ಪಾವಗಡ:
ಭ್ರಷ್ಟಾಚಾರ ಮುಕ್ತ ಸರ್ಕಾರವಾಗಬೇಕು. ರೈತರಿಗೆ ನೆರವಾಗುವಂತಹ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೊಳಿಸಬೇಕು ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥಸ್ವಾಮಿಗಳು ತಿಳಿಸಿದರು.
ಗುರುವಾರ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ 25 ನೆ ವರ್ಷದ ರಜತ ಮಹೋತ್ಸವ ಅಂಗವಾಗಿ ಸ್ವಾಮಿ ವಿವೇಕಾನಂದ ಸಂಘಟಿತ ಆಶ್ರಮದಲ್ಲಿನ ಆವರಣದಲ್ಲಿ ಇನ್ಫೋಸಿಸ್ ಪ್ರಾಯೋಜಕತ್ವದಲ್ಲಿ ರಜತ ಭವನದ ಆಸ್ಪತ್ರೆಯ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಸರ್ಕಾರ ಕಾರ್ಯವೈಖರಿಗೆ ಕಿಡಿಕಾರಿದರು.
ಕೃಷಿ ಮತ್ತು ಉದ್ದಿಮೆಯನ್ನು ಸರ್ಕಾರ ಸಮರ್ಪಕವಾಗಿ ನಿರ್ವಹಿಸಿದರೆ ಅಭಿವೃದ್ದಿ ಕಾಣುತ್ತೇವೆ. ಸರ್ಕಾರಕ್ಕೆ ಪ್ರತಿಯೊಬ್ಬರು ತೆರಿಗೆ ಕಟ್ಟುವಂತೆ ಬಡವರ ಸೇವೆಯನ್ನು ಕೈಗೊಂಡರೆ ಭಗವಂತನಿಗೆ ತೆರಿಗೆ ಕಟ್ಟಿದಂತೆ ಎಂದರು.
ಪಾವಗಡದ ಸ್ವಾಮಿ ಜಪಾನಂದಜಿಯವರು ಕಣ್ಣು, ಕಿವಿ, ಮೂಗು, ಹೃದಯ ಸಂಬಂಧಿ ರೋಗಗಳಿಗೆ ಹಾಗೂ ಕುಷ್ಟ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿರುವುದು ಮಹತ್ತರ ವಿಷಯವಾಗಿದೆ. ಇವರು ಗೋವು ಮತ್ತು ಮಾಧವನ ಸೇವೆಯನ್ನು ಮಾಡುತ್ತಿದ್ದು, ಜನಸೇವೆಯೆ ಜನಾರ್ಧನನ ಸೇವೆ, ಕಷ್ಟದಲ್ಲಿರುವವರ ಕಷ್ಟ ಪರಿಹಾರಕ್ಕೆ ಪ್ರಯತ್ನ ಪಡಬೇಕು. ನಮ್ಮ ಸುಖಕ್ಕಾಗಿ ಕಷ್ಟ ಪಟ್ಟರೆ ಅದು ತಾಪತ್ರಯವಾಗುತ್ತದೆ. ಆದರೆ ಮತ್ತೊಬ್ಬರಿಗಾಗಿ ಕಷ್ಟ ಪಟ್ಟರೆ ಅದು ತಪಸ್ಸಾಗುತ್ತದೆ. ಶಂಕರಾಚಾರ್ಯರು ಹೇಳಿದಂತೆ ಭಗವಂತನ ಆರಾಧನೆಯನ್ನು ಮಾಡಿ ಮೋಕ್ಷ ಪಡೆಯುವಂತೆ ತಿಳಿಸಿ, ಸರ್ಕಾರ ಮಾಡದ ಕೆಲಸವನ್ನು ಸ್ವಾಮಿ ಜಪಾನಂದಜಿ ಮಾಡುತ್ತಿದ್ದು, ಸೇವೆಯನ್ನು ಜಪ ಮಾಡಿಕೊಂಡು ಆನಂದ ಪಡುತ್ತಿರುವವರು ಜಪಾನಂದಜಿ ಎಂದು ಕೊಂಡಾಡಿದರು.
ಸ್ವಾಮಿ ಜಪಾನಂದಜಿ ಮಾತನಾಡಿ, ನಡೆದಾಡುವ ಶ್ರೀಕೃಷ್ಣ ಶ್ರೀ ವಿಶ್ವೇಶ್ವತೀರ್ಥ ಸ್ವಾಮಿಗಳ ಆಶೀರ್ವಾದದಿಂದ ಕಳೆದ 25 ವರ್ಷಗಳ ಹಿಂದೆ ಪ್ರಾರಂಭವಾದ ಸ್ವಾಮಿ ವಿವೇಕಾನಂದ ಸಂಘಟಿತ ಆರೋಗ್ಯ ಕೇಂದ್ರ ಇಂದು ತಾಲ್ಲೂಕಿನಲ್ಲಿ ಆರೋಗ್ಯ, ಕುಡಿಯುವ ನೀರು ಮತ್ತು ಮೇವು ವಿತರಿಸುತ್ತಾ ಬಂದಿದೆ. ರಾಜ್ಯದ ಎಲ್ಲೆಡೆ ಹಾಗೂ ಹೊರರಾಜ್ಯಗಳಲ್ಲಿ ತನ್ನ ಸೇವೆಯನ್ನು ಮಾಡುತ್ತಿದೆ. ರಾಜ್ಯವೂ ಸೇರಿದಂತೆ ತಮಿಳುನಾಡು, ಕೇರಳ, ಗುಜರಾತ್ ಮತಿತರ ಕಡೆಗಳಲ್ಲಿ ನೆರೆಹಾವಳಿಗೊಳಗಾದ ಸಂದರ್ಭದಲ್ಲಿ ಇನ್ಪೋಸಿಸ್ ಪ್ರಾಯೋಜಕತ್ವದಲ್ಲಿ ನೆರವು ನೀಡುತ್ತಾ ಬಂದಿದೆ ಎಂದರು.
