ಹರಪನಹಳ್ಳಿ:
ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಲ್ಲದ ಭಾರತೀಯ ಜನತಾ ಪಕ್ಷ ಕೋಮುವಾದ, ಜನರ ಭಾವನೆ ಕೆರಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ಯತ್ನಿಸುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಚುನಾವಣಾ ಉಸ್ತುವಾರಿ ವಿಜಯಕುಮಾರ ಆರೋಪಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ ದಾವಣಗೆರೆ ಲೋಕಸಭಾ ಚುನಾವಣೆ-19ರ ಸಿದ್ಧಾತಾ ಶಿಬಿರದಲ್ಲಿ ಅವರು ಮಾತನಾಡಿದರು.
ಆರ್.ಎಸ್.ಎಸ್. ಹಿಡಿತದಲ್ಲಿರುವ ಬಿಜೆಪಿಗೆ ಯಾವುದೇ ಸಿದ್ಧಾಂತವಿಲ್ಲ. ಸಂವಿಧಾನದ ಬದಲಾವಣೆಯೇ ಆ ಪಕ್ಷದ ಮುಖ್ಯ ಉದ್ದೇಶ. ಸಂವಿಧಾನದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವ ಸಂಸದ ಅನಂತಕುಮಾರ ಹೆಗಡೆ ಅವರ ಈ ಹಿಂದಿನ ಹೇಳಿಕೆಯೇ ಸಾಕ್ಷಿ ಆಗಿದೆ. ಸಂವಿಧಾನ ಬದಲಾವಣೆ ಆದರೆ ದೇಶದ ಮೇಲಾಗುವ ಘೋರ ಪರಿಣಾಮಗಳ ಬಗ್ಗೆ ಜನರಿಗೆ ಅರಿವಾಗಬೇಕಿದೆ’ ಎಂದರು.
ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷ ದೇಶಕ್ಕೆ ಸ್ವತಂತ್ರ ತಂದುಕೊಟ್ಟಿದೆ. ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿ ಕನಸು ಹೊತ್ತು ಸಾಗುತ್ತಿರುವ ಕಾಂಗ್ರೆಸ್ ಪಕ್ಷ ಪ್ರಜಾಪ್ರಭತ್ವದ ತಳಹದಿಯ ಮೇಲೆ ನಂಬಿಕೆ ಇಟ್ಟಿದೆ. ಪುಲ್ವಾಮಾ ಘಟನೆಯನ್ನೇ ಇಟ್ಟುಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳುವ ಆರ್.ಎಸ್.ಎಸ್. ಪ್ರಚಾರಕರಾಗಿದ್ದಾರೆ’ ಎಂದು ಆರೋಪಿಸಿದರು.
ಸೀಟು ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಕಾಂಗ್ರೆಸ್ ವೀರಶೈವ ವಿರೋಧಿಯಲ್ಲ. ನಮ್ಮ ಮೇಲೆ ನಮಗೆ ನಂಬಿಕೆ ಇಲ್ಲದ ಕಾರಣಕ್ಕೆ 2018ರಲ್ಲಿ ಸೋಲು ಅನುಭವಿಸಬೇಕಾಯಿತು. ಮೋದಿ ಅಲೆ ಎಂಬುದು ಶುದ್ಧ ಸುಳ್ಳು. ಹಾಗಿದ್ದರೆ ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಬಿಜೆಪಿ ಸೋಲುತ್ತಿರಲಿಲ್ಲ. ಮೋದಿ ಅಲೆ ಎಂಬುದು ಮಾಧ್ಯಮಗಳ ಸೃಷ್ಟಿ. ಮತ್ತೊಮ್ಮೆ ಮೋದಿ ಬಂದಿದ್ದೇ ಆದಲ್ಲಿ ಸಂವಿಧಾನ ಬದಲಾವಣೆ ಆಗಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಆಗಲಿದೆ’ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್ ಮಾತನಾಡಿ, ಸಹೋದರ ರವೀಂದ್ರ ಅಗಲಿಕೆಯ ದುಃಖದಲ್ಲಿ ಇದ್ದರಿಂದ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಕೆಲಕಾಲ ಹಿನ್ನಡೆ ಆಗಿತ್ತು. ಸದ್ಯ ರವಿ ಯುವಶಕ್ತಿ ಪ್ರೊಜೆಕ್ಟ್ ಮೂಲಕ ತಾಲ್ಲೂಕಿನಾದ್ಯಂತ ಪಕ್ಷದ ಏಳ್ಗೆಗಾಗಿ ಹಿರಿಯರು-ಯುವಕರು ಒಗ್ಗೂಡಿ ಕೆಲಸ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ’ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ ಮಾತನಾಡಿ, `ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಯಾರಿಗೆ ನೀಡಿದರೂ ಎಲ್ಲರೂ ಒಗ್ಗಟ್ಟಿನಿಂದ ಅಭ್ಯರ್ಥಿಗೆ ಗೆಲುವಿಗೆ ಶ್ರಮಿಸುತ್ತೇವೆ. ಎಂ.ಪಿ.ರವೀಂದ್ರರು ತಾಲ್ಲೂಕಿಗೆ 371ಜೆ ಸೌಲಭ್ಯ ಕಲ್ಪಿಸಿರುವುದು ಜನತೆ ಮರೆತಿಲ್ಲ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಕ್ಷೇತ್ರದಲ್ಲಿ 25 ಸಾವಿರಕ್ಕೂ ಹೆಚ್ಚು ಮತಗಳ ಲೀಡ್ ಸಿಗಲಿದೆ’ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಬಿ. ಪರಶುರಾಮಪ್ಪ ಮಾತನಾಡಿ, `ಹರಪನಹಳ್ಳಿ ಕಾಂಗ್ರೆಸ್ಸಿನ ಭದ್ರಕೋಟೆ. ವಿಧಾನಸಭಾ ಚುನಾವಣೆಯಲ್ಲಿ ನಮ್ಮ ನಮ್ಮಲ್ಲಿನ ಕಚ್ಚಾಟವೇ ಬಿಜೆಪಿ ಗೆಲುವಿಗೆ ಕಾರಣವಾಯಿತು. ಪಕ್ಷದ ಪರ ಹಾಗೂ ಭದ್ರವಾಗಿ ನಿಂತು ಕೆಲಸ ಮಾಡಬೇಕಿದೆ. ಬಿಜೆಪಿ ನಾಯಕರು ಭ್ರಷ್ಟಾಚಾರ ಮುಳುಗಿ ಜನರನ್ನೇ ಮರೆತಿದ್ದಾರೆ ಎಂದು ದೂರಿದರು.
ಸಂಪನ್ಮೂಲ ವ್ಯಕ್ತಿಗಳಾದ ಎಚ್.ಎಂ.ರಾಜು, ಮಹಾಬಲೇಶ್ವರ, ಕಾಂಗ್ರೆಸ್ ಮುಖಂಡರಾದ ಎಂ.ವಿ.ಅಂಜೀನಪ್ಪ, ಎಸ್.ಮಂಜುನಾಥ, ಬಿ.ಕೆ.ಪ್ರಕಾಶ್, ತಾಪಂ ಸದಸ್ಯರಾದ ಓ.ರಾಮಣ್ಣ, ಎಚ್.ಚಂದ್ರಪ್ಪ, ಜಾವೇದ್, ರೋಪಸಾಬ್, ಅರುಣ ಕುಮಾರ, ರಾಜಪ್ಪ, ಟಿ.ವೆಂಕಟೇಶ್, ಎಂ.ಟಿ.ಬಸನಗೌಡ, ಡಿ.ಅಬ್ದುಲ್ ರೆಹಮಾನ್, ಎಂ.ಅಜ್ಜಣ್ಣ, ಹಲಗೇರಿ ಮಂಜಪ್ಪ, ಕೆ.ವಿಜಯಲಕ್ಷ್ಮಿ, ಬೀರಪ್ಪ, ನೀಲಗುಂದ ವಾಗೇಶ್, ಮುತ್ತಗಿ ಜಂಬಣ್ಣ, ಎನ್.ಮಜೀದ್, ಇರ್ಫಾನ್ ಮುದಗಲ್ಲ, ಎನ್.ಮೆಹಬೂಬಸಾಬ್, ಕೆಂಚನಗೌಡರ, ಬಸನಗೌಡ, ನಜೀರ್ ಅಹ್ಮದ್, ತಾವರ್ಯಾನಾಯ್ಕ ಇತರರಿದ್ದರು.