ದಾವಣಗೆರೆ:
ಬರುವ ಲೋಕಸಭಾ ಚುನಾವಣೆಯಲ್ಲಿಯೂ ದಾವಣಗೆರೆ ಕ್ಷೇತ್ರ ಮತ್ತೆ ಬಿಜೆಪಿ ವಶವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ನಗರದ ಅರುಣ ಚಿತ್ರಮಂದಿರ ಬಳಿಯ ಬಿಜೆಪಿ ಲೋಕಸಭಾ ಚುನಾವಣಾ ಕಚೇರಿಯಲ್ಲಿ ಗುರುವಾರ ‘ಮೇರಾ ಬೂತ್ ಸಬ್‍ಸೇ ಮಜ್‍ಬೂತ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬರುವ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 2009 ಮತ್ತು 2014 ಚುನಾವಣೆಗಳಲ್ಲಿ ಪಡೆದ ಮತಗಳಿಕೆಗಿಂತಲೂ ಅಧಿಕ ಮತಗಳಿಂದ ಜಯಬೇರಿ ಬಾರಿಸಲಿದ್ದಾರೆಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಬಿಜೆಪಿ ಎಷ್ಟು ಸ್ಥಾನ ಪಡೆಯಬೇಕೆಂಬ ವಿಚಾರದಲ್ಲಿ, ಚುನಾವಣಾ ಚಾಣಾಕ್ಷ ಅಮಿತ್ ಷಾ ಕೆಲಸ ಮಾಡುತ್ತಿದ್ದು, ಅದೇರೀತಿ ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ ಎಂದ ಅವರು, ಜಿಲ್ಲೆಯಲ್ಲಿ ಹಿರಿಯ ಮುಖಂಡರು ತಾವು ಮಾಡಬೇಕಾದ ಕೆಲಸವನ್ನು ಮಾಡಿಕೊಳ್ಳುತ್ತಾರೆ. ಆದರೆ, ಕಾರ್ಯಕರ್ತರಾದ ನೀವು ನಿಮ್ಮ ಬೂತ್ ಬಲಿಷ್ಠ ಮಾಡಿಕೊಳ್ಳುವುದರ ಕಡೆಗೆ ಗಮನ ಹರಿಸಬೇಕೆಂದು ಕರೆ ನೀಡಿದರು.
ಡಿಸೆಂಬರ್‍ಗೂ ಮುನ್ನ ಪಕ್ಷಕ್ಕೆ ಅಂತಹ ಕೇಳಿಕೊಳ್ಳುವಂತಹ ವಾತಾವರಣ ಇರಲಿಲ್ಲ ಎಂಬ ಕಾರಣಕ್ಕೆ ್ಮ ಪಕ್ಷದ ಮುಖಂಡರಲ್ಲಿ ಸ್ವಲ್ಪ ಮಟ್ಟಿಗೆಯ ಆತಂಕವಿತ್ತು. ಆದರೆ, ನಂತರ ದಿನಗಳಲ್ಲಿ ದೇಶದಲ್ಲಿ ಬಿಜೆಪಿಯತ್ತ ಜನರು ಒಲವು ತೋರಿಸುತ್ತಿದ್ದು, ಇದಕ್ಕೆ ಬಿಜೆಪಿಯತ್ತ ಹೊಸ ಪಕ್ಷಗಳು ಸೇರಿ ಬಲ ವೃದ್ಧಿಸುತ್ತಿರುವುದು, ಮೋದಿ ವಿರುದ್ಧ ಯಾರು? ಎಂಬ ಪ್ರಶ್ನೆ ಮೂಡಿರುವುದು, ಮಹಾಘಟಬಂದನ್‍ನಿಂದ ಒಂದೊಂದೇ ಪಕ್ಷಗಳು ಹೊರಬರುತ್ತಿರುವುದು, ಪಿಯೊಷ್ ಗೋಯಲ್ ಮಂಡಿಸಿದ ಸರ್ವವ್ಯಾಪಿ; ಸರ್ವಸ್ಪರ್ಶ ಬಜೆಟ್ ಹಾಗೂ ಆಯುಷ್ಮಾನ್ ಭಾರತ್ ಯೋಜನೆಯಿಂದ ಬಡವರಿಗೆ ಆಗುವ ಉಪಯೋಗ. ಈ ಐದು ಅಂಶಗಳು ಕಾರಣವಾಗಿವೆ ಎಂದು ವಿಶ್ಲೇಷಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಕಳೆದ ನಾಲ್ಕುವರೆ ವರ್ಷದ ಆಡಳಿತಾವಧಿಯಲ್ಲಿ ಉಜ್ವಲ್, ಜನೌಷಧಿ ಕೇಂದ್ರ, ಕಡಿಮೆ ದರದಲ್ಲಿ ಹೃದಯಕ್ಕೆ ಸ್ಟಂಟ್ ಅಳವಡಿಕೆ, ಕಪ್ಪು ಹಣಕ್ಕೆ ಕಡಿವಾಣ, ಸರ್ಜಿಕಲ್ ಸ್ಟ್ರೈಕ್ ಸೇರಿದಂತೆ ಹಲವು ಜನಪರ ಯೋಜನೆಗಳು ಜಾರಿಗೆ ಬಂದಿವೆ ಎಂದರು.
ನಾವು ಕಳೆದ ಎರಡುವರೆ ತಿಂಗಳಿನಿಂದ ಲೋಕಸಭಾ ಚುನಾವಣಾ ತಯಾರಿ ನಡೆಸುತ್ತಿದ್ದೇವೆ. ನಮ್ಮದು ಜನರೊಂದಿಗೆ ಇರುವ ಪಕ್ಷವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದ ಯೋಜನೆಗಳು ಜನರಿಗೆ ತಲುಪಿಸಲು ‘ಮೇರಾ ಪರಿವಾರ್ ಬಿಜೆಪಿ ಪರಿವಾರ್’, ಕಮಲ್ ಜ್ಯೋತಿ ಕಾರ್ಯಕ್ರಮ ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳನ್ನು ಪಕ್ಷ ಹಾಕಿಕೊಂಡಿದೆ ಎಂದು ಮಾಹಿತಿ ನೀಡಿದರು.
ಮತಗಟ್ಟೆ ಗೆಲ್ಲುವರು ಚುನಾವಣೆ ಗೆದ್ದಂತೆ ಎಂಬ ಘೋಷವಾಕ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರು ಸಂದೇಶದ ಮೂಲಕ ಕಾರ್ಯಕರ್ತರಿಗೆ ರವಾನಿಸಿದ್ದಾರೆ.
ಈ ಹಿನ್ನಲೆಯಲ್ಲಿ ದೇಶದ ಒಂದು ಕೋಟಿ ಕಾರ್ಯಕರ್ತರೊಂದಿಗೆ ಜನರು ಮಾತನಾಡುತ್ತಿದ್ದಾರೆ. ಹೀಗಾಗಿ ಕಾರ್ಯಕರ್ತರು ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ಮುಖಂಡರಾದ ಹೆಚ್.ಎನ್. ಶಿವಕುಮಾರ್, ರಾಜನಹಳ್ಳಿ ಶಿವಕುಮಾರ್, ಪಿ.ಸಿ.ಶ್ರೀನಿವಾಸ್, ಎಲ್.ಡಿ.ಗೋಣೆಪ್ಪ, ಜಯಮ್ಮ, ಸುಧಾ ಜಯರುದ್ರೇಶ್, ಕೆ.ಹೇಮಂತಕುಮಾರ್, ಅಣಬೇರು ಜೀವನಮೂರ್ತಿ, ಮೆಳ್ಳಕಟ್ಟೆ ನಾಗರಾಜ್, ಸೋಗಿ ಶಾಂತಕುಮಾರ್, ಕೆ.ಹೇಮಂತಕುಮಾರ್, ಟಿಪ್ಪು ಸುಲ್ತಾನ್ ಮತ್ತಿತರರು ಉಪಸ್ಥಿತರಿದ್ದರು.