ಬೆಂಗಳೂರಿನ ಶಂಕರ್ ಕ್ಯಾನ್ಸರ್ ಆಸ್ಪತ್ರೆಯ ಡಾ. ಬಿ.ಎಸ್. ಶ್ರೀನಾಥ್ ಮಾತನಾಡಿ, 40 ವರ್ಷ ಮೇಲ್ಪಟ್ಟವರು ಯಾವುದೇ ಅಳುಕಿಲ್ಲದೇ ಕ್ಯಾನ್ಸರ್ ತಪಾಸಣೆಗೊಳಗಾಗಬೇಕು. ಎಷ್ಟೋ ಬಡವರಿಗೆ ಕ್ಯಾನ್ಸರ್ 3 ನೆ ಮತ್ತು 4 ನೆ ಹಂತಕ್ಕೆ ಬಂದಾಗ ಚಿಕಿತ್ಸೆ ಪಡೆಯಲು ಕಷ್ಟವಾಗುತ್ತದೆ. ಮುಂದಿನ ತಿಂಗಳಿನಿಂದ ನಮ್ಮ ಶಂಕರ್ ಫೌಂಡೇಶನ್ ಆಸ್ಪತ್ರೆಯಿಂದ ಪಾವಗಡದ ಸ್ವಾಮಿ ವಿವೇಕಾನಂದ ಸಂಘಟಿತ ಆಸ್ಪತ್ರೆಯಲ್ಲಿ ತಿಂಗಳಿಗೊಮ್ಮೆ ಉಚಿತವಾಗಿ ಕ್ಯಾನ್ಸರ್ ತಪಾಸಣೆ ಮಾಡಿ, ಅವಶ್ಯ ಇರುವವರಿಗೆ ಚಿಕಿತ್ಸೆಯನ್ನು ನೀಡಲಾಗುವುದು ಎಂದು ತಿಳಿಸಿದರು.
ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರಾದ ಡಾ. ಎನ್.ಕುಮಾರ್ ಮಾತನಾಡಿ, ದೀನ –ದಲಿತರ ಸೇವೆಯನ್ನು ಮಾಡುವುದು ನಿಜವಾದ ದೇವರ ಸೇವೆಯಾಗುತ್ತದೆ. ಮಠಾಧೀಶರಾದವರು ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾರೆ. ಆದರೆ ವಿಶ್ವೇಶತೀರ್ಥಸ್ವಾಮಿಗಳು ಧಾರ್ಮಿಕ ಸೇವೆಯ ಜೊತೆಯಲ್ಲಿ ಜನತಾ ಸೇವೆಯನ್ನು ಮಾಡುತ್ತಿದ್ದು, ವಿವೇಕವಾಣಿಯಂತೆ ಸ್ವಾಮಿ ಜಪಾನಂದಜಿ ನಡೆಯುತ್ತಿದ್ದಾರೆ ಎಂದರು.
ಡಾ. ಚಂದ್ರಕಲಾ ಮಾತನಾಡಿ, ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರವು ಪಾವಗಡ ತಾಲ್ಲೂಕಿನಲ್ಲಿ 1992 ರಿಂದಲೂ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಿರುತ್ತದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರದ ಆದೇಶದ ಮೇರೆಗೆ ರಾಜ್ಯ ಆರೋಗ್ಯ ಇಲಾಖೆ ನಮ್ಮ ಸಂಸ್ಥೆಗೆ ಹಸ್ತಾಂತರಿಸಿತು. ಇದುವರೆಗೆ ಒಟ್ಟು 3829 ರೋಗಿಗಳನ್ನು ದಾಖಲು ಮಾಡಿ ಅವರಿಗೆ ಚಿಕಿತ್ಸೆಯನ್ನು ನೀಡಲಾಗಿದೆ. ಇವರಲ್ಲಿ 3695 ರೋಗಿಗಳು ಸಂಪೂರ್ಣವಾಗಿ ಕುಷ್ಠ ರೋಗದಿಂದ ಗುಣಮುಖರಾಗಿದ್ದಾರೆ. ಆಶ್ಚರ್ಯವೇನೆಂದರೆ, ಪ್ರಸಕ್ತ ಸಾಲಿನಲ್ಲಿ 21 ಹೊಸ ರೋಗಿಗಳನ್ನು ಗುರುತಿಸಿ ಅವರಿಗೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.
