ಫೆ. 8ರಂದು ರಾಷ್ಟ್ರೀಯ ಲೋಕ್ ಅದಾಲತ್

ತುಮಕೂರು

   2020ರ ಫೆಬ್ರವರಿ 8ರಂದು ಶನಿವಾರ ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಹಂಚಾಟೆ ಸಂಜೀವಕುಮಾರ್ ತಿಳಿಸಿದರು.

   ತುಮಕೂರು ನ್ಯಾಯಾಲಯದ ಪ್ರಾಗಂಣದಲ್ಲಿ ಕರೆಯಲಾಗಿದ್ದ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ಸೇವಾ ಪ್ರಾಧಿಕಾರದಿಂದ “ಸರ್ವರಿಗೂ ನ್ಯಾಯ” ಎಂಬ ಧ್ಯೇಯದೊಂದಿಗೆ ಜಿಲ್ಲೆಯ ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

    ಕಳೆದ ಲೋಕ ಅದಾಲತ್‍ನಲ್ಲಿ ಜಿಲ್ಲೆಯಲ್ಲಿ ಬಾಕಿಯಿರುವ ಪ್ರಕರಣಗಳ ಪೈಕಿ 3926 ಹಾಗೂ ನ್ಯಾಯಾಲಯಕ್ಕೆ ದಾಖಲಾಗದೇ ಇರುವಂತಹ 460 ಪೂರ್ವ ವ್ಯಾಜ್ಯ ಪ್ರಕರಣಗಳನ್ನು ಎರಡು ಪಕ್ಷಗಾರರ ಸಮಕ್ಷಮದಲ್ಲಿ ಪರಸ್ಪರ ಒಪ್ಪಂದದ ಮೇರೆಗೆ ಇತ್ಯರ್ಥಪಡಿಸಲಾಗಿದೆ ಎಂದು ಅವರು ಹೇಳಿದರು.

    ಇತ್ಯರ್ಥವಾದ ಪ್ರಕರಣಗಳ ವಿವರ: ಕ್ರಿಮಿನಲ್-691, ಭೂ-ಸ್ವಾಧೀನ-703, ಮೋಟಾರು ವಾಹನ ಅಪಘಾತ-219, ವೈವಾಹಿಕ ಪ್ರಕರಣ-38, ನೆಗೋಷಿಯಬಲ್ ಉಪಕರಣಗಳು ಕಾಯ್ದೆ-297, ಸಿವಿಲ್ ಪ್ರಕರಣಗಳು-654 ಮತ್ತು ಇತರೆ ಪ್ರಕರಣಗಳು 1784 ಸೇರಿ ಒಟ್ಟು 3926 ಪ್ರಕರಣಗಳ ಜೊತೆಗೆ 460 ಪೂರ್ವ ವ್ಯಾಜ್ಯ ಪ್ರಕರಣಗಳು ಸೇರಿದಂತೆ ಒಟ್ಟು 4386 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಅದಕ್ಕೂ ಮುನ್ನ 2019ರ ಜುಲೈನಲ್ಲಿ ಜರುಗಿದ ಲೋಕ್ ಅದಾಲತ್‍ನಲ್ಲಿ 1246 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದರು.

     ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಿಗಾದರೂ ಅನ್ಯಾಯವಾಗಿದ್ದಲ್ಲಿ, ತನ್ನ ಆರ್ಥಿಕ ಅಥವಾ ಇತರೆ ದೌರ್ಬಲ್ಯಗಳ ಕಾರಣದಿಂದಾಗಿ ನ್ಯಾಯ ಪಡೆಯುವಲ್ಲಿ ವಂಚಿತರಾಗಬಾರದೆಂದು ಕಾನೂನು ಸೇವೆಗಳ ಪ್ರಾಧಿಕಾರದ ಉದ್ದೇಶವಾಗಿದೆ. ಅದಕ್ಕಾಗಿ ಪ್ರತಿ ವರ್ಷ ರಾಷ್ಟ್ರ, ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟಗಳಲ್ಲಿ ಪ್ರತಿ ವರ್ಷದಲ್ಲಿ 5 ರಾಷ್ಟ್ರೀಯ ಲೋಕ್ ಅದಾಲತ್‍ಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಪ್ರತಿ ವರ್ಷದಲ್ಲಿ ಫೆಬ್ರವರಿ, ಏಪ್ರಿಲ್, ಜುಲೈ, ಸೆಪ್ಟೆಂಬರ್ ಮತ್ತು ಡಿಸೆಂಬರ್‍ನಲ್ಲಿ ಅದಾಲತ್ ನಡೆಸಲಾಗುವುದು. 2020 ವರ್ಷದ ಮೊದಲನೇಯ ಲೋಕ್ ಅದಾಲತ್ ಫೆಬ್ರವರಿ 8ರಂದು ಶನಿವಾರ ತುಮಕೂರಿನಲ್ಲಿ ನಡೆಯಲಿದೆ.

     ಜಿಲ್ಲೆಯ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ದಾಖಲಿಸಿರುವ ಕಕ್ಷಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಈ ಲೋಕ್ ಅದಾಲತ್‍ನಲ್ಲಿ ಭಾಗವಹಿಸಿ, ತಮ್ಮ ಪ್ರಕರಣಗಳನ್ನು ರಾಜಿ ಸಂಧಾನ ಮತ್ತು ಪರಸ್ಪರ ಒಪ್ಪಂದ ಮೇರೆಗೆ ಇತ್ಯರ್ಥಪಡಿಸಿಕೊಳ್ಳಲು ಮುಂದೆ ಬರಬೇಕೆಂದು ಶ್ರೀ ಹಂಚಾಟೆ ಸಂಜೀವಕುಮಾರ್ ಅವರು ಕರೆ ನೀಡಿದರು. ಇದಕ್ಕೆ ವಕೀಲರು, ಕಕ್ಷಿದಾರರು ಸಹಕಾರ ನೀಡುವ ಮೂಲಕ ಈ ಲೋಕ್ ಅದಾಲತ್‍ನ್ನು ಯಶಸ್ವಿಗೊಳಿಸಬೇಕಾಗಿ ಅವರು ಮನವಿ ಮಾಡಿದರು.

     ನ್ಯಾಯಾಲಯಗಳಲ್ಲಿ ದಾಖಲಾಗಿರುವ ಅಪಘಾತ ಪ್ರಕರಣ, ಕೈಗಾರಿಕೆಗಳ ಕಾರ್ಮಿಕರು ಮತ್ತು ಮಾಲೀಕರ ನಡುವೆ ಇರುವ ವ್ಯಾಜ್ಯ, ವೈವಾಹಿಕ ಕುಟುಂಬ ಪ್ರಕರಣ, ಭೂ ಸ್ವಾಧೀನ ಪರಿಹಾರಕ್ಕೆ ಸಂಬಂಧಿಸಿದ ಪ್ರಕರಣ, ಸರ್ಕಾರಿ/ಖಾಸಗಿ ನೌಕರರ ವೇತನ, ಭತ್ಯೆ ಪ್ರಕರಣ, ಕಂದಾಯ ಸಿವಿಲ್ ಪ್ರಕರಣಗಳು, ಚೆಕ್ ಅಮಾನ್ಯ, ಬ್ಯಾಂಕ್‍ಗಳ ಸಾಲವ್ಯಾಜ್ಯ, ಆಸ್ತಿ ವಿಭಜನೆ ಪ್ರಕರಣಗಳನ್ನು ಪರಸ್ಪರ ಮಾತುಕತೆಯ ಮೂಲಕ ನ್ಯಾಯಾಧೀಶರ ಸಮಕ್ಷಮದಲ್ಲಿ ಉಭಯ ಪಕ್ಷಗಳು ಸಮಲೋಚನೆ ನಡೆಸುವ ಮೂಲಕ ರಾಜಿ ಸಂಧಾನ ಮತ್ತು ಒಪ್ಪಂದದ ಮೂಲ ಪ್ರಕರಣಗಳನ್ನು ಇತ್ಯರ್ಥಪಡಿಸಿ ತೀರ್ಪು ನೀಡಲಾಗುತ್ತದೆ.

