆಯಲಿರುವ ಶ್ರೀ ಸಿದ್ಧಗಂಗಾ ಮಠದ ಲಿಂ.ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ 112ನೇ ಜಯಂತಿಯ ಅಂಗವಾಗಿ ಮಾ.31ರಂದು ನಗರದ ಎಸ್‍ಐಟಿ ಕಾಲೇಜು ಮುಂಭಾಗದಿಂದ ಟೌನ್‍ಹಾಲ್ ವೃತ್ತದವರೆಗೆ ಶ್ರೀಗಳ ಭಾವಚಿತ್ರ ಮೆರವಣಿಗೆ ಮಾಡಲಾಗುತ್ತದೆ ಎಂದು ತುಮಕೂರು ನಾಗರಿಕ ವೇದಿಕೆಯ ಧನಿಯಾಕುಮಾರ್ ತಿಳಿಸಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತೀ ವರ್ಷದಂತೆ ಈ ವರ್ಷವೂ ತುಮಕೂರು ನಾಗರಿಕ ವೇದಿಕೆ ವತಿಯಿಂದ ಏ.1 ರಂದು ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಶ್ರೀಗಳ ಜನ್ಮದಿನೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮವನ್ಜು ವಿಜೃಂಭಣೆಯಿಂದ ನಡೆಸಲಾಗುತ್ತದೆ. ಅದರಂತೆ ಇಂದು ( ಮಾ.31) ಸಂಜೆ 4 ಗಂಟೆಗೆ ಶ್ರೀಗಳ ಭಾವಚಿತ್ರ ಮೆರವಣಿಗೆ ನಡೆಸಲಾಗುತ್ತದೆ ಎಂದರು.
ಶ್ರೀಗಳ ಭಾವಚಿತ್ರವನ್ನು ಸಿಂಗರಿಸಿದ ಹೂವಿನ ಮಂಟಪದಲ್ಲಿಟ್ಟು ಮೆರವಣಿಗೆ ಮಾಡಲಿದ್ದು, ಕಾರ್ಯಕ್ರಮಕ್ಕೆ ಎಲೆರಾಂಪುರದ ಡಾ.ಶ್ರೀ ಹನುಮಂತನಾಥ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. ಮೆರವಣಿಗೆಯಲ್ಲಿ ನಾಸಿಕ್ ಡೋಲ್, ಪೂಜಾ ಕುಣಿತ, ಗೊಂಬೆ ಕುಣಿತ, ನಂದಿ ಧ್ವಜ ಕುಣಿತ, ವೀರಗಾಸೆ, ಪಟ್ಟದ ಕುಣಿತ, ಡೊಳ್ಳು ಕುಣಿತ ಸೇರಿದಂತೆ ಒಟ್ಟು 12 ಕಲಾ ತಂಡಗಳು ಭಾಗವಹಿಸಲಿವೆ ಎಂದು ಹೇಳಿದರು.
ಇಂದು ನಡೆಯುವ ಸಿದ್ಧಲಿಂಗಾ ಶ್ರೀಗಳ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಾದ ಎಸ್‍ಐಟಿ, ಬಿಎಚ್ ರಸ್ತೆ, ಸೋಮೇಶ್ವರಪುರಂ, ರಾಧಾಕೃಷ್ಣ ರಸ್ತೆ ಮುಖಾಂತರ ನಗರದ ಟೌನ್‍ಹಾಲ್ ವೃತ್ತಕ್ಕೆ ಬಂದು ತಲುಪಲಿದೆ. ಈ ವೈಭವದ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಶ್ರೀಗಳ ಭಾವಚಿತ್ರ ಮೆರವಣಿಗೆ ಸಾಗುವ ರಾಜ ಬೀದಿಗಳನ್ನು ಸ್ವಚ್ಛಗೊಳಿಸಲಾಗುತ್ತದೆ. ಜೊತೆಗೆ ರಂಗೋಲಿಗಳನ್ನು ಹಾಕುವಂತೆ ನಾಗರಿಕ ಸಮಿತಿಯಿಂದ ಮನವಿ ಮಾಡಲಾಗಿದೆ. ಅಲ್ಲದೇ ಪ್ರಮುಖ ರಸ್ತೆಯಲ್ಲಿ ಶ್ರೀಗಳ ಭಾವಚಿತ್ರ ಇಟ್ಟು ಪುಷ್ಪಮಾಲಿಕೆ ಸಮರ್ಪಿಸಲಾಗುತ್ತದೆ. ಮೆರವಣಿಗೆ ಹೋಗುವ ಮಾರ್ಗದಲ್ಲಿ ಭಕ್ತರಿಗೆ ನೀರು, ಮಜ್ಜಿಗೆ, ದಾಸೋಹದ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಲಿಂ.ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಜನ್ಮದಿನೋತ್ಸವದ ಆಚರಣೆ ಹೆಸರಿನಲ್ಲಿ ನಗರದಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪವಿದೆ? ಎಂಬ ಸುದ್ದಿಗಾರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ದೇವರ ಕಾರ್ಯ ಮಾಡುತ್ತಿದ್ದೇವೆ.
ಶ್ರೀಗಳ ಹೆಸರು ಬಳಕೆ ಮಾಡಿಕೊಂಡು ಹಣ ದೋಚುವ ಕೆಲಸ ಮಾಡುವ ಅವಶ್ಯಕತೆ ನಮಗಿಲ್ಲ. ಶ್ರೀಗಳ ಮೇಲಿನ ಭಕ್ತಿಯಿಂದ ಪ್ರತಿ ವರ್ಷ ಅವರ ಜನ್ಮದಿನೋತ್ಸವ ಮಾಡಲು ನಾಗರಿಕ ಸಮಿತಿ ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ನೋಂದಣಿ ಮಾಡಿಸಲಾಗುತ್ತದೆ. ಕಾರ್ಯಕ್ರಮಕ್ಕೆ ಅವಶ್ಯಕತೆಯಿದ್ದಷ್ಟು ಹಣ ಬಳಸಿ ಉಳಿದ ಹಣವನ್ನು ಶ್ರೀಮಠಕ್ಕೆ ನೀಡಲಾಗುತ್ತಿದೆ. ಅದರ ಸಂಪೂರ್ಣ ವಿವರ ನಮ್ಮಲ್ಲಿದೆ ಎಂದು ದಾಖಲೆಗಳನ್ನು ಪ್ರದರ್ಶಿಸಿದರು.
ಲಿಂ.ಡಾ.ಶ್ರೀ ಶಿವಕುಮಾರ ಶ್ರೀಗಳ ಜನ್ಮದಿನೋತ್ಸವವನ್ನು ಶ್ರೀಮಠ ಹೊರತುಪಡಿಸಿ ನಗರದಲ್ಲಿ ಮಾಡುವುದು ಬೇಡ ಎಂದು ಮಠದ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು ಹೇಳಿದರೆ ಅದಕ್ಕೆ ತಲೆಬಾಗಿ ಮಠದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ನಮ್ಮ ಬೆಂಬಲ ಇರುತ್ತದೆ. ಈ ಮುಂಚೆಯಿಂದಲೂ ಮಠದಲ್ಲಿ ನಡೆಯುವ ಜಾತ್ರೆಗೆ ಹಾಗೂ ಇತರ ಕಾರ್ಯಗಳಿಗೂ ನಾವು ಬೆಂಬಲ ನೀಡಿದ್ದೇವೆ. ಮುಂದೆಯೂ ನೀಡುತ್ತೇವೆ ಎಂದು ತಿಳಿಸಿದರು.ಸಮಿತಿಯ ಸಂಚಾಲಕರಾದ ಪಲ್ಲವಿ ನಾಗಣ್ಣ , ವಿನಯ್ ಜೈನ್, ಭಗತ್ ಸಿಂಗ್ ಆರಾಧ್ಯ ಮತ್ತಿತರಿದ್ದರು.