ತುಮಕೂರು

ಲಾರಿ ಮಾಲೀಕರುಗಳ ಮೇಲೆ ಖಾಸಗಿ ಹಣಕಾಸು ಸಂಸ್ಥೆಗಳು ಕಳೆದ ಆರೇಳು ತಿಂಗಳುಗಳಿಂದ ನಿರಂತರವಾಗಿ ಕಿರುಕುಳ ಮತ್ತು ದೌರ್ಜನ್ಯ ನಡೆಸುತ್ತಿದ್ದು, ಲಾರಿ ಮಾಲೀಕರುಗಳಿಗೆ ದಯಾಮರಣಕ್ಕೆ ಅವಕಾಶ ನೀಡಬೇಕೆಂದು ಲಾರಿ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್‍ರಾವ್ ಮನವಿ ಮಾಡಿದರು.
ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಉಂಟಾದ ಅತಿವೃಷ್ಠಿ ಮತ್ತು ಆರ್ಥಿಕ ಕುಸಿತದ ಕಾರಣ ಲಾರಿಗಳ ಸರಕು ಸಾಗಾಣೆ ವಹಿವಾಟಕ್ಕೆ ಭಾರಿ ಹೊಡೆತ ಬಿದ್ದಿದೆ. ಪರಿಣಾಮ ಲಾರಿ ಮಾಲೀಕರುಗಳು ವ್ಯವಹಾರಿಕವಾಗಿ ಸಂಕಷ್ಠಕ್ಕೀಡಾಗಿದ್ದು, ವ್ಯಾಪಾರ ವಹಿವಾಟು ಇಲ್ಲದೆ ಹಣಕಾಸು ಸಂಸ್ಥೆಗಳ ಸಾಲ ಮರುಪಾವತಿ ಹಣ ಪಾವತಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಒಂದೊಂದೆ ಕಂತಿನ ಹಣಕ್ಕಾಗಿ ಏಜೆನ್ಸಿಗಳು ರೌಡಿಗಳ ಮೂಲಕ ಸಾಲ ವಸೂಲಾತಿ ನೆಪದಲ್ಲಿ ಕಿರುಕುಳ ನೀಡಲಾಗುತ್ತಿವೆ.
ದಬ್ಬಾಳಿಕೆ ಮೂಲಕ ಲಾರಿಗಳನ್ನು ಮುಟ್ಟುಗೋಲು ಹಾಕಿಕೊಂಡು ಬ್ಲಾಕ್‍ಮೇಲ್ ಮಾಡಿ ಹಣ ಕಟ್ಟಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಒಂದೊಂದೆ ತಿಂಗಳ ಸಾಲ ಬಾಕಿ ಉಳಿಸಿಕೊಂಡಿರುವ ಲಾರಿ ಮಾಲೀಕರು ಹಣ ಕಟ್ಟದಿದ್ದರೆ ಲಾರಿ ವಶಕ್ಕೆ ಪಡೆದು ಬೇಕಾಬಿಟ್ಟಿ ಬೆಲೆಗೆ ಮಾರಾಟ ಮಾಡಿ ಸಾಲ ಪಾವತಿ ಮಾಡಿಕೊಳ್ಳುತ್ತಿದ್ದಾರೆ. ಸ್ವ ಉದ್ಯೋಗಿಗಳಾಗಿರುವ ಲಾರಿ ಮಾಲೀಕರು ಸ್ವಂತ ಬಂಡವಾಳ ಹೂಡಿ ಖಾಸಗಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಈವರೆಗೆ ಸಕಾಲಕ್ಕೆ ಸರಿಯಾಗಿ ಸಾಲದ ಹಣ ಪಾವತಿಸಿಕೊಂಡು ಬರಲಾಗಿದ್ದರೂ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದರು.
ಆರ್ಥಿಕ ಸಂಕಷ್ಟದ ನಡುವೆ ಹಣ ಕಟ್ಟಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿಯೂ ಹಣಕಾಸು ಸಂಸ್ಥೆಗಳು ಕಿರುಕುಳ ನೀಡುತ್ತಿದ್ದು, ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಸಾಲ ಮರುಪಾವತಿಗಾಗಿ ಮನೆಯಲ್ಲಿನ ಚಿನ್ನಾಭರಣ ಅಥವಾ ಮನೆಯನ್ನೇ ಅಡವಿಡುವ ಸ್ಥಿತಿ ಬಂದಿದೆ. ಖಾಸಗಿ ಹಣಕಾಸು ಸಂಸ್ಥೆಗಳ ಕಿರುಕುಳದಿಂದ ಬೇಸತ್ತಿರುವ ಮಾಲೀಕರು ನೆಮ್ಮದಿ ಹಾಗೂ ಗೌರವಯುತ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಇದರಿಂದಾಗಿ ಮಾಲೀಕರುಗಳು ಮಾನಸಿಕ ಮತ್ತು ಕೌಟುಂಬಿಕ ನೆಮ್ಮದಿ ಕಳೆದುಕೊಳ್ಳುವಂತಾಗಿದೆ, ದೌರ್ಜನ್ಯಯುತ ಮತ್ತು ಬಲ ವಂತವಾಗಿ ಸಾಲ ವಸೂಲಾತಿ ಮಾಡುವುದನ್ನು ಕೈಬಿಡದೆ ಹೋದರೆ ಲಾರಿ ಮಾಲೀಕರು ಬದುಕುವುದಕ್ಕೇ ಸಾಧ್ಯವಾಗಲಿದೆ. ಮಾಲೀಕರುಗಳ ಕುಟುಂಬ ಬೀದಿಗೆ ಬೀಳುವ ಪರಿಸ್ಥಿತಿ ಬಂದಿದೆ. ಹಾಗಾಗಿ ದಯಾಮರಣ ಕೊಡಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು.
ಹತ್ತು ಲಾರಿಗಳನ್ನು ಇಟ್ಟುಕೊಂಡು ಜೀವನ ಮಾಡುವವರಿಗೆ ಒಂದು ಲಾರಿ ನಿಂತುಕೊಂಡರೆ ಸಮಸ್ಯೆಯಾಗುವುದಿಲ್ಲ. ಬದಲಾಗಿ ಕೇವಲ ಒಂದು ಲಾರಿಯನ್ನು ಇಟ್ಟುಕೊಂಡು ಜೀವನ ಮಾಡುವವನ ಸ್ಥಿತಿ ಏನಾಗಬೇಕು. ಖಾಸಗಿ ಫೈನಾನ್ಸ್ ಕಂಪನಿಗಳಿಂದ ಸಾಲ ಪಡೆದು ಲಾರಿಯನ್ನು ಕೊಂಡುಕೊಳ್ಳುವಾಗ ಅವರಿಗೆ ನೀಡಲಾದ ದಾಖಲೆಗಳ ಪ್ರಕಾರ ಅವರು ಲಾರಿಯನ್ನು ಜಫ್ತಿ ಮಾಡಿಕೊಳ್ಳಲಿ. ಆದರೆ ಜಪ್ತಿ ಮಾಡುವ ಮುನ್ನ ನೋಟೀಸ್‍ಗಳನ್ನು ನೀಡಬೇಕು. ಅದಕ್ಕೆ ನಾವು ಯಾವುದೇ ರೀತಿ ಉತ್ತರ ನೀಡದ ಪಕ್ಷದಲ್ಲಿ ಏಕಾಏಕಿ ಲಾರಿಯನ್ನು ಜಫ್ತಿ ಮಾಡಿಕೊಳ್ಳಲಿ ಆದರೆ ಇಲ್ಲಿ ಆ ಕೆಲಸ ಆಗುತ್ತಿಲ್ಲ ಎಂದರು.
ಇಂದು ಸ್ವಯಂ ಉದ್ಯೋಗಿಗಳಾಗಿ ಮಾಲೀಕರು ಹಾಗೂ ಚಾಲಕರುಗಳಾಗಿರುವ ನಾಮ್ಮಿಂದ 29 ಕುಟಂಬಸ್ಥರು ಜೀವನ ನಡೆಸುತ್ತಿದ್ದಾರೆ. ಹಮಾಲಿಗಳಾಗಿರಬಹುದು, ರೈತರು ಆಗಿರಬಹುದು ಹೀಗೆ ಹಲವು ಕುಟುಂಬಗಳು ನಮ್ಮ ಲಾರಿಗಳಿಂದ ಜೀವನ ಸಾಗಿಸುತ್ತಿದ್ದಾರೆ. ಆದರೆ ಇಂದು ನಾವು ರೈತರ ನಂತರ ಅವರಕ್ಕಿಂತ ಹೆಚ್ಚಾಗಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದೇವೆ. ಇದನ್ನು ತಪ್ಪಿಸಲು ಸರ್ಕಾರಗಳು ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ದಯಾ ಮರಣಕ್ಕೆ ಅನಮತಿ ನೀಡಬೇಕು ಎಂದು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ತುಮಕೂರು ನಗರ ಮತ್ತು ತಾಲ್ಲೂಕುಗಳ ಲಾರಿ ಮಾಲೀಕರ ಸಂಘದ ಜಿಲ್ಲಾ ಅಧ್ಯಕ್ಷ ಆರ್.ಅಬ್ದುಲ್ ಖಾದರ್, ಉಪಾಧ್ಯಕ್ಷ ಬಾಬಜಾನ್, ಕಾರ್ಯದರ್ಶಿ ಕೃಷ್ಣಮೂರ್ತಿ, ಖಜಾಂಚಿ ಎಂ.ಡಿ. ಅಲ್ತಾಫ್ ಪಾಷ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
