ಚಿತ್ರದುರ್ಗ
ಕೋವಿಡ್-19 ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ತಂಬಾಕು ಉತ್ಪನ್ನ ಮಾರಾಟಕ್ಕೆ ನಿಷೇಧ ಜಾರಿಗೊಳಿಸಿದ್ದು, ಈ ಆದೇಶ ಉಲ್ಲಂಘನೆಗೆ ಸಂಬಂಧಿಸಿದಂತೆ ಚಿತ್ರದುರ್ಗ ನಗರದಲ್ಲಿ ವಿವಿಧ ಅಂಗಡಿಗಳ ಮೇಲೆ ಅಧಿಕಾರಿಗಳ ತಂಡವು ಸೋಮವಾರ ದಾಳಿ ನಡೆಸಿ, 53 ಪ್ರಕರಣಗಳ ದಾಖಲಿಸಿ ದಂಡ ವಿಧಿಸಿದೆ.
ಕೋವಿಡ್ ಸೋಂಕು ಹರಡದಂತೆ ಎಚ್ಚರ ವಹಿಸಲು ಈಗಾಗಲೆ ಜಿಲ್ಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಷೇಧಿಸಿದ್ದು, ಉಲ್ಲಂಘಿಸುವವರ ವಿರುದ್ಧ ಗರಿಷ್ಠ 1 ಸಾವಿರ ರೂ. ದಂಡ ವಿಧಿಸಲು ಆದೇಶಿಸಲಾಗಿದೆ. ಅಲ್ಲದೆ ಜಿಲ್ಲೆಯಾದ್ಯಂತ ತಂಬಾಕು ಹಾಗೂ ಪಾನ್‍ಮಸಾಲ, ಜರ್ದಾ, ಖೈನಿ ಉತ್ಪನ್ನಗಳ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಆದೇಶ ಜಾರಿ ಪರಿಶೀಲನೆ ಸಂಬಂಧ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾಯ್ದೆ ಅನುಷ್ಠಾನ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ತಂಡ ಚಿತ್ರದುರ್ಗ ನಗರದ ವಿವಿಧ ಅಂಗಡಿಗಳ ಮೇಲೆ ಸೋಮವಾರ ದಾಳಿ ನಡೆಸಿದ್ದು, ಆದೇಶ ಉಲ್ಲಂಘಿಸಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಹೀಗಾಗಿ ಆದೇಶ ಉಲ್ಲಂಘಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 53 ಪ್ರಕರಣ ದಾಖಲಿಸಿ, ಒಟ್ಟು 8300 ರೂ. ದಂಡ ವಿಧಿಸಲಾಗಿದೆ.
ದಾಳಿಯಲ್ಲಿ ಜಿಲ್ಲಾ ಮಟ್ಟದ ತನಿಖಾ ತಂಡದ ಅಧಿಕಾರಿಗಳಾದ ಬಿ.ಎಂ. ಪ್ರಭುದೇವ್, ಕರಕಪ್ಪ, ಕೆ. ಲಕ್ಷ್ಮೀಶ, ಷಣ್ಮುಖ, ಟಿ.ಜಿ. ರಂಗಾರೆಡ್ಡಿ ಮುಂತಾದವರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
