ಲೋಕಸಭಾ ಚುನಾವಣೆಯ ನಂತರರಾಜ್ಯದಲ್ಲಿ ಮಧ್ಯಂತರ ಚುನಾವಣೆ : ಲಿಂಬಾವಳಿ

ಬೆಂಗಳೂರು

        ಕರ್ನಾಟಕದ 28 ಲೋಕ಻ಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ 22 ಸೀಟು ಗೆಲ್ಲುತ್ತದೆ.ಕುಮಾರಸ್ವಾಮಿ ನೇತೃತ್ವದ ಮೈತ್ರಿಕೂಟ ಸರ್ಕಾರ ಉರುಳಿ ಮಧ್ಯಂತರ ಚುನಾವಣೆ ನಡೆಯುತ್ತದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದ್ದಾರೆ.

       ಬೆಂಗಳೂರು ಪ್ರೆಸ್ ಕ್ಲಬ್ ಹಾಗೂ ವರದಿಗಾರರ ಕೂಟ ಅಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ದೇಶದಲ್ಲಿ ಮೋದಿ ಸರ್ಕಾರದ ಪರವಾದ ಅಲೆಯಿದೆ.ರಾಜ್ಯದಲ್ಲಿ ಮೈತ್ರಿ ಸರ್ಕಾರದ ವಿರೋಧಿ ಅಲೆಯಿದೆ.ಹೀಗಾಗಿ ನಿಶ್ಚಿತವಾಗಿ ಬಿಜೆಪಿಗೆ ಲಾಭವಾಗಲಿದೆ ಎಂದರು.

        ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಅಭಿವೃದ್ಧಿಗಾಗಿ ಸ್ವಚ್ಚ ಭಾರತ್ ಅಭಿಯಾನದಿಂದ ಹಿಡಿದು ರಾಜ್ಯಗಳನ್ನು ಆರ್ಥಿಕವಾಗಿ ಬಲಪಡಿಸುವ ತನಕ ಹಲವು ಕಾರ್ಯಕ್ರಮಗಳನ್ನು ನೀಡಿದೆ ಎಂದು ಅವರು ಹೇಳಿದರು.

        ಸಹಜವಾಗಿ ಚುನಾವಣೆಗಳಲ್ಲಿ ಸರ್ಕಾರದ ವಿರೋಧಿ ಅಲೆ ಇರುತ್ತದೆ.ಆದರೆ ದೇಶದಲ್ಲಿ ಎರಡನೇ ಬಾರಿ ಸರ್ಕಾರದ ಪರವಾದ ಅಲೆ ಇದೆ.ಮೊದಲ ಬಾರಿ ವಾಜಪೇಯಿ ನೇತೃತ್ವದ ಸರ್ಕಾರಕ್ಕೆ ಜನಪರ ಅಲೆ ಇದ್ದರೂ ಅದನ್ನು ಸದುಪಯೋಗಪಡಿಸಿಕೊಳ್ಳಲು ನಾವು ವಿಫಲರಾಗಿದ್ದೆವು.ಆದರೆ ಈ ಬಾರಿ ಸಫಲರಾಗುತ್ತೇವೆ ಎಂದರು.

            ಬಿಜೆಪಿಯ ಗೆಲುವಿಗೆ ಕುಮಾರಸ್ವಾಮಿ ನೇತೃತ್ವದ ಸರ್ಕಾರವೂ ಕೊಡುಗೆ ಕೊಡುತ್ತಿದೆ.ಯಾಕೆಂದರೆ ಸರ್ಕಾರ ರಚನೆಯಾಗಿ ಇಷ್ಟು ಕಾಲ ಕಳೆದರೂ ಮೈತ್ರಿಕೂಟದ ಅಂಗಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ನಲ್ಲಿ ಕಚ್ಚಾಟ ನಡೆದೇ ಇದೆ ಎಂದರು.

