ದಾವಣಗೆರೆ 
ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ 24 ಗಂಟೆಯಲ್ಲಿಯೇ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂದು ಮಾಜಿ ಸಚಿವ, ಹಾಲಿ ಶಾಸಕ ಮುರುಗೇಶ್ ನಿರಾಣಿ ಭವಿಷ್ಯ ನುಡಿದಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ 24 ಗಂಟೆಯೊಳಗೆ ಸಮ್ಮಿಶ್ರ ಸರ್ಕಾರ ಪತನವಾಗಿ, ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ ಬಿಜೆಪಿ 22 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಹಾಗೆಯೇ ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ರಚನೆಯಾಗಲಿದೆ. ಬಳಿಕ ಕಾಂಗ್ರೆಸ್ ಜೆಡಿಎಸ್ಗೆ ನೀಡಿರುವ ಬೆಂಬಲ ವಾಪಾಸ್ ಪಡೆಯಲಿದೆ. ಆಗ ಆಪರೇಷನ್ ಕಮಲ ನಡೆಯದೇ ಮೈತ್ರಿ ಪಕ್ಷದ ಶಾಸಕರು ಬಿಜೆಪಿ ಕಡೆಗೆ ಮುಖ ಮಾಡಲಿದ್ದಾರೆಂದು ಹೇಳಿದರು.
ಸೂರ್ಯ-ಚಂದ್ರ ಪ್ರತಿನಿತ್ಯ ಹುಟ್ಟುವುದು ಎಷ್ಟು ಸತ್ಯವೋ, ಹಾಗೆಯೇ ದಾವಣಗೆರೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಅವರು ಸಹ ಸತತ ನಾಲ್ಕನೇಯ ಬಾರಿಯೂ ಹ್ಯಾಟ್ರಿಕ್ ಗೆಲುವು ಸಾಧಿಸುವುದು ಅಷ್ಟೇ ಸತ್ಯ ಎಂದರು.
ಬೇರೆ ಸಮುದಾಯದ ಸಂಸದರಿಗೆ ಅವಕಾಶ ಮಾಡಿಕೊಡಬೇಕೆಂಬ ಕಾರಣಕ್ಕೆ ಕೇಂದ್ರ ಸಚಿವ ಸ್ಥಾನವನ್ನು ಸಿದ್ದೇಶ್ವರ್ ಬಿಟ್ಟುಕೊಟ್ಟಿದ್ದಾರೆ. ಆದರೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಅಸಮರ್ಥತೆಯ ಕಾರಣಕ್ಕೆ ಸಿದ್ದೇಶ್ವರ್ ಅವರನ್ನು ಮಂತ್ರಿ ಮಂಡಲದಿಂದ ಕೈಬಿಡಲಾಯಿತು ಎಂಬುದಾಗಿ ಹೇಳಿರುವುದು ಶುದ್ಧ ಸುಳ್ಳಾಗಿದ್ದು, ದಿನೇಶ್ ಗುಂಡುರಾವ್ ಆಹಾರ ನಾಗರೀಕರ ಸರಬರಾಜು ಸೇವೆಗಳ ಸಚಿವರಾಗಿದ್ದ ಸಂದರ್ಭದಲ್ಲಿ ನಕಲಿ ಪಡಿತರ ಚೀಟಿ ವಿತರಣೆ ತಡೆಯಲಾಗದೇ, ಅಸಮರ್ಥರಾದ ಕಾರಣ ಸಿದ್ದರಾಮಯ್ಯ ಇವರನ್ನು ಸಚಿವ ಸಂಪುಟದಿಂದ ಕೈಬಿಟಿದ್ದರು. ಸ್ವತಃ ಅವರೇ ಅಸಮರ್ಥರಾಗಿ ಅಧಿಕಾರ ಕಳೆದುಕೊಂಡು, ಇನ್ನೊಬರ ಕಡೆಗೆ ಬೊಟ್ಟು ಮಾಡುವುದು ಅವರ ಸ್ಥಾನಕ್ಕೆ ಶೋಭೆ ತರುವಂತದಲ್ಲ ಎಂದು ಹೇಳಿದರು.
ಕ್ಷೇತ್ರದಲ್ಲಿ ಬಿಜೆಪಿ ಸಂಸದರು ಒಳ್ಳೆಯ ಕೆಲಸ ಮಾಡಿರುವ ಕಾರಣಕ್ಕೆ ಜಿ.ಮಲ್ಲಿಕಾರ್ಜುನಪ್ಪನವರು ಎರಡು ಬಾರಿ ಹಾಗೂ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಮೂರು ಬಾರಿ ಗೆಲುವು ಸಾಧಿಸಲು ಸಾಧ್ಯವಾಗಿದೆ ಎಂದ ಅವರು, ಸಿದ್ದೇಶ್ವರ್ ಅವರು ಜಿಲ್ಲೆಯ ಹರಿಹರಕ್ಕೆ 2ಜಿ ಎಥೆನಾಲ್ ಘಟಕ ಮಂಜೂರು ಮಾಡಿಸಿದ್ದಾರೆ. ಮೊದಲ ಹಂತದಲ್ಲಿ ದಾವಣಗೆರೆಯನ್ನು ಸ್ಮಾರ್ಟ್ ಸಿಟಿಗೆ ಸೇರಿಸಿದ್ದಾರೆ.
ಪೈಪ್ಲೈನ್ ಮೂಲಕ ಗ್ಯಾಸ್ ಪೂರೈಕೆಗೆ ದಾವಣಗೆರೆಯು ಆಯ್ಕೆಯಾಗಿದೆ. ಪಾಸ್ಪೋರ್ಟ್ ಸೇವಾ ಕೇಂದ್ರ ಆರಂಭಿಸುವ ಮೂಲಕ ಪಾಸ್ಪೋರ್ಟ್ಗಾಗಿ ಬೇರೆ, ಬೇರೆ ಊರುಗಳಿಗೆ ಅಲೆದಾಡುವುದನ್ನು ತಪ್ಪಿಸಿದ್ದಾರೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಮಂಜೂರು ಮಾಡಿಸಿರುವುದು ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆಂದು ಮಾಹಿತಿ ನೀಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ದಿನೇಶ್ ಗುಂಡೂರಾವ್ ಬಿಜೆಪಿ ಹಿಂದುಳಿದ ವರ್ಗಗಳಿಗೆ ಟಿಕೇಟ್ ನೀಡದೇ ಕಡೆಗಣಿಸಿದೆ ಎಂಬುದಾಗಿ ಆರೋಪಿಸಿದ್ದಾರೆ. ಇದೇ ದಾವಣಗೆರೆ ಕ್ಷೇತ್ರದಿಂದ ಹೆಚ್.ಎಂ.ರೇವಣ್ಣ ಕಾಂಗ್ರೆಸ್ ಟಿಕೆಟ್ ಕೇಳಿದ್ದರು. ಹಿಂದುಳಿದ ವರ್ಗದ ಮೇಲೆ ಕಾಳಜಿ ಇರುವವರು ಇವರಿಗೇಕೆ ಟಿಕೆಟ್ ನೀಡಲಿಲ್ಲ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಹೆಚ್.ಬಿ.ಮಂಜಪ್ಪನವರನ್ನು ಹರಕೆಯ ಕುರಿ ಮಾಡಲು ಹೊರಟಿದ್ದು, ಈ ಚುನಾವಣೆಯಲ್ಲಿ ಯಾರನ್ನೂ ಸಹ ಹಗುರವಾಗಿ ಪರಿಗಣಿಸಲ್ಲ. ಈ ಹಿಂದಿನ ಚುನಾವಣೆಯಂತೆಯೇ ಗಂಭೀರವಾಗಿ ಎದುರಿಸುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಮೋಹನ್ ಲಿಂಬಿಕಾಯಿ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಎನ್.ರಾಜಶೇಖರ್, ಜಿಲ್ಲಾ ವಕ್ತಾರ ಕೊಂಡಜ್ಜಿ ಜಯಪ್ರಕಾಶ್, ಮುಖಂಡರಾದ ಮೋಹನ್ ಜಾಧವ್, ಅರ್ಜುನ್, ಧನುಷ್ರೆಡ್ಡಿ, ಪ್ರವೀಣ್ ಜಾಧವ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








