ದಾವಣಗೆರೆ
ಲೋಕಸಭಾ ಚುನಾವಣೆಗಾಗಿ ಅಧಿಸೂಚನೆ ಘೋಷಿಸುವ ಮುನ್ನವೇ, ಬೆಣ್ಣೆನಗರಿ ದಾವಣಗೆರೆಯ ಕಾಂಗ್ರೆಸ್ ಪಾಳೆಯದಲ್ಲಿ ಲಿಂಗಾಯತ ಮತ್ತು ಅಹಿಂದ ಸಮುದಾಯಗಳು ಟಿಕೇಟ್‍ಗಾಗಿ ಪರಸ್ಪರ ಪೈಪೋಟಿ ನಡೆಸಲು ಮುಂದಾಗಿವೆ.ದಾವಣಗೆರೆಯು ಚಿತ್ರದುರ್ಗ ಜಿಲ್ಲೆಯಲ್ಲಿದ್ದಾಗ ರಾಜಕೀಯವಾಗಿ ಇಲ್ಲಿ ಕುರುಬ ಸಮುದಾಯದ ಪ್ರಾಬಲ್ಯ ಹೆಚ್ಚಿತ್ತು. 1984, 1889 ಮತ್ತು 1991ರ ಲೋಕಸಭಾ ಚುನಾವನೆಯಲ್ಲಿ ಕುರುಬ ಸಮುದಾಯದ ಗುರುಗಳೆಂದೇ ಖ್ಯಾತರಾಗಿರುವ ಚನ್ನಯ್ಯ ಒಡೆಯರ್ ಅವರು ಅಹಿಂದ ನಾಯಕರಾಗಿಯೂ ಲೋಕಸಭೆಗೆ ಸತತವಾಗಿ ಮೂರು ಬಾರೀ ಆರಿಸಿ ಬಂದಿದ್ದರು.
ಆದರೆ, ಚನ್ನಯ್ಯ ಒಡೆಯರ್ ಅವರನ್ನು ಹೇಗಾದರೂ ಮಾಡಿ ರಾಜಕೀಯವಾಗಿ ತುಳಿಯಬೇಕೆಂಬ ಕೆಲವರ ಷಡ್ಯಂತ್ರದಿಂದಾಗಿ ಅನಿರೀಕ್ಷಿತವಾಗಿ ಭೀಮಸಮುದ್ರದ ಜಿ.ಮಲ್ಲಿಕಾರ್ಜುನಪ್ಪನವರು ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಅಣಿ ಇಟ್ಟಾಗಿನಿಂದ ಹಾಗೂ ಶಾಮನೂರು ಶಿವಶಂಕರಪ್ಪನವರು ಸಕ್ರಿಯ ರಾಜಕಾರಣಕ್ಕೆ ಪ್ರವೇಶ ಮಾಡಿದ ನಂತರ ಲಿಂಗಾಯತ ಸಮುದಾಯವು ರಾಜಕೀಯ ಪ್ರಾಬಲ್ಯವನ್ನು ಸಾಧಿಸಿಕೊಂಡು ಬಂದಿದೆ.
ಲೋಕಸಭಾ ಚುನಾವಣೆಯಲ್ಲಿ 1998ರಿಂದ ಈಚೆಗೆ ಕಾಂಗ್ರೆಸ್ ಪಕ್ಷವು ಲಿಂಗಾಯತ ಸಮುದಾಯದ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಟಿಕೇಟ್ ನೀಡುತ್ತಾ ಬಂದಿದ್ದು, 1998ರ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ವಿಜಯಿಯಾಗಿದ್ದರೆ, 1999ರ ಚುನಾವಣೆಯಲ್ಲಿ ಸೋಲುಂಡಿದ್ದರು. ಇನ್ನುಳಿಂದತೆ, ಮೂರು ಬಾರಿ ಕಾಂಗ್ರೆಸ್‍ನಿಂದ ಟಿಕೇಟ್ ಪಡೆದಿದ್ದ ಎಸ್.ಎಸ್.ಮಲ್ಲಿಕಾರ್ಜುನ್ ಮೂರು ಚುನಾವಣೆಯಲ್ಲೂ ಪರಾಭಾವಗೊಂಡಿದ್ದಾರೆ.
ಅಲ್ಲದೇ, ಕಳೆದ ವಿಧಾನಸಭಾ ಚುನಾವಣೆಯಲ್ಲೂ ಸೋತಿರುವ ಎಸ್ಸೆಸ್ಸೆಂ ಲೋಕಸಭೆ ಚುನಾವಣೆ ಆಡುವ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ ಪ್ರಕಟಿಸಿಲ್ಲ. ಕುರುಬ ಸಮುದಾಯದ ಗುರುಗಳೆಂದೇ ಪ್ರಖ್ಯಾತರಾಗಿರುವ ಚನ್ನಯ್ಯ ಒಡೆಯರ್ ಅವರು ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಮೂರು ಬಾರಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು. ಇವರ ಈ ಸತತ ಗೆಲುವಿಗೆ ಜಿಲ್ಲೆಯಲ್ಲಿರುವ ಅಹಿಂದ ಸಮುದಾಯದ ಮತಗಳೇ ಕಾರಣ. ಆದ್ದರಿಂದ ಕಾಂಗ್ರೆಸ್‍ನಿಂದ ಕೈಬಿಟ್ಟು ಹೋಗಿರುವ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಮತ್ತೇ ಕಾಂಗ್ರೆಸ್ ಬಾವುಟ ಹಾರಿಸಬೇಕಾದರೆ, ಅಹಿಂದ ಸಮುದಾಯಕ್ಕೆ ಈ ಬಾರಿ ಕಾಂಗ್ರೆಸ್ ಟಿಕೇಟ್ ನೀಡಬೇಕೆಂದು ವೈರಿಷ್ಠರನ್ನು ಜಿಲ್ಲೆಯ ಅಹಿಂದ ಮುಖಂಡರು ಒತ್ತಾಯಿಸಿದ್ದಾರೆ.
ಇದಕ್ಕೆ ಪುಷ್ಟಿಕರೀಸುವಂತೆ ಮೊನ್ನೆ ತಾನೇ ಜಿಲ್ಲೆಯ ಚನ್ನಗಿರಿಗೆ ಭೇಟಿ ನೀಡಿದ್ದ, ಅಹಿಂದ ಚಳವಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಹಾಲಿ ವಿಧಾನ ಪರಿಷತ್ ಸದಸ್ಯ ಹೆಚ್.ಎಂ.ರೇವಣ್ಣನವರು ಶಾಮನೂರು ಕುಟುಂಬದಿಂದ ಯಾರೂ ಸ್ಪರ್ಧಿಸದಿದ್ದರೆ ಹಾಗೂ ಹೈಕಮಾಂಡ್ ಟಿಕೇಟ್ ನೀಡಿದರೆ, ದಾವಣಗೆರೆಯಿಂದ ಕಣಕ್ಕಿಳಿಯಲು ಸಿದ್ಧನಿದ್ದೇನೆಂದು ಘೋಷಿಸಿ ಹೋಗಿದ್ದಾರೆ.
ಅಲ್ಲದೆ, ಜಿಲ್ಲೆಯ ಅಹಿಂದ ಮುಖಂಡರು ಗುರುವಾರ ತಾನೇ ಪತ್ರಿಕಾಗೋಷ್ಠಿ ನಡೆಸಿ, ಕಾಂಗ್ರೆಸ್‍ಗೆ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ) ಮತಗಳೇ ಭದ್ರಬುನಾದಿಯಾಗಿವೆ. ಕಳೆದ ಮೂರ್ನಾಲ್ಕು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರಾಭವಗೊಳ್ಳಲು ಪಕ್ಷ ಲಿಂಗಾಯತ ಸಮುದಾಯಕ್ಕೆ ಟಿಕೇಟ್ ನೀಡಿರುವುದೇ ಪ್ರಮುಖ ಕಾರಣವಾಗಿದೆ. ಆದ್ದರಿಂದ ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ಸ್ಥಳೀಯವಾಗಿ ಗುರುತಿಸಿಕೊಂಡಿರುವ ಅಹಿಂದ ಮುಖಂಡ, ಬಯಲುಸೀಮೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆಂಗೋ ಹನುಮಂತಪ್ಪನವರಿಗೆ ಕಾಂಗ್ರೆಸ್ ಟಿಕೇಟ್ ನೀಡಬೇಕೆಂದು ಆಗ್ರಹಿಸಿದ್ದಾರೆ.