          ಇದರ ಫಲವಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 22 ಸ್ಥಾನಗಳನ್ನು ಗೆಲ್ಲುತ್ತದೆ.ಕುಮಾರಸ್ವಾಮಿ ಸರ್ಕಾರ ಪತನವಾಗಿ ಚುನಾವಣೆ ಎದುರಾಗುತ್ತದೆ ಎಂದು ಹೇಳಿದರು.

            ಒಂದು ವೇಳೆ ಸರ್ಕಾರ ಪತನವಾಗಿ ಚುನಾವಣೆ ನಡೆಯುವ ಸನ್ನಿವೇಶ ಬರದಿದ್ದರೆ ಯಡಿಯೂರಪ್ಪ ಅವರೇ ನಿಶ್ಚಿತವಾಗಿ ಈ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

          ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಿಮ್ಮ ಹಾಗೂ ಅಶೋಕ್ ಅವರ ನಡುವೆ ಪೈಪೋಟಿ ನಡೆದಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ತರಬೇಕು?ಅನ್ನುವುದಕ್ಕೂ ಒಂದು ಪ್ರಕ್ರಿಯೆ ನಡೆಯಬೇಕಾಗುತ್ತದೆ.ಈಗಾಗಲೇ ಅದು ನಡೆಯಬೇಕಾಗಿತ್ತು.ಆದರೆ ಚುನಾವಣೆಯ ಕಾರಣದಿಂದ ನಡೆದಿಲ್ಲ ಎಂದರು.

         ಆದರೆ ಅದು ಇನ್ನೂ ದೂರದ ಮಾತು.ಯಡಿಯೂರಪ್ಪ ಅವರೇ ನಮ್ಮ ನಾಯಕರು.ಹಾಗೊಂದು ವೇಳೆ ಲೋಕಸಭಾ ಚುನಾವಣೆಯ ನಂತರ ಸರ್ಕಾರ ಪತನವಾಗಿ ಬಿಜೆಪಿ ಅಧಿಕಾರ ಹಿಡಿದರೆ ಯಡಿಯೂರಪ್ಪ ಸಿಎಂ ಆಗುತ್ತಾರೆ.ಆಗ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ತರಬೇಕು?ಎಂಬ ಪ್ರಶ್ನೆ ಉದ್ಭವವಾಗುತ್ತದೆ.ಮತ್ತದನ್ನು ವರಿಷ್ಟರು ನೋಡಿಕೊಳ್ಳುತ್ತಾರೆ ಎಂದರು.

         ಮಂಡ್ಯದಲ್ಲಿ ಶ್ರೀಮತಿ ಸುಮಲತಾ ಅವರು ಬಿಜೆಪಿಯ ಅಧಿಕೃತ ಅಭ್ಯರ್ಥಿಯಲ್ಲ.ಬದಲಿಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿ.ಅವರು ಈ ಮುಂಚೆ ಮೂರೂ ಪಕ್ಷಗಳ ಬೆಂಬಲವನ್ನು ಕೋರಿದ್ದರು.ಆಗ ಕಾಂಗ್ರೆಸ್ ಮತ್ತು ಜೆಡಿಎಸ್ ಅವರನ್ನು ಬೆಂಬಲಿಸಿದ್ದರೆ ಅವುಗಳ ಗೌರವ ಉಳಿಯುತ್ತಿತ್ತು ಎಂದರು.

        ಸುಮಲತಾ ಅವರ ವಿಷಯದಲ್ಲಿ ಕಾಳಜಿ ತೋರುವ ಬಿಜೆಪಿ ದಿವಂಗತ ಅನಂತಕುಮಾರ್ ಅವರ ಪತ್ನಿಗೆ ಟಿಕೆಟ್ ನೀಡದೆ ತಪ್ಪಾಗಿ ನಡೆದುಕೊಂಡಿದೆ ಎಂಬ ಮಾತಿಗೆ ಉತ್ತರಿಸಿದ ಅವರು,ಸುಮಲತಾ ಅವರು ಹೊರಗಿನ ಅಭ್ಯರ್ಥಿ.ಆದರೆ ತೇಜಸ್ವಿನಿ ಅನಂತಕುಮಾರ್ ಅವರದು ಪಕ್ಷದೊಳಗಿನ ಘಟನೆ ಎಂದರು.

       ಪಕ್ಷದಲ್ಲಿ ವಂಶಪಾರಂಪರ್ಯ ರಾಜಕಾರಣ ಬೇಡ ಎಂಬ ಮಾತು ದಿನಕಳೆದಂತೆ ಪ್ರಖರವಾಗುತ್ತಿದೆ.ಅಡ್ವಾಣಿಯವರಂತಹ ಹಿರಿಯ ನಾಯಕ ಚುನಾವಣೆಯಲ್ಲಿ ನಿಲ್ಲಬಾರದು ಎಂದಾದಾಗ ಅವರ ಮಗಳಿಗೆ ಟಿಕೆಟ್ ಕೊಡಲು ಪಕ್ಷ ಬಯಸಿತು.ಆದರೆ ಅಡ್ವಾಣಿಯವರು ಬೇಡ ಎಂದು ಹೇಳಿದರು.

       ನಮ್ಮ ಪಕ್ಷ ಕಾರ್ಯಕರ್ತರಿಂದ ಬೆಳೆದ ಪಕ್ಷ.ಇಲ್ಲಿ ವಂಶಪಾರಂಪರ್ಯ ರಾಜಕಾರಣ ಬೇಡ ಎಂಬುದು ಅವರ ಧೋರಣೆಯಾಗಿತ್ತು.ಅಂತಹ ಧೋರಣೆಯ ಫಲಶೃತಿಗಳಲ್ಲಿ ತೇಜಸ್ವಿನಿ ಅನಂತಕುಮಾರ್ ಅವರ ಪ್ರಕರಣವೂ ಒಂದು ಎಂದ ಅವರು,ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಹೇಳಿದರು.

        ಮೋದಿ,ಮೋದಿ,ಮೋದಿ ಎಂದು ಕೂಗು ಕೇಳುವುದು ಹಿಟ್ಲರ್ ನ ನಾಜಿ ಸಂಸ್ಕೃತಿಯ ಪ್ರತಿಬಿಂಬವಲ್ಲವೇ?ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,ನಿಶ್ಚಿತವಾಗಿ ನಮ್ಮ ನಾಯಕರು ನರೇಂದ್ರಮೋದಿ.ಅವರ ಪರವಾಗಿ ಕೂಗೆದ್ದರೆ ಅದರಲ್ಲಿ ನಾಜಿಜಂ ಏನಿದೆ?ಎಂದು ಪ್ರಶ್ನಿಸಿದರು.

        ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಆರು ಕೋಟಿ ಕುಟುಂಬಗಳಿಗೆ ಉಜ್ವಲ ಯೋಜನೆಯಡಿ ಗ್ಯಾಸ್ ನೀಡಿದೆ.ಹಾಗೆಯೇ ಜನಧನ್ ನಿಂದ ಹಿಡಿದು ಹಲವು ಮಹತ್ವದ ಕಾರ್ಯಕ್ರಮಗಳನ್ನು ನೀಡಿದೆ.ಕರ್ನಾಟಕಕ್ಕೆ ಹಿಂದಿನ ಹಣಕಾಸು ಆಯೋಗಕ್ಕಿಂತ ಹೆಚ್ಚು ಹಣ ನೀಡಿದೆ ಎಂದು ಅವರು ಹೇಳಿದರು.

       ಕಾರ್ಯಕ್ರಮದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಸದಾಶಿವಶೆಣೈ,ಪ್ರಧಾನ ಕಾರ್ಯದರ್ಶಿ ಕಿರಣ್,ವರದಿಗಾರರ ಕೂಟದ ಉಪಾಧ್ಯಕ್ಷ ಆರ್.ಟಿ.ವಿಠ್ಠಲಮೂರ್ತಿ,ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap