ಲೋಕಸಭಾ ಚುನಾವಣೆಗೆ ಪೂರ್ವ ಸಿದ್ಧತೆ

ದಾವಣಗೆರೆ :

      ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಲೋಕಸಭಾ ಚುನಾವಣೆಗೆ ಪೂರ್ವಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿಗಳಾದ ವೀರೇಂದ್ರ ಕುಂದಗೋಳ ಹಾಗೂ ಈ.ಬಾಲಕೃಷ್ಣ ತಿಳಿಸಿದರು.

       ಮಂಗಳವಾರ ಇಲ್ಲಿನ ಪಾಲಿಕೆ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಈ ಎರಡೂ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಸ ಮತದಾರರಿಗೆ ಯಾವುದೇ ತೊಂದರೆ ಆಗದಂತೆ, ತಮ್ಮ ತಮ್ಮ ಮತಗಟ್ಟೆಗಳಲ್ಲಿ ಮುಕ್ತವಾಗಿ ಮತ ಚಲಾಯಿಸಲು ಎನುವಾಗುವಂತೆ ಎಲ್ಲಾ ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ಹೇಳಿದರು.

         ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಈ.ಬಾಲಕೃಷ್ಣಪ್ಪ ಮಾತನಾಡಿ, ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 245 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇವುಗಳ ಪೈಕಿ ಪೈಕಿ 37 ಸೂಕ್ಷ್ಮ ಮತ್ತು 18 ದುರ್ಬಲ ಮತಗಟ್ಟೆಗನ್ನು ಗುರುತಿಸಲಾಗಿದೆ. ಈ ಮತಗಟ್ಟೆಗಳಲ್ಲಿ ಮತದಾನಕ್ಕೆ ಅನುವಾಗುವಂತೆ ಪಿಠೋಪಕರಣ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದ್ದು, 1,18,874 ಪುರುಷ 1,18,673 ಮಹಿಳಾ, 31 ತೃತೀಯ ಲಿಂಗಿ ಹಾಗೂ 47 ಸೇವಾ ಮತದಾರರು ಸೇರಿ ಒಟ್ಟು 2,37,578 ಮತದಾರರಿದ್ದಾರೆಂದು ವಿವರಿಸಿದರು.

        ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ವೀರೇಂದ್ರ ಕುಂದುಗೋಳ ಮಾತನಾಡಿ, ಈ ಕ್ಷೇತ್ರದಲ್ಲಿ 211 ಮತಗಟ್ಟೆ ಸ್ಥಾಪಿಸಲಾಗಿದ್ದು, ಪೈಕಿ 61 ಸೂಕ್ಷ್ಮ ಮತ್ತು 10 ದುರ್ಬಲ ಮತಗಟ್ಟೆಗಳೆಂದು ಗುರುತಿಸಲಾಗಿದೆ. 1,02,721 ಪುರುಷ, 1,01,366 ಮಹಿಳಾ, 35 ತೃತೀಯ ಲಿಂಗಿ ಹಾಗೂ 41 ಜನ ಸೇವಾ ಮತದಾರರು ಸೇರಿ ಒಟ್ಟು 2,04,122 ಮತದಾರರಿದ್ದಾರೆ ಎಂದು ಹೇಳಿದರು.

        ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಅನುಕೂಲಕ್ಕಾಗಿ ಮತದಾರರ ಸೇವಾ ಕೇಂದ್ರವನ್ನು ತೆರೆಯಲಾಗಿದ್ದು, ಸಂಬಂಧಿಸಿದ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಇರುವ ಕುರಿತಂತೆ ಮಾಹಿತಿ ಪಡೆಯಲು   9731979899 ಸಂಖ್ಯೆಗೆ ಎಸ್.ಎಂ.ಎಸ್ ಮಾಡುವ ಮೂಲಕ ಮಾಹಿತಿ ಪಡೆದುಕೊಳ್ಳಬಹುದು ಎಂದರು.

         ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 1242 ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 1660 ವಿಕಲಚೇತನ ಮತದಾರರಿದ್ದು, ಇವರು ಮತಗಟ್ಟೆಗಳಿಗೆ ಬರಲು ಅನುಕೂಲವಾಗುವಂತೆ ವ್ಹೀಲ್‍ಚೇರ್ ವ್ಯವಸ್ಥೆ ಮಾಡಲಾಗಿದೆ. ಹಾಗೂ ವಿಶೇಷ ಚೇತನ ಮತ್ತು ವೃದ್ಧ ಮತದಾರರನ್ನು ಮತಗಟ್ಟೆಗೆ ಕರೆತರಲು 18 ವರ್ಷ ವಯೋಮಾನದ ಒಳಗಿನ ಸ್ವಯಂ ಸೇವಕರನ್ನು ನೇಮಿಸಲಾಗುವುದು ಎಂದು ಹೇಳಿದರು.

         ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಚುನಾವಣಾ ಆಯೋಗ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದ್ದು ಈ ಬಾರಿ ನಾಗರೀಕರ ಕೈಯಲ್ಲಿ ಸಿ-ವಿಜಿಲ್ ಎಂಬ ಆ್ಯಪ್ ಪರಿಚಯಿಸಲಾಗಿದೆ. ಈ ಆ್ಯಪ್‍ನ್ನು ಆಂಡ್ರಾಯ್ಡ್ ಮೊಬೈಲ್‍ನಲ್ಲಿ ಗೂಗಲ್ ಪ್ಲೆಸ್ಟೋರ್‍ನಿಂದ ಡೌನ್‍ಲೋಡ್ ಮಾಡಿಕೊಂಡು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ಚುನಾವಣಾ ಅಕ್ರಮಗಳ ಬಗ್ಗೆ ನಡೆಯುವ ಘಟನೆಯ ಫೋಟೊ ಅಥವಾ ವಿಡಿಯೋ ತೆಗೆದು ಸಿವಿಜಿಲ್ ತಂತ್ರಾಂಶದ ಮೂಲಕ ವರದಿ ಮಾಡಬಹುದು. ವರದಿ ನೀಡುವವರ ಸ್ವಂತ ವಿವರ ನೀಡುವುದು ಕಡ್ಡಾಯವಲ್ಲ. ಹಾಗೂ ಹೀಗೆ ವರದಿ ನೀಡಿದವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು. ವರದಿ ದಾಖಲಾದ 100 ನಿಮಿಷಗಳಲ್ಲಿ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು ಎಂದು ಅವರು ವಿವರಿಸಿದರು.

ಚೆಕ್ ಪೋಸ್ಟ್:

         ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಸ್.ಎಸ್.ಟಿ ಮೂರು ತಂಡಗಳನ್ನು ರಚನೆ ಮಾಡಲಾಗಿದೆ. ಕ್ಷೇತ್ರದ ಭೂಮಿಕಾ ನಗರ, ಲೋಕಿಕೆರೆ ಕ್ರಾಸ್, ಡಿಸಿಎಂ ಟೌನ್‍ಶಿಪ್, ಕುಂದವಾಡ ಕೆರೆ, ಎನ್‍ಎಚ್.ರೋಡ್ ಶಾಬನೂರು ಕ್ರಾಸ್, ವಿದ್ಯಾನಗರ ಕೊನೆ ಬಸ್‍ನಿಲ್ದಾಣ ಬಳಿ ಸೇರಿ ಒಟ್ಟು ಆರು ಚೆಕ್ ಪೋಸ್ಟ್ ತೆರೆಯಲಾಗಿದೆ. ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಸ್.ಎಸ್.ಟಿ ಮೂರು ತಂಡಗಳನ್ನು ನಿಯೋಜಿಸಲಾಗಿದೆ. ಕ್ಷೇತ್ರದ ಬಾಡಾ ಕ್ರಾಸ್, ಹೊಸ ಚಿಕ್ಕನಹಳ್ಳಿ, ಬೇತೂರು ರಸ್ತೆ, ಮಾಗನಹಳ್ಳಿ ರೋಡ್, ಕೊಂಡಜ್ಜಿ ರಸ್ತೆ, ಬೂದಾಳ್ ರಸ್ತೆ ಹಾಗೂ ಸಾಯಿ ಇಂಟರ್ ನ್ಯಾಷನಲ್ ಹೋಟೆಲ್ ಹತ್ತಿರ ಬಳಿಯಲ್ಲಿ ಚೆಕ್ ಪೋಸ್ಟ್ ತೆರೆಯಲಾಗಿದೆ. ಈ ಚೆಕ್ ಪೋಸ್ಟ್‍ಗಳಲ್ಲಿ 24*7 ಮಾದರಿಯಲ್ಲಿ ಅಧಿಕಾರಿ/ಸಿಬ್ಬಂದಿಗಳು ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಚೆಕ್‍ಪೋಸ್ಟ್ ವ್ಯಾಪ್ತಿಯಲ್ಲಿ ಸಂಚರಿಸುವ ಸರ್ಕಾರಿ ವಾಹನಗಳನ್ನು ಸೇರಿದಂತೆ ಎಲ್ಲಾ ಸಾರ್ವಜನಿಕ/ಗಣ್ಯ/ಅತಿಗಣ್ಯ ವ್ಯಕ್ತಿಗಳ ಹಾಗೂ ಪತ್ರಿಕಾ ಮಾಧ್ಯಮದ ವಾಹನಗಳನ್ನು ಸಹ ತಪಾಸಣೆ ಮಾಡಲು ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನ ನೀಡಲಾದಂತೆ ಅಧಿಕಾರಿ/ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಿವರಿಸಿದರು.

        ದಾವಣಗೆರೆ ಉತ್ತರ ವಿಧಾನಸಭಾ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮಸ್ಟರಿಂಗ್ ಕಾರ್ಯವನ್ನು ಏ.22 ರಂದು ಮತ್ತು ಡಿ-ಮಸ್ಟರಿಂಗ್ ಕಾರ್ಯವನ್ನು ಏ.23 ರಂದು ತರಳಬಾಳು ವಿದ್ಯಾಸಂಸ್ಥೆ, ಅನುಭವ ಮಂಟಪದಲ್ಲಿ ನಡೆಯಲಿದೆ.

ನಾಲ್ಕು ಸಖೀ ಮತಗಟ್ಟೆ:

       ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ವಿನೋಬ ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಸಂತ ಪೌಲರ ಕಾನ್ವೆಂಟ್ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತಗಟ್ಟೆ ಸಂಖ್ಯೆ ವಿಜಯನಗರ ಬಡಾವಣೆಯ ಆಂಜನೇಯ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಮಿಲ್ಲತ್ ಹೈಯರ್ ಪ್ರೈಮಿರಿ ಸ್ಕೂಲ್ ಇಲ್ಲಿ ಈ ಎರಡು ಮತಗಟ್ಟೆಗಳಲ್ಲಿ ಸಖಿ ಮತಗಟ್ಟೆಗಳನ್ನು ನಿರ್ಮಿಸುವ ಬಗ್ಗೆ ಹಾಗೂ ಅವು ನೇರಳೆ ಬಣ್ಣದಿಂದ ಕೂಡಿರಲಿವೆ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link