ಇನ್ನೂ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರ ಪ್ರಕಟಿಸದಿದ್ದರೂ, ಇತ್ತೀಚೆಗೆ ಅವರ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ರೇಣುಕಾಮಂದಿರದಲ್ಲಿ ಸಭೆ ಸೇರಿ, ಎಸ್ಸೆಸ್ಸೆಂ ಮನೆಯ ವರೆಗೂ ಪಾದಯಾತ್ರೆ ನಡೆಸಿ, ನೀವೇ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕೆಂದು ಮನವೋಲಿಸಲು ಪ್ರಯತ್ನಿಸಿದ್ದರು.
ಆದರೆ, ಕಾರ್ಯಕರ್ತರ, ಅಭಿಮಾನಿಗಳ ಒತ್ತಡಕ್ಕೆ ಮಣಿಯದ ಮಲ್ಲಿಕಾರ್ಜುನ್, ಹಿಂದೆ ನನ್ನ ಜೊತೆಯಲ್ಲಿದ್ದುಕೊಂಡು ಚೂರಿ ಹಾಕಿದ್ದಾರೆ.
ಹೀಗಾಗಿ ಚುನಾವಣೆಗೆ ನಿಲ್ಲುವ ಬಗ್ಗೆ ಈಗಲೇ ಯಾವುದೇ ನಿರ್ಧಾರ ಕೈಗೊಳ್ಳಲ್ಲ. ಈ ಬಗ್ಗೆ ಬೂತ್ ಮಟ್ಟದ ಕಾರ್ಯಕರ್ತರಿಂದ ಹಿಡಿದು, ಹೈಕಮಾಂಡ್ ವರೆಗೂ ಚರ್ಚಿಸಿ ನಂತರ ನಿರ್ಧರಿಸುವುದಾಗಿ ಅಡ್ಡ ಗೋಡೆಮೇಲೆ ದೀಪ ಇಟ್ಟಿರುವುದು ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಅಲ್ಲದೆ, ನಿನ್ನೆಯಷ್ಟೇ ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರು ಹೆಚ್.ಎಂ.ರೇವಣ್ಣವಲ್ಲ ಕ್ಷೇತ್ರದಿಂದ ಯಾರೇ ಕಾಂಗ್ರೆಸ್ ಅಭ್ಯರ್ಥಿಯಾದರೂ ಅವರಿಗೆ ಬೆಂಬಲ ನೀಡುತ್ತೇನೆ. ಅಕಸ್ಮಾತ್ ಹೈಕಮಾಂಡ್ ಲೋಕಸಭೆಗೆ ಸ್ಪರ್ಧಿಸುವಂತೆ ಮನೆ ಬಾಗಿಲಿಗೆ ಟಿಕೇಟ್ ಕಳಿಸಿದರೆ, ನಾನೂ ಸಹ ಅಖಾಡಕ್ಕೆ ಇಳಿಯುದಾಗಿ ಪ್ರಕಟಿಸಿದ್ದಾರೆ.
ಹೀಗೆ ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತ ಮತ್ತು ಅಹಿಂದ ಸಮುದಾಯದ ಮಧ್ಯೆ ಟಿಕೇಟ್‍ಗಾಗಿ ಪರಸ್ಪರ ಪೈಪೋಟಿ ನಡೆಯುತ್ತಿದ್ದು, ಕಾಂಗ್ರೆಸ್ ಹೈಕಮಾಂಡ್ ಯಾವ ಸಮುದಾಯಕ್ಕೆ ಮಣೆ ಹಾಕಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