ಸ್ವಾಮಿ ವಿವೇಕಾನಂದ ಗ್ರಾಮಾಂತರ ಆರೋಗ್ಯ ಕೇಂದ್ರದಲ್ಲಿ ಅಂಗವಿಕಲ ಕುಷ್ಠರೋಗಿಗಳಿಗೆ ಅಂಗ ಪುನರ್ಜೋಡಣಾ ಶಸ್ತ್ರ ಚಿಕಿತ್ಸೆ (ಆರ್.ಸಿ.ಎಸ್)ಯನ್ನು ನಡೆಸಲಾಗುತ್ತಿದ್ದು, ಸದರಿ ಕೇಂದ್ರಕ್ಕೆ ಕರ್ನಾಟಕದಾದ್ಯಂತ ರೋಗಿಗಳು ಬಂದು ಶಸ್ತ್ರಚಿಕಿತ್ಸೆಯ ಸೌಲಭ್ಯವನ್ನು ಪಡೆದುಕೊಳ್ಳುತ್ತಾರೆ. ಪ್ರಸಕ್ತ ವರ್ಷದಲ್ಲಿ 18 ಜನರಿಗೆ ಶಸ್ತ್ರ ಚಿಕಿತ್ಸೆಯನ್ನು ನಡೆಸಿದ್ದು, ಇದುವರೆಗೆ ಒಟ್ಟು 520 ಜನರಿಗೆ ಅಂಗವಿಕಲತೆಯನ್ನು ಸರಿಪಡಿಸುವ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ.
ಹೈಕೋರ್ಟ್ನ ನಿವೃತ್ತ ನ್ಯಾಯಾ ಧೀಶೆ ಡಾ. ರತ್ನಕಲಾ, ಬೆಂಗಳೂರಿನ ಚಂದ್ರಶೇಖರ್ ಕಿವಿ-ಮೂಗು- ಗಂಟಲು ಆಸ್ಪತ್ರೆಯ ಮುಖ್ಯಸ್ಥ ಎಂ.ಎಸ್. ಶ್ರೀಕಾಂತ್, ಡಾ. ಕೀರ್ತಿಅಭಿಷೇಕ್, ಡಾ. ಜಿ. ವೆಂಕಟರಾಮಯ್ಯ ಮಾತನಾಡಿದರು.
ಆಸ್ಪತ್ರೆಯಲ್ಲಿ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ಪಡೆದುಕೊಂಡು ಹೀಗೆ ವಿದ್ಯಾಭ್ಯಾಸ ಮಾಡುತ್ತಿರುವ ಎಚ್. ಮೂರ್ತಪ್ಪ, ಕನಕಮೂರ್ತಿ, ತ್ರಿಶಾ, ಚರಣ್, ಸಲ್ಮಾ ಎಂಬ ವಿದ್ಯಾರ್ಥಿಗಳಿಗೆ ಆಶ್ರಮದಿಂದ ಸಹಾಯಧನದ ಚೆಕ್ ಹಾಗೂ ನರಸಿಂಹಪ್ಪ ಎನ್ನುವವರಿಗೆ ಮನೆ ಕಟ್ಟಲು ಹಣಕಾಸಿನ ನೆರವು, ಮತ್ತು ರೈತ ಮಹಿಳೆಯರಿಗೆ ಮೇವು ವಿತರಿಸಲಾಯಿತು.
ಇನ್ಫೋಸಿಸ್ ಸಂಸ್ಥೆಯ ರಶ್ಮಿದೇಸಾಯಿ, ಎಸ್.ಎಸ್.ಕೆ. ಸಂಘದ ಅಧ್ಯಕ್ಷ ಜಿ.ಎಸ್. ಧರ್ಮಪಾಲ್, ಪುರಸಭಾ ಸದಸ್ಯರಾದ ಸುದೇಶ್ ಬಾಬು, ಆರೋಗ್ಯ ಕೇಂದ್ರದ ಆಡಳಾತಾಧಿಕಾರಿ ಕೆ. ಶೋಭಾ,ಯೋಜನಾಧಿಕಾರಿ ಕೆ. ಜಯಶ್ರಿ, ಡಿ. ಅಭಿಷೇಕ್, ಡಾ. ಶಿವಕುಮಾರ್ ಮತ್ತಿತರರು ಹಾಜರಿದ್ದರು.
ವಕೀಲ ಯಜ್ಞನಾರಾಯಣ ದಂಪತಿಗಳು ವಿಶ್ವೇಶ್ವತೀರ್ಥಸ್ವಾಮಿಗಳ ಪಾದಪೂಜೆಯನ್ನು ನೆರವೇರಿಸಿದರು. ನಂತರ ಆಶ್ರಮದ ಭಕ್ತಾದಿಗಳು ಲಕ್ಷ ಹೂವುಗಳಿಂದ ವಿಶ್ವೇಶ್ವತೀರ್ಥಸ್ವಾಮಿಗಳಿಗೆ ಪುಷ್ಪಾರ್ಚನೆಯನ್ನು ನೆರವೇರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








