ಲಯನ್ಸ್ ಕ್ಲಬ್‍ನಿಂದ ಪದವಿ ಕಾಲೇಜು ಆರಂಭವಾಗಲಿ

ದಾವಣಗೆರೆ:

     ಐವತ್ತು ವರ್ಷ ಪೂರೈಸಿರುವ ದಾವಣಗೆರೆ ಲಯನ್ಸ್ ಕ್ಲಬ್ ವತಿಯಿಂದ ಪದವಿ ಕಾಲೇಜು ಸಹ ಆರಂಭವಾಗಲಿ ಎಂದು ಲಯನ್ಸ್ ಸಂಸ್ಥೆಯ 317ಸಿ ಜಿಲ್ಲೆಯ ರಾಜ್ಯಪಾಲ ತಲ್ಲೂರು ಶಿವರಾಮ ಶೆಟ್ಟಿ ಆಶಯ ವ್ಯಕ್ತಪಡಿಸಿದರು.

    ಇಲ್ಲಿನ ದೇವರಾಜ ಅರಸ್ ಬಡಾವಣೆಯ ಎ ಬ್ಲಾಕ್‍ನಲ್ಲಿರುವ ಲಯನ್ಸ್ ಭವನದಲ್ಲಿ ಭಾನುವಾರ, ದಾವಣಗೆರೆ ಲಯನ್ಸ್ ಕ್ಲಬ್‍ನ ಸುವರ್ಣ ಮಹೋತ್ಸವ, ಗೋಲ್ಡನ್ ಜೂಬ್ಲಿ ಸಭಾಂಗಣದ ಶಿಲನ್ಯಾಸ ಹಾಗೂ ಗೋಲ್ಡನ್ ಜೂಬ್ಲಿ ಕಾಲೇಜು ಬ್ಲಾಕ್‍ನ ಭೂಮಿ ಪೂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದಾದರೂ ಒಂದು ಸಂಸ್ಥೆ ಐವತ್ತು ವರ್ಷ ಪೂರೈಸಿದೆ ಎಂದರೆ, ಆ ಸಂಸ್ಥೆಗೆ ಯವ್ವೌನ ಬಂದಂತೆ ಆಗಲಿದೆ. ಈಗ ದಾವಣಗೆರೆ ಲಯನ್ಸ್ ಕ್ಲಬ್‍ಗೂ 50ರ ಯವ್ವೌನ ಬಂದಿದ್ದು, 125 ಜನ ಸದಸ್ಯರನ್ನು ಹೊಂದಿರುವ ಈ ಸಂಸ್ಥೆಯ ಸುವರ್ಣ ಮಹೋತ್ಸವದ ನೆನಪಿಗಾಗಿ ನವೀಕರಿಸಿದ ಭವ್ಯ ಭವನ ನಿರ್ಮಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಪದವಿ ಪೂರ್ವ ಕಾಲೇಜು ಆರಂಭಿಸುವ ಕನಸಿನೊಂದಿಗೆ ಇಂದು ಭೂಮಿ ಪೂಜೆ ನೆರವೇರಿಸಿದ್ದು, ಇಲ್ಲಿ ಸುಸಜ್ಜಿತ ಪಿಯು ಕಾಲೇಜು ಆರಂಭವಾಗಿ ಗುಣಮಟ್ಟದ ಶಿಕ್ಷಣ ನೀಡುವಂತಾಗಲಿ. ಅಲ್ಲದೇ, ಮುಂದೆ ಪದವಿ ಕಾಲೇಜು ಸಹ ನಿರ್ಮಾಣವಾಗಲಿ. ಪದವಿ ಪೂರ್ವ ಕಾಲೇಜು ಕಟ್ಟುವ ಉದ್ದೇಶಕ್ಕೆ ಡಾ.ನಾಗಪ್ರಕಾಶ್ ಅವರು ವೈಯಕ್ತಿಕವಾಗಿ 10 ಲಕ್ಷ ರೂ. ದೇಣಿಗೆ ನೀಡಿರುವುದು ನಿಜಕ್ಕೂ ಎಲ್ಲರಿಗೂ ಮಾದರಿಯಾಗಿದೆ ಎಂದರು.

     ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ಮೊದಲೆಲ್ಲಾ ರಾಜನಹಳ್ಳಿ ಮನೆತನ, ಚಿಗಟೇರಿ ಮನೆತನ ಹಿಂಗೇ ಬರೀ ಶೆಟ್ರೋವೇ ಕಲ್ಯಾಣ ಮಂಟಪ, ಶಾಲೆಗಳಿದ್ವು. ಈಗ ಲಯನ್ಸ್ ಕ್ಲಬ್‍ನಿಂದ ಆರಂಭವಾಗುತ್ತಿರುವ ಪದವಿ ಪೂರ್ವ ಕಾಲೇಜಿಗೆ 10 ಲಕ್ಷ ರೂ. ದೇಣಿಗೆ ನೀಡಿರುವ ನಾಗಪ್ರಕಾಶ್ ಅವರ ಮೂಲಕ ಭವ್ಯ ಶಾಲಾ ಕಟ್ಟಡಗಳನ್ನು ಆರಂಭಿಸುವ ಕಾರ್ಯ ಬೇರೆಯವರಿಂದಲೂ ಆರಂಭವಾಗಲಿ ಎಂದು ಶುಭ ಹಾರೈಸಿದರು.

    ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ಲಯನ್ಸ್ ಟ್ರಸ್ಟ್‍ನ ಅಧ್ಯಕ್ಷ ಜಿ.ನಾಗನೂರ್ ಮಾತನಾಡಿ, ಲಯನ್ಸ್ ಕ್ಲಬ್ ವತಿಯಿಂದ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದೇವೆ. ನವೀಕರಣಗೊಂಡು ಶಿಲನ್ಯಾಸಗೊಂಡಿರುವ ಈ ಹಾಲ್ ಅನ್ನು ಜೂನ್ 2ರ 1991ರಲ್ಲಿ ಸಣ್ಣದಾಗಿ ನಿರ್ಮಾಣ ಮಾಡಿದ್ದೇವು.

      ಆದರೆ, ಇಂದು (2-6-2019) ನವೀಕರಣಗೊಂಡು ಭವ್ಯ ಕಟ್ಟಡವಾಗಿ ನಿರ್ಮಾಣವಾಗಿದೆ. ಇಲ್ಲಿ ಮೊದಲು ಪ್ಲೇ ಗ್ರೂಪ್‍ನಿಂದ ಆರಂಭವಾದ ಶಾಲೆಯು ಈಗ 10ನೇ ತರಗತಿಯ ವರೆಗೆ ಶಿಕ್ಷಣ ನೀಡುತ್ತಿದೆ. ಆದರೆ, ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಲಯನ್ಸ್ ಕ್ಲಬ್ ಈಗ ಮೇಗಾ ಪ್ಲಾನ್ ಹಾಕಿಕೊಂಡು, ಗೋಲ್ಡನ್ ಜೂಬ್ಲಿ ಕಾಲೇಜು ನಿರ್ಮಾಣ ಮಾಡಲು ಮುಂದಾಗಿರುವುದು. ಉತ್ತಮ ಯೋಜನೆಯಾಗಿದ್ದು, ಇದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಸಲಹೆ ನೀಡಿದರು.

     ಪ್ರಾಸ್ತಾವಿಕ ಮಾತನಾಡಿದ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಡಾ.ಬಿ.ಎಸ್.ನಾಗಪ್ರಕಾಶ್, 1969ರಲ್ಲಿ ಶಿವಮೊಗ್ಗ ಲಯನ್ಸ್ ಕ್ಲಬ್‍ನಿಂದ ನೆಲೆಯೂರಿದ ದಾವಣಗೆರೆ ಲಯನ್ಸ್ ಕ್ಲಬ್ ಇಂದು ಐವತ್ತು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಈ ಸುರ್ವಣ ಮಹೋತ್ಸವ ಏರ್ಪಡಿಸಿದ್ದೇವೆ. 

     ಇದರ ಸ್ಮರಣಾರ್ಥ ನವೀಕರಿಸಿದ ಸುಸಜ್ಜಿತ ಹಾಲ್ ಲೋಕಾರ್ಪಣೆ ಮಾಡಿದ್ದೇವೆ. ಅಲ್ಲದೇ, ಈಗ ನಮ್ಮ ಲಯನ್ಸ್ ಶಾಲೆಯಿಂದ 10ನೇ ತರಗತಿಯ ವರೆಗೂ ಶಿಕ್ಷಣ ನೀಡುತ್ತಿದ್ದು, ಪಿಯುಸಿ ಕಾಲೇಜು ಆರಂಭಿಸಬೇಕೆಂಬ ಪ್ರಸ್ತಾಪ ಕ್ಲಬ್‍ನಲ್ಲಿ ಬಂದ ಹಿನ್ನೆಲೆಯಲ್ಲಿ ನನ್ನ 70ನೇ ಜನ್ಮ ದಿನವನ್ನು ಸಂಭ್ರಮದಿಂದ ಆಚರಿಸಿಕೊಳ್ಳುವ ಬದಲು ಕಾಲೇಜು ನಿರ್ಮಾಣಕ್ಕೆ 10 ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡಿದ್ದು, ಈ ವರ್ಷ ಸುಸಜ್ಜಿತ ಕಾಲೇಜು ಕಟ್ಟಡ ನಿರ್ಮಾಣವಾದ ಬಳಿಕ ಮುಂದಿನ ಶೈಕ್ಷಣಿಕ ವರ್ಷದಿಂದ ಪಿಯುಸಿ ತರಗತಿಯನ್ನು ಸಹ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

      ಕಾರ್ಯಕ್ರಮದಲ್ಲಿ ದಾವಣಗೆರೆ ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಬಿ.ಪ್ರತಾಪ್, ಇತರೆ ಪದಾಧಿಕಾರಿಗಳಾದ ವಿ.ಜಿ.ಶೆಟ್ಟಿ, ರವೀಂದ್ರ ಶೆಟ್ಟಿ, ಸುರೇಶ್ ಶೆಟ್ಟಿ, ದಿನೇಶ್, ಎ.ಆರ್.ಉಜ್ಜಿನಪ್ಪ, ಜೆ.ಪಿ.ಕೃಷ್ಣೇಗೌಡ, ಎನ್.ಎಂ.ಹೆಗಡೆ, ಎ.ಆರ್.ಉಜ್ಜಿನಪ್ಪ, ಬೆಳ್ಳೂಡಿ ಶಿವಕುಮಾರ್, ಶಿವಮೂರ್ತಿ, ಆಕಾಶ್, ಮಂಜುನಾಥಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. ಅಜಯ ನಾರಾಯಣ ಪ್ರಾರ್ಥಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap