ಲಿಂಗಾಯತರ ಅವಹೇಳನ: ನಾಳೆ ಪ್ರತಿಭಟನೆ

ದಾವಣಗೆರೆ:

       ಲೋಕಸಭಾ ಚುನಾವಣೆಯ ಮತದಾನದ ಸಂದರ್ಭದಲ್ಲಿ ತಾಲೂಕಿನ ನೇರ್ಲಿಗೆ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಡಾ.ವೈ.ರಾಮಪ್ಪ ವೀರಶೈವ-ಲಿಂಗಾಯತ ಮತ್ತು ಮೇಲ್ಜಾತಿಗಳ ಬಗ್ಗೆ ಅವಹೇಳನ ಮಾಡಿರುವುದನ್ನು ಖಂಡಿಸಿ, ಇಂದು (ಮೇ.25ರಂದು) ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಲಿಂಗಾಯತ-ವೀರಶೈವ ಸಮಾಜದ ಸಮಾನ ಮನಸ್ಕರ ವೇದಿಕೆ ನಿರ್ಧರಸಿದೆ.

       ಇಲ್ಲಿನ ವಿದ್ಯಾನಗರದ ಶ್ರೀಶಿವ ಪಾವರ್ತಿ ಗಣಪತಿ ದೇವಸ್ಥಾನದಲ್ಲಿ ಬುಧವಾರ ಸಭೆ ಸೇರಿದ ಲಿಂಗಾಯತ-ವೀರಶೈವ ಸಮಾಜದ ಸಮಾನ ಮನಸ್ಕರು ವೈ.ರಾಮಪ್ಪನವರ ವರ್ತನೆಯನ್ನು ತೀವ್ರವಾಗಿ ಖಂಡಿಸಿ, ಇಂದು ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆಂದು ಸಮಾಜದ ಮುಖಂಡ ಹೊನ್ನೂರು ಮುನಿಯಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

        ಲಿಂಗಾಯತ ಸಮಾಜದ ಅವಹೇಳನ ಮಾಡಿರುವ ವೈ.ರಾಮಪ್ಪ ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿ, ಇಂದು ಬೆಳಿಗ್ಗೆ 11 ಗಂಟೆಗೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿ, ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಎಸಿ ಕಚೇರಿಯ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದೇವೆ. ಈ ಹೋರಾಟದಲ್ಲಿ ಸುಮಾರು 4ರಿಂದ 5 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದರು.

        ಡಾಕ್ಟರೇಟ್ ಪದವಿ ಪಡೆದಿರುವ, ವಿವೇಚನವುಳ್ಳ ವ್ಯಕ್ತಿಯಾಗಿರುವ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಡಾ.ವೈರಾಮಪ್ಪ ನಿನ್ನೆ ಮಧ್ಯಾಹ್ನ 3 ಗಂಟೆ ಸಂದರ್ಭದಲ್ಲಿ ನೇರ್ಲಿಗೆ ಗ್ರಾಮದಲ್ಲಿ ಒಂದು ಪಕ್ಷದ ಪರವಾಗಿ ಲಿಂಗಾಯತ-ವೀರಶೈವರು ಕೆಲಸ ಮಾಡುತ್ತಿದ್ದಾರೆಂಬ ಕಾರಣಕ್ಕೆ ಅಡ್ಡಗಟ್ಟಿ, ಲಿಂಗಾಯತ, ಶಿವ ಪದಗಳನ್ನು ಒತ್ತಿ, ಒತ್ತಿ ಹೇಳಿರುವುದಲ್ಲದೇ, ಅವಾಚ್ಯ ಶಬ್ಧಗಳಿಂದ ಸಮಾಜವನ್ನು ನಿಂದಿಸಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆಂದು ಆಕ್ರೋಶ ವ್ಯಕ್ತಪಡಿಸಿದರು.