    ಈ ಪ್ರಕರಣಗಳ ತೀರ್ಪಿಗೆ ಮೇಲ್ಮನವಿಗೆ ಅವಕಾಶವಿರುವುದಿಲ್ಲ. ಇಂತಹ ಪ್ರಕರಣಗಳನ್ನು ಬಗೆಹರಿಸಿಕೊಳ್ಳಬೇಕೆಂದು ಬಯಸುವ ಕಕ್ಷಿದಾರರು ನ್ಯಾಯಾಲಯಗಳಲ್ಲಿ ಪ್ರತಿದಿನ ಪೂರ್ವ ಸಮಲೋಚನೆ ಸಭೆಗೆ ಭಾಗವಹಿಸಿ ಸಹಮತವನ್ನು ವ್ಯಕ್ತಪಡಿಸಿ, ಲೋಕ್ ಅದಾಲತ್‍ನಲ್ಲಿ ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ ಎಂದು ನ್ಯಾಯಾಧೀಶರು ತಿಳಿಸಿದರು.

    ನಮ್ಮ ಸಮಾಜದಲ್ಲಿ ನ್ಯಾಯಾಲಯಗಳು ಇಲ್ಲದೆ ಹೋಗಿದ್ದರೆ ಅನ್ಯಾಯ ಮತ್ತು ಹಿಂಸೆ ಹೆಚ್ಚಾಗುತ್ತಿದ್ದವು. ಉದಾಹರಣೆಗೆ ಕೌಟುಂಬಿಕ ಹಿಂಸೆಯನ್ನೇ ಒಂದು ಉದಾಹರಣೆಯನ್ನಾಗಿ ತೆಗೆದುಕೊಳ್ಳಿ ಎಂದು ಸಾಂದರ್ಭಿಕವಾಗಿ ಉಲ್ಲೇಖಿಸಿದರು.
ಸಮಾಜದ ಸ್ವಾಸ್ಥ್ಯ ಕಾಪಾಡುವುದು ಮತ್ತು ಎಲ್ಲಾರಿಗೂ ತ್ವರಿತ ನ್ಯಾಯದಾನ ಮಾಡುವುದರ ಜೊತೆಗೆ ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳವುದೇ ಕಾನೂನು ಸೇವಾ ಪ್ರಾಧಿಕಾರದ ಮುಖ್ಯ ಧ್ಯೇಯವಾಗಿದೆ ಎಂದು ಅವರು ತಿಳಿಸಿದರು.

     ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ರಾಘವೇಂದ್ರ ಶೆಟ್ಟಿಗಾರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಕೆ.ಅನಿಲ್‍ಕುಮಾರ್, ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಆರ್.ದೇವರಾಜ್ ಉಪಸ್ಥಿತರಿದ್ದರು.

ಸ್ಮಾರ್ಟ್‍ಸಿಟಿ: ದೂರು ನೀಡಿದರೆ ಕ್ರಮ

     ತುಮಕೂರು ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‍ಸಿಟಿ ಕಾಮಗಾರಿಗಳು ಅದ್ವಾನಗೊಂಡಿದ್ದು, ನಗರದಲ್ಲಿ ಏನು ನಡೆಯುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಈ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಇದರಿಂದಾಗಿ ಇಲ್ಲಿನ ಜನರು ಸಂಕಷ್ಟಕ್ಕೀಡಾಗಿದ್ದಾರೆ ಎಂಬ ಬಗ್ಗೆ ಗಮನ ಸೆಳೆದಾಗ ಇಂತಹ ದೂರುಗಳಿದ್ದಲ್ಲಿ ಪ್ರಾಧಿಕಾರಕ್ಕೆ ಸಲ್ಲಿಸಬಹುದು. ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಯಿಸಿ ಮಾಹಿತಿ ಪಡೆಯಲಾಗುವುದು ಎಂದು ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