ಕಂಟೈನ್ಮೆಂಟ್ ವಲಯಗಳಲ್ಲಿ ಮಾಸಾಂತ್ಯದವರೆಗೆ ಲಾಕ್ ಡೌನ್ : ವಿಜಯ ಭಾಸ್ಕರ್

ಬೆಂಗಳೂರು

    ಕೋವಿಡ್-19 ಸೋಂಕು ನಿಯಂತ್ರಣ ಉದ್ದೇಶದಿಂದ ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿ ಅನ್ವಯ , ರಾಜ್ಯದ ಕಂಟೈನ್ಮೆಂಟ್ ವಲಯಗಳನ್ನು ಹೊರತುಪಡಿಸಿದ ಪ್ರದೇಶಗಳಲ್ಲಿ ಹೆಚ್ಚಿನ ಚಟುವಟಿಕೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.ಈ ಕುರಿತು ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರದ ಅಧ್ಯಕ್ಷರೂ ಆದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಆದೇಶ ಹೊರಡಿಸಿದ್ದು, ಕಂಟೈನ್ಮೆಂಟ್ ವಲಯಗಳಲ್ಲಿ ಲಾಕ್ ಡೌನ್ ಅವಧಿಯನ್ನು ಮಾಸಾಂತ್ಯದವರೆಗೆ ವಿಸ್ತರಿಸಲಾಗಿದೆ.

    ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಶಾಲೆಗಳು ಮತ್ತು ತರಬೇತಿ ಸಂಸ್ಥೆಗಳ ಪುನಾರಂಭಕ್ಕೆ ಸಂಬಂಧಿಸಿದಂತೆ , ಅಕ್ಟೋಬರ್ 15ರ ನಂತರ ಹಂತಹಂತವಾಗಿ ತೀರ್ಮಾನ ತೆಗೆದುಕೊಳ್ಳಬಹುದಾಗಿದೆ. ಸಂಬಂಧಪಟ್ಟ ಶಾಲೆ, ಆಡಳಿತ ಮಂಡಳಿಯೊಂದಿಗೆ ಸಮಾಲೋಚಿಸಿ, ಷರತ್ತುಗಳಿಗೆ ಒಳಪಟ್ಟು ಅನುಮತಿ ನೀಡಬಹುದು ಎಂದು ಹೇಳಿದೆ.

    ಆನ್ ಲೈನ್, ದೂರಶಿಕ್ಷಣ ಕಲಿಕೆಗೆ ಪ್ರೋತ್ಸಾಹ ಮುಂದುವರೆಸಬೇಕು. ವಿದ್ಯಾರ್ಥಿಗಳು ಖುದ್ದಾಗಿ ಶಾಲೆಗೆ ಹಾಜರಾಗುವ ಬದಲು, ಆನ್ ಲೈನ್ ತರಗತಿಗಳಲ್ಲಿ ಪಾಲ್ಗೊಳ್ಳಲು ಬಯಸಿದರೆ, ಅದಕ್ಕೆ ಅನುಮತಿ ನೀಡಬೇಕು. ಶಾಲೆಗಳಿಗೆ ಹಾಜರಾತಿಯನ್ನು ಕಡ್ಡಾಯಗೊಳಿಸಬಾರದು. ಅದಕ್ಕೆ ಪೋಷಕರ ಅನುಮತಿ ಕಡ್ಡಾಯವಾಗಿದೆ ಎಂದು ತಿಳಿಸಿದೆ.

    ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡುವ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಕುರಿತಂತೆಯೂ ಸಂಬಂಧಪಟ್ಟ ಇಲಾಖೆ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು. ಅಕ್ಟೋಬರ್ 15ರ ನಂತರ ಪ್ರಾಯೋಗಾಲಯ ಮತ್ತು ಪ್ರಾಯೋಗಿಕ ಚಟುವಟಿಕೆ, ಸಂಶೋಧನಾ ವಿದ್ಯಾರ್ಥಿಗಳ ಹಾಜರಾತಿ ಕುರಿತಂತೆಯೂ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದೆ.

   ಕ್ರೀಡಾತರಬೇತಿಗಾಗಿ ಈಜು ಕೊಳಗಳನ್ನು ಇದೇ 15ರ ನಂತರ ತೆರೆಯಲು ಅವಕಾಶ ಕಲ್ಪಿಸಿದ್ದು, ಇದಕ್ಕಾಗಿ ಯುವಜನ ಮತ್ತು ಕ್ರೀಡಾ ಇಲಾಖೆ ಮಾದರಿ ಕಾರ್ಯ ನಿರ್ವಹಣಾ ಪ್ರಕ್ರಿಯೆ ಕುರಿತು ಪ್ರತ್ಯೇಕ ಮಾರ್ಗಸೂಚಿ ಹೊರಡಿಸಬೇಕು ಎಂದು ತಿಳಿಸಿದೆ.ಕಂಟೈನ್ಮೆಂಟ್ ವಲಯ ಹೊರತುಪಡಿಸಿ, ಉಳಿದೆಡೆ ಸಿನಿಮಾ ಮಂದಿರಗಳು, ರಂಗಮಂದಿರಗಳು, ಮಲ್ಟಿ ಫ್ಲೆಕ್ಸ್ ಗಳನ್ನು ಸಹ ಶೇಕಡ 50ರ ಸಾಮರ್ಥ್ಯದೊಂದಿಗೆ ತೆರೆಯಲು ಅನುಮತಿ ನೀಡಲಾಗಿದೆ.

  ಮನೋರಂಜನ ಉದ್ಯಾನವನಗಳು, ವ್ಯಾಪಾರ ಮೇಳ, ನೂರು ಜನರ ಮಿತಿಗೆ ಒಳಪಟ್ಟು, ಸಾಮಾಜಿಕ , ಶೈಕ್ಷಣಿಕ, ಕ್ರೀಡೆ , ಮನೋರಂಜನೆ, ಧಾರ್ಮಿಕ ಮತ್ತು ರಾಜಕೀಯ ಕಾರ್ಯಕ್ರಗಳಿಗೆ ಸ್ಥಳೀಯ ಆಡಳಿತಗಳು ನಿರ್ಬಂಧಕ್ಕೆ ಒಳಪಟ್ಟು ಅನುಮತಿ ನೀಡಬಹುದಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap