ಚಳ್ಳಕೆರೆ
ನಗರದ ನಾಗರೀಕರ ಅನುಕೂಲಕ್ಕಾಗಿ ಶಾಸಕ ಟಿ.ರಘುಮೂರ್ತಿ ರಾಜ್ಯ ಸರ್ಕಾರದಿಂದ ಸುಮಾರು 6.50 ಕೋಟಿವೆಚ್ಚದಲ್ಲಿ ನಗರದ ಹೃದಯ ಭಾಗದಲ್ಲಿ ನೂತನವಾಗಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣವನ್ನು ನಿರ್ಮಿಸಿ ಕಳೆದ ಡಿಸೆಂಬರ್ 27ರಂದು ಅಂದಿನ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಈ ನಿಲ್ದಾಣವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿದ್ದರು.
ಆದರೆ, ಈ ನೂತನ ಬಸ್ ನಿಲ್ದಾಣದಲ್ಲಿ ನಿಯಮದಂತೆ ಬಸ್ಗಳಿಗಾಗಿ ಕಾಯುವ ಮಹಿಳೆಯರಿಗಾಗಿ ವಿಶ್ರಾಂತಿ ಕೋಣೆಯೊಂದನ್ನು ನಿರ್ಮಿಸಿದ್ದು ಕಳೆದ 10 ತಿಂಗಳಿನಿಂದ ಈ ಕೋಣೆಯ ಬೀಗ ಮಾತ್ರ ಇನ್ನೂ ತೆಗೆದಿಲ್ಲ. ಈ ಬಗ್ಗೆ ಯಾವುದೇ ರೀತಿಯ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳು ನೀಡುತ್ತಿಲ್ಲ. ನಗರ ಮತ್ತು ಗ್ರಾಮಾಂತರ ಪ್ರದೇಶದಿಂದ ಬರುವ ಅನೇಕ ಮಹಿಳೆಯರು ತಮ್ಮ ಮಕ್ಕಳು, ಲಗೇಜಿನೊಂದಿಗೆ ನಿಲ್ದಾಣಕ್ಕೆ ಆಗಮಿಸಿದಾಗ ಮಹಿಳೆಯರ ವಿಶ್ರಾಂತಿ ಕೊಠಡಿಯ ಮುಂದೆ ನಿಂತು ನೋಡುವುದು ಸಾಮಾನ್ಯವಾಗಿದೆ. ಆದರೆ, ಬೀಗವನ್ನು ತೆಗೆಯಲು ಯಾವ ಅಧಿಕಾರಿಯೂ ಮುಂದೆ ಬರುತ್ತಿಲ್ಲ. ಮಹಿಳೆಯರಿಗಾಗಿ ನಿರ್ಮಿಸಿದ ವಿಶ್ರಾಂತಿ ಕೊಠಡಿಯನ್ನು ಸದುಪಯೋಗ ಪಡಿಸಿಕೊಳ್ಳಲು ಮಹಿಳಾ ಸಮುದಾಯಕ್ಕೆ ಸಾಧ್ಯವಾಗಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತುರ್ತು ಗಮನಹರಿಸುವಂತೆ ಬಿಜೆಪಿ ನಗರ ಯುವ ಘಟಕದ ಕಾರ್ಯದರ್ಶಿ ಆರ್.ನಾಗೇಶ್ನಾಯಕ, ಮುಖಂಡ ಈಶ್ವರನಾಯಕ ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