        ನಿಮ್ಮ ಮೈಯಲ್ಲಿ ಹಾಗೂ ನಮ್ಮ ಮೈಯಲ್ಲಿ ಹರಿಯುತ್ತಿರುವುದು ಬೇರೆ, ಬೇರೆ ರಕ್ತವೇ?. ನೀವೇ ನಿರಂತರವಾಗಿ ಆಡಳಿತ ಮಾಡಬೇಕಾ? ಎಪಿಎಂಸಿ ಸಂಗಪ್ಪ ನೇರ್ಲಿಗೆಗೆ ಬಂದರೆ, ಕಂಬಕ್ಕೆ ಕಟ್ಟಿ ಹಾಕ್ತಿವಿ, ನೀವು ಎಲೆಕ್ಷನ್ ದಿನ ರಸ್ತೆಗೆ ಬಂದರೆ ಮಚ್ಚು-ಕಣಿಗೆ ಓಡಾಡುತ್ತವೆ ಎಂಬುದಾಗಿ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೀಗಾಗಿ ರಾಮಪ್ಪನ ವಿರುದ್ಧ ಪಕ್ಷತೀತವಾಗಿ ಹೋರಾಟ ನಡೆಸುತ್ತಿದ್ದೇವೆ ಎಂದರು.

      ಯುವ ಮುಖಂಡ ಹೆಮ್ಮನ ಬೇತೂರು ಶಶಿಧರ್ ಮಾತನಾಡಿ, ನಮ್ಮ ಸಮಾಜದವರು ಬೈದಿದ್ದರೇ, ಅವರು ಬೈಯಲಿ. ಆದರೆ, ಏನೂ ಮಾಡದ ನಮ್ಮ ಸಮಾಜದ ವಯೋ ವೃದ್ಧರನ್ನು ಅಡ್ಡಗಟ್ಟಿ, ಅತ್ಯಂತ ಕೀಳು ಪದಗಳನ್ನು ಬಳಸಿ, ಅವಾಚ್ಯವಾಗಿ ನಿಂದಿಸಿದ್ದಾರೆ. ಅಲ್ಲದೇ, ಈ ಘಟನೆಯನ್ನು ಮೊಬೈಲ್‍ನಲ್ಲಿ ಚಿತ್ರೀಕರಿಸಿರುವ ಮುಗ್ಧರ ವಿರುದ್ಧವು ಮಾಯಕೊಂಡ ಠಾಣೆಯಲ್ಲಿ ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಿಸುವ ಮೂಲಕ ಅಟ್ರಾಸಿಟಿ ಕಾಯ್ದೆಯನ್ನು ದೂರುಪಯೋಗ ಪಡೆಸಿಕೊಂಡಿದ್ದಾರೆಂದು ಆರೋಪಿಸಿದರು.

     ಇನ್ನೋರ್ವ ಮುಖಂಡ ಲೋಕಿಕೆರೆ ನಾಗರಾಜ್ ಮಾತನಾಡಿ, ವೈ.ರಾಮಪ್ಪನವರು ಇದೊಂದು ಘಟನೆಯೇ ಅಲ್ಲ. ಇದು ನಾಲ್ಕನೇ ಘಟನೆಯಾಗಿದೆ. ಚುನಾವಣೆಯಲ್ಲಿ ಅವರ ವಿರುದ್ಧ ಕೆಲಸ ಮಾಡಿದವರ ವಿರುದ್ಧ ಅಟ್ರಾಸಿಟಿ ಕಾಯ್ದೆಯಡಿ ದೂರು ದಾಖಲಿಸುವುದೇ ಅವರ ಜಾಯಮಾನವಾಗಿದೆ. ರಾಮಪ್ಪ ನಮ್ಮ ಸಮುದಾಯದ ಅವಹೇಳನ ಮಾಡಿರುವ ವಿಡಿಯೋ ತುಣಕನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೀಡುವ ಮೂಲಕ ಅವರ ವಿರುದ್ಧ ದೂರು ದಾಖಲಿಸುತ್ತೇವೆ ಎಂದರು.

      ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಪವಾಡ ರಂಗ್ಗವ್ವನಹಳ್ಳಿ ಉಮೇಶ್, ಕಾಶೀಪುರ ಸಿದ್ದಪ್ಪ, ರಮೇಶ್, ಚನ್ನಬಸಪ್ಪ, ಅಣಬೇರು ಗಂಗಾಧರ್, ಶ್ಯಾಗಲೆ ಜಯಣ್ಣ, ಸತೀಶ್ ಸಿರಿಗೆರೆ, ಸತೀಶ್ ಬೆಳವನೂರು, ಹೊನ್ನೂರು ವೀರೇಶ್ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link