ಬೆಂಗಳೂರು
ಲೋಕಸಭೆಯ ಮುಖ್ಯ ಸಚೇತಕರಾಗಿ ರಾಜ್ಯದ ಸಂಸದರಾದ ಶೋಭಾ ಕರಂದ್ಲಾಜೆ ಅವರನ್ನು ನೇಮಕ ಮಾಡಲಾಗಿದೆ.ಆ ಮೂಲಕ ಶೋಭಾ ಕರಂದ್ಲಾಜೆ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಯಡಿಯೂರಪ್ಪ ಅವರ ಒತ್ತಡಕ್ಕೆ ಮಣಿಯದೆ ಇದ್ದರೂ,ಲೋಕಸಭೆಯ ಮುಖ್ಯ ಸಚೇತಕರನ್ನಾಗಿ ನೇಮಕ ಮಾಡುವ ಮೂಲಕ ಶೋಭಾ ಕರಂದ್ಲಾಜೆ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಸ್ಥಾನಮಾನ ಕಲ್ಪಿಸಲಾಗಿದೆ.
ಈ ಬಾರಿಯ ಕೇಂದ್ರ ಮಂತ್ರಿ ಮಂಡಲದಲ್ಲಿ ಒಕ್ಕಲಿಗರ ಕೋಟಾದಡಿ ಶೋಭಾ ಕರಂದ್ಲಾಜೆ ಅವರನ್ನು ಮಂತ್ರಿಯನ್ನಾಗಿ ತೆಗೆದುಕೊಳ್ಳಬೇಕು ಎಂದು ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರಮೋದಿ ಹಾಗೂ ಪಕ್ಷದ ಅಧ್ಯಕ್ಷರಾಗಿದ್ದ ಅಮಿತ್ ಷಾ ಅವರ ಮೇಲೆ ಒತ್ತಡ ಹೇರಿದ್ದರು.
ಉನ್ನತ ಮೂಲಗಳ ಪ್ರಕಾರ ರಾಜ್ಯದಿಂದ ಇಪ್ಪತ್ತೈದು ಮಂದಿ ಸಂಸದರು ಗೆದ್ದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರ ನಾಯಕತ್ವದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದ ನಾಯಕರೂ ಕೇಂದ್ರ ಮಂತ್ರಿ ಮಂಡಲದಲ್ಲಿ ಅವಕಾಶ ಮಾಡಿಕೊಡುವ ಬಗ್ಗೆ ಗಂಭೀರವಾಗಿ ಪರಿಶೀಲನೆ ನಡೆಸುವುದಾಗಿ ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಅಪಾರ ವಿಶ್ವಾಸದೊಂದಿಗೆ ನರೇಂದ್ರಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ದೆಹಲಿಗೆ ತೆರಳಿದ್ದ ಯಡಿಯೂರಪ್ಪ ಅಂಡ್ ಗ್ಯಾಂಗ್ ಶೋಭಾ ಕರಂದ್ಲಾಜೆ ಮಂತ್ರಿಯಾಗುತ್ತಾರೆ ಎಂಬ ನಿರೀಕ್ಷೆ ಇರಿಸಿಕೊಂಡಿತ್ತು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸತತ ಎರಡನೇ ಬಾರಿ ಆಯ್ಕೆಯಾಗಿರುವ ಶೋಭಾ ಕರಂದ್ಲಾಜೆಯವರಿಗೆ ಮಂತ್ರಿಗಿರಿ ನೀಡಿದರೆ ಏಕಕಾಲಕ್ಕೆ ಒಕ್ಕಲಿಗರ ಕೋಟಾದಡಿ,ಅದೇ ರೀತಿ ಮಹಿಳಾ ಕೋಟಾದಡಿ ಅವಕಾಶ ಕಲ್ಪಿಸಿದಂತಾಗುತ್ತದೆ ಎಂಬುದು ಯಡಿಯೂರಪ್ಪ ಅವರ ವಾದವಾಗಿತ್ತು.
ಆದರೆ ಕೇಂದ್ರಮಂತ್ರಿ ಮಂಡಲದಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ಅವಕಾಶ ನೀಡುವ ಬದಲು ಒಕ್ಕಲಿಗರ ಕೋಟಾದಡಿ ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರಿಗೇ ಅವಕಾಶ ಕಲ್ಪಿಸಿದ್ದರಿಂದ ಯಡಿಯೂರಪ್ಪ ಗ್ಯಾಂಗು ನಿರಾಶವಾಗಿತ್ತು.
ಇದನ್ನು ಗಂಭಿರವಾಗಿ ಪರಿಗಣಿಸಿದ ಬಿಜೆಪಿ ಹೈಕಮಾಂಡ್ ವರಿಷ್ಟರು ಇದೀಗ ಶೋಭಾ ಕರಂದ್ಲಾಜೆ ಅವರಿಗೆ ಲೋಕಸಭೆಯ ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಿದ್ದು ಆ ಮೂಲಕ ಯಡಿಯೂರಪ್ಪ ಅವರ ಗ್ಯಾಂಗಿನ ನಿರಾಶೆಗೆ ತಕ್ಕ ಮಟ್ಟಿಗಾದರೂ ಮದ್ದು ನೀಡಿದ್ದಾರೆ.