ಚಳ್ಳಕೆರೆ
ಚಿತ್ರದುರ್ಗ ಲೋಕಸಭಾ ವ್ಯಾಪ್ತಿಯ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಏ.18ರಂದು ನಡೆಯುವ ಮತದಾನಕ್ಕೆ ಎಲ್ಲಾ ರೀತಿಯ ಪೂರಕ ವ್ಯವಸ್ಥೆಗಳನ್ನು ಮಾಡಿದ್ದು, ಚುನಾವಣೆಗೆ ನಿಗದಿಗೊಂಡ ಎಲ್ಲಾ ಅಧಿಕಾರಿ ವರ್ಗ ಆಗಮಿಸಿ ಸಲಕರಣೆಗಳೊಂದಿಗೆ ನಿಗದಿಗೊಳಿಸಿದ ಮತಗಟ್ಟೆ ಕೇಂದ್ರಗಳಲ್ಲಿದ್ದು, ಏ.18ರಂದು ಬೆಳಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಗಲಿದೆ ಎಂದು ಸಹಾಯಕ ಚುನಾವಣಾಧಿಕಾರಿ ಎಸ್.ರಾಜಶೇಖರ್ ತಿಳಿಸಿದರು.
ಅವರು, ಬುಧವಾರ ಪತ್ರಿಕೆಯೊಂದಿಗೆ ಮಾತನಾಡಿ, ಪ್ರಸ್ತುತ ಚಳ್ಳಕೆರೆ ವಿಧಾನಸಭಾ ವ್ಯಾಪ್ತಿಯಲ್ಲಿ 259 ಮತಗಟ್ಟೆಗಳಿದ್ದು, 2,11,388 ಮತದಾರರಿದ್ದಾರೆ. ಈ ಪೈಕಿ 105421 ಮಹಿಳಾ ಮತದಾರರು, 105962 ಪುರುಷ ಮತದಾರರು, ಇತರೆ 5 ಮತದಾರರು ಒಟ್ಟು 2,11,388 ಮತದಾರರಿದ್ದು, ತಮ್ಮ ಹಕ್ಕನ್ನು ಚಲಾಯಿಸಲಿದ್ಧಾರೆ.
ಮತದಾನಕ್ಕೆ ಸಂಬಂಧಪಟ್ಟಂತೆ ತಹಶೀಲ್ದಾರ್ ತುಷಾರ್ ಬಿ.ಹೊಸೂರ್ ಕ್ಷೇತ್ರದ 24 ಸೆಕ್ಟರ್ ಅಧಿಕಾರಿಗಳ ಸಹಯೋಗದಲ್ಲಿ ಪ್ರತಿಬೂತ್ಗೂ ಅವಶ್ಯವಿರುವ ಚುನಾವಣೆಯ ಎಲ್ಲಾ ವಸ್ತುಗಳನ್ನು ವಿತರಿಸಲಾಗಿದೆ. ಚುನಾವಣಾ ಕಾರ್ಯಕ್ಕಾಗಿ 50 ಕೆಎಸ್ಆರ್ಟಿಸಿ ಬಸ್ಗಳನ್ನು ಪಡೆಯಲಾಗಿದೆ. ಯಾವುದೇ ಹಂತದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಜಾಗೃತೆ ವಹಿಸಲು ಈಗಾಗಲೇ ಸೂಚನೆ ನೀಡಲಾಗಿದೆ.
ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ಮತದಾರರು ನಿರ್ಭಿತಿಯಿಂದ ಆಗಮಿಸಿ ಮತ ಚಲಾಯಿಸುವ ವಾತಾವರಣ ನಿರ್ಮಾಣವಾಗಿದೆ. ಕ್ಷೇತ್ರದ 259 ಮತಗಟ್ಟೆಗಳಿಗೆ ನಿಯೋಜನೆಗೊಂಡ ಎಲ್ಲಾ ಸಿಬ್ಬಂದಿಗೂ ಈಗಾಗಲೇ ಮತಗಟ್ಟೆ ವ್ಯಾಪ್ತಿಯಲ್ಲಿದ್ದು, ಮತದಾನಕ್ಕೆ ಯಾವುದೇ ರೀತಿಯ ಸಮಸ್ಯೆ ಎದುರಾಗದಂತೆ ಜಾಗೃತೆ ವಹಿಸಲಾಗಿದೆ ಎಂದರು.
ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸೂಕ್ಷ್ಮ ಮತಗಟ್ಟೆ ಕೇಂದ್ರಗಳು 73 ಇದ್ದು, ಅತಿ ಸೂಕ್ಷ್ಮ ಮತಗಟ್ಟೆ ಕೇಂದ್ರಗಳು 40 ಇದ್ದು, ಒಟ್ಟು 113 ಮತಗಟ್ಟೆ ಕೇಂದ್ರಗಳು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆ ಕೇಂದ್ರಗಳಾಗಿದ್ದು, 146 ಮತಗಟ್ಟೆಗಳು ಸರಳ ಮತಗಟ್ಟೆ ಕೇಂದ್ರಗಳಾಗಿವೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆ ಕೇಂದ್ರಗಳಿಗೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಿದೆ. ಇಂತಹ ಕೇಂದ್ರಗಳಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ಸಹ ನೇಮಿಸಿದ್ದು, ಯಾವುದೇ ಕಾರಣಕ್ಕೂ ಮತದಾನ ಪ್ರಕ್ರಿಯೆಗೆ ತೊಂದರೆಯಾಗದಂತೆ ಜಾಗ್ರತೆ ವಹಿಸಲಾಗಿದೆ ಎಂದರು.
ಚುನಾವಣಾ ಕಾರ್ಯಕ್ಕಾಗಿ ಪಿಆರ್ಒ-299, ಎಪಿಆರ್ಒ-299, ಮೊದಲ ಪಿ.ಒ-299 ಎರಡನೇ ಪಿ.ಒ-299 ಹಾಗೂ ಕಾಯ್ದಿಟ್ಟ ಸಿಬ್ಬಂದಿ-150 ಒಟ್ಟು 1346 ಸಿಬ್ಬಂದಿ ಚುನಾವಣಾ ಕಾರ್ಯದಲ್ಲಿ ನಿರತರಾಗುವರು. ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 24 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಿದ್ದು,ನಿಗದಿ ಪಡಿಸಿದ ಎಲ್ಲಾ ಮತಗಟ್ಟೆ ಕೇಂದ್ರಗಳಿಗೆ ಸೆಕ್ಟರ್ ಅಧಿಕಾರಿಗಳು ಭೇಟಿ ನೀಡಿ ಶಾಂತಿಯುತ ಚುನಾವಣೆಯ ಬಗ್ಗೆ ಗಮನ ನೀಡುವರು. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಮೈಕ್ರೊ ವೀಕ್ಷಕರು ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ವರದಿ ನೀಡಲಿದ್ಧಾರೆ. ಒಟ್ಟಿನಲ್ಲಿ ಮತದಾನ ಶಾಂತಿಯುತವಾಗಿ ನಡೆಯಲು ತಾಲ್ಲೂಕು ಆಡಳಿತ ಎಲ್ಲಾ ರೀತಿಯ ಸೌಲಭ್ಯಗಳನ್ನು ಚುನಾವಣೆಗೆ ನಿಯೋಜನೆಗೊಂಡ ಕರ್ತವ್ಯ ನಿರತ ಸಿಬ್ಬಂದಿಗೆ ನೀಡಿದೆ ಎಂದರು.