ಲೋಕಿಕೆರೆ ನಾಗರಾಜ್ ನ್ಯಾಯಾಲಯಕ್ಕೆ ಶರಣು

ದಾವಣಗೆರೆ:

     ತಮ್ಮನ್ನು ರಾಜಕೀಯವಾಗಿ ತುಳಿಯುವ ದುರುದ್ದೇಶದಿಂದ ತಮ್ಮ ವಿರುದ್ಧ, ಕಾಂಗ್ರೆಸ್ ಮುಖಂಡ ಡಾ.ವೈ.ರಾಮಪ್ಪ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ಕಾನೂನಿಗೆ ಗೌರವ ನೀಡಿ ತಾವು ನ್ಯಾಯಾಲಯಕ್ಕೆ ಶರಣಾಗುತ್ತಿದ್ದೇವೆ ಎಂದು ಬಿಜೆಪಿ ಯುವ ಮುಖಂಡ ಲೋಕಿಕೆರೆ ನಾಗರಾಜ ತಿಳಿಸಿದರು.

     ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಬಿಜೆಪಿ ಸಕ್ರಿಯ ಕಾರ್ಯಕರ್ತನಾಗಿದ್ದು, ತಮ್ಮ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಶರಣಾಗುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

     ಲೋಕಸಭೆ ಚುನಾವಣೆಯ ಮತದಾನದ ದಿನದಂದು ದಾವಣಗೆರೆ ತಾಲೂಕಿನ ನೇರ್ಲಿಗೆ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡ ಡಾ.ವೈ.ರಾಮಪ್ಪ ನಮ್ಮ ಸಮಾಜದವರನ್ನು ಅವಾಚ್ಯವಾಗಿ ನಿಂದಿಸಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹೀಗಾಗಿ ಈ ವೀಡಿಯೋ ಆಧರಿಸಿ ನಮ್ಮ ಸಮಾಜದ ಮುಖಂಡರೆಲ್ಲಾ ಸೇರಿ ಪ್ರತಿಭಟಿಸಿದ್ದೆವು. ಆ ನಂತರ ಹಿರಿಯರ ಸಲಹೆ ಮೇರೆಗೆ ಸುಮ್ಮನಾಗಿದ್ದೆವು. ಆದರೆ, ಈಚೆಗೆ ಪಾಲಿಕೆ ಚುನಾವಣೆ ವೇಳೆ ಪ್ರಚಾರಕ್ಕೆ ಹೋದ ನಮ್ಮನ್ನು ಕಂಡು, ವೈ.ರಾಮಪ್ಪ ತಮ್ಮನ್ನು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿದರು.

     ವೈ.ರಾಮಪ್ಪ ತಮ್ಮ ವಿರುದ್ಧ 2 ಬಾರಿ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ. ಸಮಾಜವೊಂದರ ಗಣ್ಯ ವ್ಯಕ್ತಿಯಾಗಿ, ಪ್ರಮುಖ ರಾಜಕಾರಣಿಯಾಗಿ ಹೀಗೆ ಕಾನೂನಿನ ದುರುಪಯೋಗ ಸರಿಯಲ್ಲ. ಡಾ.ವೈ.ರಾಮಪ್ಪ ಕಾಂಗ್ರೆಸ್ ಮುಖಂಡ ಅಂತಾ ಮಾತ್ರ ನನಗೆ ಗೊತ್ತು. ಅದನ್ನು ಬಿಟ್ಟರೆ ರಾಮಪ್ಪನವರಿಗೂ ನನಗೆ ಯಾವುದೇ ಸಂಬಂಧ ಹಾಗೂ ದ್ವೇಷ ಇಲ್ಲ ಎಂದು ಸ್ಪಷ್ಟಪಡಿಸಿದರು.ಎಲ್ಲಾ ಜಾತಿಯವರೊಂದಿಗೂ ತಾವು ಅನೋನ್ಯತೆಯಿಂದಿದ್ದು, ರಾಜಕೀಯ ದುರುದ್ದೇಶದಿಂದ ತಮ್ಮ ವಿರುದ್ಧ ಕೇಸ್ ದಾಖಲಿಸಿದ್ದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

     ಪಾಲಿಕೆ ಸದಸ್ಯ ಎಲ್.ಡಿ.ಗೋಣೆಪ್ಪ ಮಾತನಾಡಿ, ಲೋಕಿಕೆರೆ ನಾಗರಾಜ್ ಅವರನ್ನು ತಾವು ಸುಮಾರು ವರ್ಷಗಳಿಂದ ಬಲ್ಲೆ. ಯಾವುದೇ ಜಾತಿ, ಬೇಧವಿಲ್ಲದೆ ಎಲ್ಲರೊಂದಿಗೆ ಬೆರೆಯುವ ವ್ಯಕ್ತಿತ್ವ ಅವರದ್ದಾಗಿದೆ. ಇಂತಹವರ ವಿರುದ್ಧ ಕೆಲ ವ್ಯಕ್ತಿಗಳು ನಮ್ಮ ವರ್ಗದವರನ್ನು ಮುಂದಿಟ್ಟುಕೊಂಡು ಜಾತಿ ನಿಂದನೆ ಕೇಸ್ ದಾಖಲಿಸಿರುವುದು ಒಳ್ಳೆಯದಲ್ಲ. ವೈಯಕ್ತಿಕ ದ್ವೇಷದಿಂದ ಸಮಾಜದಲ್ಲಿ ಶಾಂತಿ ಕದಡುವ ಕೆಲಸವನ್ನು ಯಾರೂ ಸಹ ಮಾಡಕೂಡದು. ಇದು ಒಳ್ಳೆಯದೂ ಅಲ್ಲ. ಇದನ್ನು ಇಲ್ಲಿಗೆ ಕೈಬಿಟ್ಟರೆ ಒಳ್ಳೆಯದು ಎಂದರು.

     ಈ ಸಂದರ್ಭದಲ್ಲಿ ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್, ಬಿಜೆಪಿ ಮುಖಂಡರಾದ ಎಚ್.ಸಿ.ಜಯಮ್ಮ, ದಿಳ್ಯಪ್ಪ, ಎಚ್.ಕೆ.ಬಸವರಾಜ, ಶ್ರೀನಿವಾಸ, ದೇವೀರಮ್ಮ, ಮಂಜಾನಾಯ್ಕ, ಆವರಗೆರೆ ರುದ್ರೇಶ, ಶ್ರೀನಿವಾಸ, ಶ್ರೀನಿವಾಸಮೂರ್ತಿ, ಜೆಡಿಎಸ್ ಮುಖಂಡ ಎಚ್.ಎಂ.ರಾಜಶೇಖರಯ್ಯ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link